

ಈತನ ಬಗ್ಗೆ ಕೇಳಿ ತಿಳಿದುಕೊಂಡಿದ್ದ ಕಳ್ಳನೊಬ್ಬ ಧನಿಕನಲ್ಲಿ ಸಾಲ ಕೇಳಲು ಬಂದ. ಆತನ ಉದ್ದೇಶ ಸಾಲ ಪಡೆಯುವುದಾಗಿರದೆ ಧನಿಕನ ತಿಜೋರಿ ನೋಡಿಕೊಂಡು ಕಳ್ಳತನ ಮಾಡುವುದಾಗಿತ್ತು. ತುಂಬ ಜನರು ಸಾಲವನ್ನು ಮುಂದಿನ ಜನ್ಮದಲ್ಲಿ ತೀರಿಸುವ ನೆಪವೊಡ್ಡಿ ಧನಿಕನಿಗೆ ಮೋಸ ಮಾಡಿರುವ ಬಗ್ಗೆಯೂ ಕಳ್ಳ ಅವರಿವರಲ್ಲಿ ಕೇಳಿ ತಿಳಿದುಕೊಂಡಿದ್ದ.
ಎಲ್ಲರಂತೆ ಆತ ಸಾಲಕ್ಕಾಗಿ ಸರತಿಸಾಲಿನಲ್ಲಿ ನಿಂತಿದ್ದ. ಸಾಲ ಪಡೆಯುವುದರ ಜೊತೆಗೆ ತಿಜೋರಿಯನ್ನು ಸರಿಯಾಗಿ ಗಮನಿಸಿಕೊಂಡು, ಹೇಗೆ ಕಳ್ಳತನ ಮಾಡಬೇಕೆಂಬ ರೂಪುರೇಷೆಯನ್ನು ಮನಸ್ಸಿನಲ್ಲೇ ಹಾಕತೊಡಗಿದ. ಅದೇ ದಿನ ರಾತ್ರಿ ಧನಿಕನ ಮನೆ ಹಿಂಬಾಗಿಲಿನಿಂದ ಒಳ ಪ್ರವೇಶಿಸಿದ. ಮಧ್ಯದಲ್ಲಿ ಯಾರೋ ಬಂದ ಸಪ್ಪಳವಾಯಿತು. ತಪ್ಪಿಸಿಕೊಳ್ಳಲು ಆತ ಅಲ್ಲೇ ಪಕ್ಕದಲ್ಲಿದ್ದ ಹಸುಗಳ ಕೊಟ್ಟಿಗೆಯೊಳಕ್ಕೆ ಹೋಗಿ ಅವಿತುಕೊಂಡ. ಈ ಮಧ್ಯೆ ಹಸುಗಳೆರಡು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದುದನ್ನು ಕೇಳಿಸಿಕೊಂಡ. ಒಂದು ಹಸು ಇನ್ನೊಂದು ಹಸುವಿನೊಂದಿಗೆ ಸಂಭಾಷಿಸುತ್ತ, ‘ನೀನು ಈ ಧನಿಕನ ಬಳಿ ಹೋದ ಜನ್ಮದಲ್ಲಿ ಸಾಲಪಡೆದು ಮುಂದಿನ ಜನ್ಮದಲ್ಲಿ ತೀರಿಸುತ್ತೇನೆ ಎಂದು ಬಾಕಿ ಉಳಿಸಿಕೊಂಡಿರುವೆಯಾ?’ ಎಂದು ಕೇಳಿತು. ಅದಕ್ಕೆ ತಲೆಯಾಡಿಸಿದ ಆ ಇನ್ನೊಂದು ಹಸು, ‘ಹೌದು, ನಾನು ಹೋದ ಜನ್ಮದಲ್ಲಿ ಈತನಲ್ಲಿ ಸಾಲ ಪಡೆದಿದ್ದೆ, ಹಣ ವಾಪಸ್ ಮಾಡದೇ ಮುಂದಿನ ಜನ್ಮದ ನೆಪ ಹೇಳಿದ್ದೆ. ಆದರೆ ಈ ಜನ್ಮದಲ್ಲಿ ಹಸುವಾಗಿ ಹುಟ್ಟಿ ಈ ಧನಿಕನ ಮನೆಯಲ್ಲಿ ಹಾಲು ಕೊಡುವ ಮೂಲಕ ನನ್ನ ಸಾಲದ ಋಣವನ್ನು ತೀರಿಸುತ್ತಿದ್ದೇನೆ’ ಎಂದಿತು.
ಈ ಸಂಭಾಷಣೆ ಕೇಳಿಸಿಕೊಂಡ ಕಳ್ಳ ಹೌಹಾರಿದ. ಅರೆ, ಇದೇನಿದು, ಈ ಹಸುಗಳು ಹೀಗೆ ಹೇಳುತ್ತಿವೆಯಲ್ಲ? ನಾನೇನಾದರೂ ಸಾಲ ಬಾಕಿ ಉಳಿಸಿಕೊಂಡರೆ ಮುಂದಿನ ಜನ್ಮದಲ್ಲಿ ಅದನ್ನು ತೀರಿಸಲು ಕಷ್ಟಪಡಬೇಕಾಗುತ್ತದೆ ಎಂದುಕೊಂಡು ಮನಸ್ಸನ್ನು ಬದಲಾಯಿಸಿ ಅಲ್ಲಿಂದ ಪರಾರಿಯಾಗಿದ್ದಲ್ಲದೆ, ತನ್ನೆಲ್ಲ ಸಾಲವನ್ನೂ ತೀರಿಸಿ ಕಳ್ಳತನ ಬಿಟ್ಟು ನ್ಯಾಯಮಾರ್ಗದಲ್ಲಿ ಬದುಕತೊಡಗಿದ.
ಸಂಘಜೀವಿಗಳಾಗಿರುವ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಋಣದಲ್ಲಿಯೇ ಇರುತ್ತೇವೆ. ಹುಟ್ಟಿನಿಂದ ಸಾಯುವ ತನಕ ತಂದೆ-ತಾಯಿ, ಗುರುಹಿರಿಯರ ಮತ್ತು ಹೆಜ್ಜೆಹೆಜ್ಜೆಗೂ ಕಾಪಾಡುವ ಭಗವಂತನ ಋಣದಲ್ಲಿ ಬದುಕುತ್ತಿದ್ದೇವೆ. ಅಷ್ಟೇ ಏಕೆ, ಆಶ್ರಯವಿತ್ತ ಭೂಮಿ, ಗಾಳಿ, ಬೆಳಕು, ನೀರು, ಪರಿಸರ ಎಲ್ಲದರ ಋಣಭಾರ ನಮ್ಮ ತಲೆಯ ಮೇಲಿದೆ. ಇದನ್ನರಿತುಕೊಂಡು ನಾವು ತಗ್ಗಿಬಗ್ಗಿ ನಡೆಯುವುದರೊಂದಿಗೆ ಸಮಾಜಕ್ಕೆ ಒಳಿತನ್ನೇ ಮಾಡುತ್ತ ಋಣಮುಕ್ತರಾಗುವತ್ತ ಸಾಗೋಣ.
(ಲೇಖಕರು ಹವ್ಯಾಸಿ ಬರಹಗಾರರು)