

ಒಂದು ದಿನ ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಬಳಿ ಒಬ್ಬ ಶಿಷ್ಯನು, ‘ಮಹಾರಾಜರೆ, ನೀವು ಶ್ರೀರಾಮನನ್ನು ಮನುಷ್ಯರಂತೆಯೇ ಭಾವಿಸುತ್ತೀರಿ. ಅಂದಮೇಲೆ ಭಗವಂತನಿಗೂ ಸಾಮಾನ್ಯ ಮನುಷ್ಯರಂತೆ ನಗು ಬರುತ್ತದೆ ಅಲ್ಲವೇ?’ ಎಂದು ಕೇಳಿದ. ಮಹಾರಾಜರು ನಸುನಕ್ಕು, ‘ಹೌದು, ಖಂಡಿತಾ ಆ ಭಗವಂತನಿಗೂ ನಮ್ಮಂತೆಯೇ ನಗು ಬರುತ್ತದೆ. ಶ್ರೀರಾಮನು ಈ ಮೂರು ಪ್ರಸಂಗಗಳಲ್ಲಿ ನಗುತ್ತಾನೆ.
1-ಈ ಜಗತ್ತಿನಲ್ಲಿ ಎಲ್ಲವೂ ಭಗವಂತನ ಇಚ್ಛೆಯಿಂದಲೇ ನಡೆದಿದೆ, ನಡೆಯುತ್ತಿದೆ ಹಾಗೂ ಮುಂದೆಯೂ ನಡೆಯುವುದು. ಹೀಗಿರುವಾಗ ಎಲ್ಲವೂ ನಾನು, ನನ್ನಿಂದಲೇ ಎಂಬ ಸ್ವಾರ್ಥ ಭಾವ ಹೊಂದಿರುವವರನ್ನು ನೋಡಿ ರಾಮನಿಗೆ ನಗು ಬರುತ್ತದೆ. 2- ಜಗತ್ತೆಲ್ಲವೂ ಮೃತ್ಯುವಿನ ಕಡೆಗೆ ಧಾವಿಸುತ್ತದೆ. ನಮಗಿಂತ ದೊಡ್ಡವರು, ಚಿಕ್ಕವರು, ಸಮೀಪದವರೂ ಹೋದರು. ನಾವೂ ಅದೇ ಮಾರ್ಗದಲ್ಲಿಯೇ ಹೋಗುತ್ತಿದ್ದೇವೆ ಎಂಬುದನ್ನು ಪ್ರತ್ಯಕ್ಷ ಕಂಡರೂ ಮನುಷ್ಯ ತಾನು ಇಲ್ಲಿ ಚಿರಂಜೀವಿಯಾಗಿರುವೆ ಎಂಬಂತೆ ವರ್ತಿಸುವುದನ್ನು ನೋಡಿದಾಗ ರಾಮನಿಗೆ ನಗು ಬರುತ್ತದೆ. 3- ಸಾಕಷ್ಟು ಹಣ ಸಂಪಾದಿಸಿದರೂ ಯಾವ ಮನುಷ್ಯನೂ ಸಂಪೂರ್ಣ ಸುಖಿಯಾಗಿಲ್ಲ. ಹಣ, ಕೀರ್ತಿ ಎಲ್ಲವೂ ಇದ್ದರೂ ಮನುಷ್ಯನಿಗೆ ಆನಂದ ದೊರಕುವುದು ಆತ್ಮಜ್ಞಾನದಿಂದ. ಹೀಗಿದ್ದರೂ ಮನುಷ್ಯ ನಿರಂತರವಾಗಿ ಸಂಪತ್ತನ್ನೇ ಸುಖದ ಮೂಲವೆಂದು ತಿಳಿದು ಬೆನ್ನುಹತ್ತುವುದನ್ನು ನೋಡಿದಾಗ ರಾಮನಿಗೆ ನಗು ಬರುತ್ತದೆ’ ಎಂದು ಉತ್ತರಿಸಿದರು.
ನಿಜಾರ್ಥದಲ್ಲಿ ಮನುಷ್ಯನಿಗೆ ಅಹಂಕಾರವೇ ನಿಜವಾದ ಶತ್ರು. ಎಲ್ಲವೂ ನನ್ನಿಂದಲೇ ಆಯಿತು, ನಾನಿಲ್ಲದಿದ್ದರೆ ನಡೆಯುವುದಿಲ್ಲ ಎಂಬ ಭಾವನೆ ವಿವೇಕಿಯಾದವನಿಗೆ ಉಚಿತವಲ್ಲ. ಅದಕ್ಕೆಂದೇ ಡಿವಿಜಿಯವರು, ‘ಭೂಮಿಯಿಂದ ಬೀಜ ಮೊಳಕೆಯೊಡೆದು ಪದರ ಸೀಳಿ ಹೊರಗೆ ಬರುವಾಗ ಯಾವುದೇ ಅಬ್ಬರವಿಲ್ಲದೆ ಚಿಗುರುತ್ತದೆ. ಮರದಲ್ಲಿ ಕಾಯಿಯೊಂದು ಹಣ್ಣಾಗುವಾಗ ಯಾವ ಆರ್ಭಟವನ್ನೂ ಮಾಡಿ ಹೇಳುವುದಿಲ್ಲ. ಸೂರ್ಯ ಚಂದ್ರರು ಬೆಳಕನ್ನು ನೀಡುವಾಗ ಅವರದೊಂದೂ ಸದ್ದಿಲ್ಲ. ಆದರೆ ನೀನು ಮಾತ್ರ ಅಲ್ಪ ಕಾರ್ಯ ಮಾಡಿ, ಏನೋ ಮಹಾ ಸಾಧನೆ ಮಾಡಿದೆನೆಂದು ಬೀಗುತ್ತಿರುವೆ. ಈ ರೀತಿಯಾದ ಭಾವವನ್ನು ತೊರೆದು, ನಿನ್ನ ತುಟಿಗಳನ್ನು ಹೊಲಿದುಕೊ’ ಎಂದು ಮಂಕುತಿಮ್ಮನ ಕಗ್ಗದಲ್ಲಿ ಕಿವಿಮಾತು ಹೇಳಿದ್ದಾರೆ. ಹಣ, ಸಂಪತ್ತು, ಕೀರ್ತಿ, ಆಯಸ್ಸು ಎಲ್ಲವೂ ಇಲ್ಲಿ ಕ್ಷಣಿಕ. ಯಾವುದೂ ಇಲ್ಲಿ ಶಾಶ್ವತವಲ್ಲ ಎಂಬುದನ್ನು ತಿಳಿದುಕೊಂಡವರು ಸಾರ್ಥಕ ಜೀವನದ ಹಾದಿಯಲ್ಲಿ ಸಾಗಬಹುದು.
(ಲೇಖಕಿ ಹವ್ಯಾಸಿ ಬರಹಗಾರ್ತಿ)