ಆತ್ಮಜ್ಞಾನದ ಪ್ರಾಪ್ತಿ ಹೇಗೆ?

Enlightenment
Published on
ಸುಜಾತ
ಸುಜಾತಾ ಕುಲಕರ್ಣಿ

ಒಬ್ಬ ವ್ಯಕ್ತಿಗೆ ಆತ್ಮಜ್ಞಾನ ಪಡೆಯುವ ಹಂಬಲ ಉಂಟಾಯಿತು. ಆತ ಓರ್ವ ಸಿದ್ಧಪುರುಷನ ಬಳಿಗೆ ಹೋಗಿ, ‘ನನಗೆ ಆತ್ಮಜ್ಞಾನ ಉಪದೇಶಿಸಿ’ ಎಂದು ಯಾಚಿಸಿದ. ಅದಕ್ಕೆ ಪ್ರತಿಯಾಗಿ ಸಿದ್ಧಪುರುಷ , ‘ವತ್ಸಾ, ನಾಳೆ ಬ್ರಾಹ್ಮೀ ಮುಹೂರ್ತದಲ್ಲಿ ಇಲ್ಲಿಗೆ ಬಾ. ಬರುವಾಗ ನಿನಗಿಂತಲೂ ತುಚ್ಛವಾದ ವಸ್ತುವೊಂದನ್ನು ತೆಗೆದುಕೊಂಡು ಬಾ’ ಎಂದು ಹೇಳಿದ. ಆ ಮನುಷ್ಯ ಮರುದಿನ ಹೊರಡಲು ಸಿದ್ಧನಾದಾಗ ತನಗಿಂತ ತುಚ್ಛ ವಸ್ತು ಯಾವುದು ಎಂಬ ವಿಚಾರಕ್ಕೆ ಬಿದ್ದ. ಅಂಗಳದಲ್ಲಿ ಕಟ್ಟಿದ್ದ ಆಕಳಿನ ಮೇಲೆ ಅವನ ದೃಷ್ಟಿ ಬೀಳಲು ಅದನ್ನೇ ಒಯ್ದರಾಯಿತು ಎಂದುಕೊಂಡು ಆಕಳ ಬಳಿಗೆ ಹೋಗಿ ಅದರ ಹಗ್ಗವನ್ನು ಬಿಚ್ಚತೊಡಗಿದ. ಆಗ ಆಕಳಿಗೆ ವಾಕ್ ಶಕ್ತಿ ಬಂದು ಹೇಳಿತು, ‘ಅಯ್ಯ, ನನ್ನಿಂದಲೇ ನಿನ್ನ ಕುಟುಂಬದ ಪೋಷಣೆಯಾಗುತ್ತಿದೆ. ಅಂದಮೇಲೆ ನಾನು ಕೀಳೋ, ನೀನು ಕೀಳೋ ಹೇಳು’. ಸರಿ ಎಂದುಕೊಂಡು ಆ ವ್ಯಕ್ತಿ ಅಂಗಳದಲ್ಲಿ ಬೆಳೆದ ಹುಲ್ಲನ್ನು ಒಯ್ದರಾಯಿತು ಎಂದು ಅದನ್ನು ಕೀಳಹತ್ತಿದ. ಆಗ ಆ ಹುಲ್ಲು, ‘ನಿನ್ನನ್ನು ಪೋಷಿಸುವ ಆಕಳನ್ನು ಪೋಷಿಸುವವನು ನಾನು ಎಂದ ಮೇಲೆ ನಾನು ಹೇಗೆ ತುಚ್ಛ?’ ಎಂದು ಕೇಳಿತು. ಪೇಚಿನಲ್ಲಿ ಬಿದ್ದ ಆತ, ಧೂಳಿಗಿಂತ ತುಚ್ಛ ವಸ್ತು ಇಲ್ಲ ಎಂದುಕೊಂಡು ಒಂದು ಮುಷ್ಠಿ ತುಂಬ ಧೂಳನ್ನು ಎತ್ತಿಕೊಂಡ. ಆಗ ಧೂಳು, ‘ಸ್ವಲ್ಪ ತಾಳು, ಆಕಳನ್ನು ಪೋಷಿಸುವ ಹುಲ್ಲು ನನ್ನಿಂದಲೇ ಚಿಗುರುತ್ತದೆ, ಬೆಳೆಯುತ್ತದೆ, ಅಂದ ಮೇಲೆ ನಾನು ಹೇಗೆ ತುಚ್ಛ?’ ಎಂದಿತು.

