

ನವದೆಹಲಿ: ಮೈಕ್ರೋಬ್ಲಾಗಿಂಗ್ ಸೋಷಿಯಲ್ ಮೀಡಿಯಾ ಆ್ಯಪ್ ಆಗಿದ್ದ ಟ್ವಿಟರ್ ಉದ್ಯಮಿ ಎಲಾನ್ ಮಸ್ಕ್ ಒಡೆತನಕ್ಕೆ ಬಂದ ಮೇಲೆ ಅದರ ಹೆಸರು 'ಎಕ್ಸ್' ಎಂದು ಬದಲಾಗಿದೆ. ಮಾತ್ರವಲ್ಲ, 'ಎಕ್ಸ್'ನಲ್ಲಿ ಹೊಸ ಹೊಸ ಫೀಚರ್ ಬಿಡುತ್ತಿರುವ ಎಲಾನ್ ಮಸ್ಕ್ ಇದೀಗ ತಮ್ಮ ಆ್ಯಪ್ ಬಳಕೆದಾರರಿಗೆ ಉದ್ಯೋಗ ಒದಗಿಸಲಿಕ್ಕೂ ಮುಂದಾಗಿದ್ದಾರೆ.
ಎಕ್ಸ್ನ ಪ್ರೀಮಿಯಂ ವರ್ಷನ್ನಲ್ಲಿ ವೈಯಕ್ತಿಕ ಹಾಗೂ ಸಾಂಸ್ಥಿಕ ಎಂದು ಎರಡು ಕೆಟಗರಿ ಮಾಡಿರುವ ಮಸ್ಕ್, ವೈಯಕ್ತಿಕ ಖಾತೆಗೆ ಬ್ಲೂ ಟಿಕ್, ಸಾಂಸ್ಥಿಕ ಖಾತೆಗೆ ಗೋಲ್ಡ್ ಟಿಕ್ ಕೊಡುತ್ತಿದ್ದಾರೆ. ಅಲ್ಲದೆ ತನ್ನ ಪ್ರೀಮಿಯಂ ಬಳಕೆದಾರರಿಗೆ ಮಾನಿಟೈಸೇಷನ್ ಸೌಲಭ್ಯ ಕೂಡ ನೀಡುತ್ತಿದ್ದು, ಎಕ್ಸ್ ಪ್ರೀಮಿಯಂ ಖಾತೆ ಹೊಂದಿರುವವರು ಆದಾಯ ಕೂಡ ಪಡೆಯಬಹುದಾಗಿದೆ.
ಈಗ ಎಕ್ಸ್ನ ಸಾಂಸ್ಥಿಕ ಖಾತೆಗಳಿಗೆ ಎಕ್ಸ್ ಹೈರಿಂಗ್ ಎಂಬ ಬೀಟಾ ಆವೃತ್ತಿ ನೀಡುತ್ತಿದ್ದು, ಇದರಲ್ಲಿ ಆಯಾ ಕಂಪನಿಗಳವರು ತಮ್ಮಲ್ಲಿನ ಖಾಲಿ ಹುದ್ದೆಗಳ ಮಾಹಿತಿಯನ್ನು ಪ್ರೊಫೈಲ್ನಲ್ಲೇ ನೀಡಬಹುದಾಗಿದೆ. ಮಾತ್ರವಲ್ಲ ಎಕ್ಸ್ ಬಳಕೆದಾರರು ಇಲ್ಲೇ ನೇರವಾಗಿ ಉದ್ಯೋಗಕ್ಕೆ ಕೋರಿಕೆ ಸಲ್ಲಿಸಬಹುದಾಗಿದೆ. ಈ ಮೂಲಕ ಎಕ್ಸ್ ಮುಂದೆ ಲಿಂಕ್ಡ್ಇನ್ಗೆ ಪ್ರತಿಸ್ಪರ್ಧಿಯಾಗಿ ಬೆಳೆದರೂ ಅಚ್ಚರಿ ಇಲ್ಲ ಎನ್ನುವಂತಾಗಿದೆ.