

ಒಂದು ದಿನ ಕಳ್ಳನೊಬ್ಬ ಕಳವು ಮಾಡಲೆಂದು ಮನೆಯೊಂದಕ್ಕೆ ಬಂದ. ದೀಪ ಆರಿದ ಮೇಲೆ ತನ್ನ ಕೆಲಸಕ್ಕೆ ತೊಡಗೋಣವೆಂದು ಹೊರಗೆ ಕಾದು ಕುಳಿತ. ಒಳಗೆ ಸಂಭಾಷಣೆ ನಡೆಯುತ್ತಿರುವುದು ಕಿವಿಗೆ ಬಿತ್ತು. ಅದು ತಾಯಿ ಮತ್ತು ಮಗನ ನಡುವಿನದಾಗಿತ್ತು. ‘ಅಮ್ಮಾ ನಾಳೆ ನಾನು ಬೆಳಿಗ್ಗೆ ಬೇಗ ಹೊರಡುತ್ತೇನೆ. ನನ್ನ ಪಾಲಿನ ಮತ್ತು ಮಣ್ಣಿನ ಪಾಲಿನ ಬುತ್ತಿ ಕಟ್ಟಿಕೊಡು’ ಎಂದು ಮಗ ಹೇಳಿದಾಗ ತಾಯಿ, ‘ಹಾಗೇ ಆಗಲಪ್ಪ’ ಎಂದಳು. ನಂತರ ಮನೆಯ ದೀಪ ಆರಿತು.
ಸಂಭಾಷಣೆಯಲ್ಲಿ ಕೇಳಿದ ನನ್ನ ಪಾಲು ಎಂದರೆ ಆ ಹುಡುಗನ ಪಾಲಿನ ಬುತ್ತಿ ಇರಬಹುದು. ಆದರೆ, ಮಣ್ಣಿನ ಪಾಲು ಎಂದರೆ ಏನು? ಎಂದು ಆಗ ಕಳ್ಳ ಯೋಚಿಸತೊಡಗಿದ. ಯೋಚಿಸಿದಷ್ಟೂ ಕುತೂಹಲ ಹೆಚ್ಚಾಯಿತು. ತನ್ನ ಅಂದಿನ ಕಸುಬು (ಕಳ್ಳತನ) ವ್ಯರ್ಥವಾದರೂ ಚಿಂತೆ ಇಲ್ಲ ಈ ರಹಸ್ಯ ಅರಿಯಲೇಬೇಕೆಂದು ಅಲ್ಲೇ ಬೆಳಗಿನತನಕ ಕಳ್ಳ ಕೂತ.
ತಾಯಿ ಕಟ್ಟಿ ಕೊಟ್ಟ ಎರಡು ಬುತ್ತಿಗಳೊಂದಿಗೆ ನಸುಕಿನಲ್ಲಿಯೇ ಮಗ ಹೊರಟ. ಕಳ್ಳ ಒಬ್ಬ ಪ್ರಯಾಣಿಕನಂತೆ ಹಿಂಬಾಲಿಸಿದ. ಮಧ್ಯಾಹ್ನದ ಹೊತ್ತಿಗೆ ಅವರು ಒಂದು ಕಾಡಿನಲ್ಲಿದ್ದರು. ಆಗ ಊಟದ ಸಮಯವಾದುದರಿಂದ ಮಗನು ಮರದ ಕೆಳಗೆ ಕುಳಿತು ಬುತ್ತಿ ಬಿಚ್ಚಿದ. ಅಲ್ಲಿಗೆ ತಲುಪಿದ ಕಳ್ಳನನ್ನು ನೋಡಿ, ‘ನೀವು ತುಂಬಾ ಹೊತ್ತಿನಿಂದ ನನ್ನ ಹಿಂದೆ ನಡೆಯುತ್ತಿದ್ದೀರಿ. ನಿಮಗೂ ಹಸಿವಾಗಿರಬಹುದು. ಬನ್ನಿ ಊಟ ಮಾಡೋಣ’ ಎಂದು ಕರೆದ. ಆಗ ಆ ಕಳ್ಳ ಕೈ ಮುಗಿದು, ‘ನನ್ನದೊಂದು ಪ್ರಶ್ನೆ ಇದೆ. ಅದಕ್ಕೆ ನೀವು ಉತ್ತರಿಸಿದರೆ ನಾನು ಉಣ್ಣುವೆ’ ಎಂದ. ಆಗ ಮಗನು ಆಶ್ಚರ್ಯದಿಂದ, ‘ಏನು ಪ್ರಶ್ನೆ ನಿಮ್ಮದು’ ಎಂದ. ಆಗ ಕಳ್ಳ ತಾನು ಅವರ ಮನೆಗೆ ಕದಿಯಲು ಬಂದಾಗಿನಿಂದ ಅಲ್ಲಿಯವರೆಗೆ ಎಲ್ಲಾ ಸಂಗತಿಗಳನ್ನೂ ಹೇಳಿ ತನ್ನ ಸಂದೇಹವನ್ನು ನಿವಾರಿಸುವಂತೆ ಕೇಳಿಕೊಂಡ. ಅದನ್ನು ಕೇಳಿ ಆ ಮಗನು ನಗುತ್ತಾ, ‘ನನ್ನ ಪಾಲು ಎಂದರೆ ನಾನೀಗ ನಿಮಗೆ ಕೊಡುತ್ತಿರುವ ಬುತ್ತಿ. ಈ ಅನ್ನದಾನದ ಪುಣ್ಯ ಯಾವತ್ತೂ ನನ್ನದು. ಅದು ನನ್ನನ್ನು ಬಿಟ್ಟು ಹೋಗುವುದಿಲ್ಲ. ಆದರೆ, ನಾನು ಉಣ್ಣುವ ಬುತ್ತಿ ನಾಳೆಯೇ ಮಣ್ಣಿನ ಪಾಲಾಗಿ ಹೋಗುತ್ತದೆ’ ಎಂದ.
ಕಳ್ಳನಿಗೆ ಜ್ಞಾನೋದಯವಾಯಿತು. ತನ್ನ ಪರಿಚಯವೇ ಇಲ್ಲದಿದ್ದರೂ ಕರೆದು ಅನ್ನ ಕೊಡುವ ಇವನ ಔದಾರ್ಯದ ಮುಂದೆ ಸಿಕ್ಕಿದವರ ಸೊತ್ತುಗಳನ್ನು ದೋಚುವ ತನ್ನ ಪಾಪದ ಅರಿವಾಯಿತು. ಕೂಡಲೇ ಆತನ ಕಾಲಿಗೆ ಬಿದ್ದು ತನ್ನ ಕಣ್ಣು ತೆರೆಸಿದ್ದಕ್ಕೆ ಧನ್ಯವಾದಗಳನ್ನು ಹೇಳಿ ಅಂದಿನಿಂದ ಕಳ್ಳನೂ ಒಳ್ಳೆಯವನಾದ.
ಸತ್ಸಂಗವು ಎಷ್ಟೊಂದು ಮಹತ್ತಾದುದು ಅಲ್ಲವೇ? ಅದಕ್ಕೇ ಸರ್ವಜ್ಞನು ಹೇಳಿದ್ದು, ‘ಸಜ್ಜನರ ಸಂಗವದು ಹೆಜ್ಜೇನ ಸವಿದಂತೆ; ದುರ್ಜನರ ಸಂಗದೊಡನಾಟ ಬಚ್ಚಲಿನ ರೊಜ್ಜಿನಂತಕ್ಕು’ ಎಂದು.
(ಲೇಖಕರು ಹವ್ಯಾಸಿ ಬರಹಗಾರರು)