‘ಧೂಳು ಕೂಡ ನನಗಿಂತ ತುಚ್ಛವಲ್ಲ’ ಎಂದು ಆ ಮನುಷ್ಯನ ಅಂತರ್ಮನ ನುಡಿಯಿತು. ಆಗ ಅವನ ಮನದ ಕಣ್ಣುಗಳು ತೆರೆದವು. ವಾಸ್ತವದ ದರ್ಶನವಾಯಿತು. ಆತ್ಮಜ್ಯೋತಿ ಬೆಳಗಹತ್ತಿತು. ಸಿದ್ಧಪುರುಷನ ಬಳಿಗೆ ಬಂದು, ‘ನನಗಿಂತ ತುಚ್ಛವಾದ ವಸ್ತು ಯಾವುದೂ ಈ ಜಗತ್ತಿನಲ್ಲಿ ನನಗೆ ಸಿಗಲಿಲ್ಲ. ನನ್ನನ್ನು ಸೇವಕನಾಗಿ ಸ್ವೀಕರಿಸಿ, ಕೃತಾರ್ಥರನ್ನಾಗಿ ಮಾಡಿ’ ಎಂದು ಬಿನ್ನವಿಸಿಕೊಂಡ.

ಸಿದ್ಧಪುರುಷ ಆಸನದಿಂದೆದ್ದು ಭಕ್ತನ ತಲೆಯ ಮೇಲೆ ಪ್ರೀತಿಯಿಂದ ಕೈಯಾಡಿಸಿ, ಕರುಣಾಪೂರ್ಣ ಸ್ವರದಲ್ಲಿ ಹೇಳಿದ, ‘ವತ್ಸಾ, ಆತ್ಮಜ್ಞಾನ ನಿನಗೆ ನಿನ್ನ ಮನೆಯಲ್ಲೇ ಸಿಕ್ಕಿದೆ. ನೀನು ಈಗ ಅದನ್ನು ಶೋಧಿಸಬೇಕಾಗಿಲ್ಲ. ಸೃಷ್ಟಿಯು ಮನುಷ್ಯನಿಗೆ ಮಾತ್ರ ಸೇರಿದ್ದಲ್ಲ. ಸೃಷ್ಟಿಯಲ್ಲಿ ಪ್ರತಿ ಜೀವಿಗೂ ಅದರದೇ ಆದ ಅಸ್ತಿತ್ವ ಮತ್ತು ಮಹತ್ವ ಇರುತ್ತದೆ. ಅದನ್ನು ಅರಿತು ಬಾಳುವುದೇ ಸಾರ್ಥಕತೆಯ ಹಾದಿ’ ಎಂದ.

ನಿಜವಲ್ಲವೇ? ಮನುಷ್ಯನು ತಾನೇ ಶ್ರೇಷ್ಠ ಎಂಬ ಅಹಂನಲ್ಲಿ ತೇಲುತ್ತಿರುತ್ತಾನೆ. ಆದರೆ, ವಾಸ್ತವವನ್ನು ನೋಡುವ, ಸತ್ಯವನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಿದರೆ ಖಂಡಿತವಾಗಿಯೂ ನೈಜಜ್ಞಾನದ ಬೆಳಕು ಗೋಚರವಾಗುತ್ತದೆ, ಭ್ರಮೆಗಳನ್ನು ಶಾಶ್ವತ ವಾಗಿ ತೊಲಗಿಸುತ್ತದೆ. ಅಂತರಂಗ ಅರಳುತ್ತದೆ. ಅಂಥ ಬೆಳಕಿನತ್ತ ನಾವು ಸಾಗೋಣ.

(ಲೇಖಕರು ಸಹ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net