

Ghee : ದೇಹದ ಆರೋಗ್ಯಕ್ಕೆ ಅಗತ್ಯ ಪ್ರಮಾಣದಲ್ಲಿ ಕೊಬ್ಬನ್ನು ಸೇವಿಸುವುದು ಮುಖ್ಯ. ಆದರೆ, ಅನಾರೋಗ್ಯಕರ ಕೊಬ್ಬನ್ನು ಸೇವಿಸಬಾರದು. ಅಲ್ಲದೆ, ಹೆಚ್ಚುವರಿ ಕೊಬ್ಬನ್ನು ಕೂಡ ಸೇವನೆ ಮಾಡಬಾರದು. ಆರೋಗ್ಯಕರ ಕೊಬ್ಬನ್ನು ಸೇವಿಸುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಬಹಳಷ್ಟು ಸಹಾಯ ಮಾಡುತ್ತದೆ.
ಅಂದಹಾಗೆ ತುಪ್ಪವು ತುಂಬಾ ಒಳ್ಳೆಯ ಕೊಬ್ಬನ್ನು ಹೊಂದಿರುತ್ತದೆ ಮತ್ತು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ನೀವು ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆರೋಗ್ಯಕರ ಕೊಬ್ಬು ಮಾತ್ರವಲ್ಲದೆ, ತುಪ್ಪವು ಅನೇಕ ಪೌಷ್ಟಿಕಾಂಶದ ಮೌಲ್ಯಗಳನ್ನು ಹೊಂದಿದೆ. ಹಾಗಂತ ತುಪ್ಪವನ್ನು ಎಲ್ಲದಕ್ಕೂ ಮಿಕ್ಸ್ ಮಾಡಿ ತಿನ್ನುವುದು ಒಳ್ಳೆಯದಲ್ಲ. ಕೆಲವೊಂದು ಆಹಾರಗಳ ಜೊತೆ ಯಾವುದೇ ಕಾರಣಕ್ಕೂ ತುಪ್ಪವನ್ನು ಸೇವಿಸಬಾರದು. ಸೇವಿಸಿದ್ದಲ್ಲಿ ಆರೋಗ್ಯ ಸಮಸ್ಯೆಗಳು ಬರಬಹುದು. ಯಾವ ಆಹಾರಗಳ ಜೊತೆ ತುಪ್ಪವನ್ನು ಸೇವಿಸಬಾರದು ಅನ್ನೋದನ್ನು ನಾವೀಗ ತಿಳಿಯೋಣ.
* ತುಪ್ಪದ ಜೊತೆಗೆ ಮೊಸರು ಸೇವಿಸುವುದರಿಂದ ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
* ಜೇನುತುಪ್ಪದೊಂದಿಗೆ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ದೇಹದಲ್ಲಿ ವಿಷಕಾರಿ ಅಂಶಗಳು ಹೆಚ್ಚಾಗುತ್ತವೆ. ಅಲ್ಲದೆ, ದೇಹದಲ್ಲಿ ಉಷ್ಣತೆ ಹೆಚ್ಚಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
* ನೈಸರ್ಗಿಕವಾಗಿ ತಾಜಾ ಹಣ್ಣುಗಳನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಮುಖ್ಯ. ಆದರೆ, ಹಣ್ಣುಗಳೊಂದಿಗೆ ತುಪ್ಪ ಸೇವಿಸುವುದರಿಂದ ನೀವು ಸೇವಿಸಿದ ಆಹಾರವನ್ನು ಜೀರ್ಣಿಸಿಕೊಳ್ಳಲು ತುಂಬಾ ಕಷ್ಟವಾಗುತ್ತದೆ. ಆದ್ದರಿಂದ, ಹಣ್ಣುಗಳೊಂದಿಗೆ ತುಪ್ಪವನ್ನು ಸೇವಿಸದಿರುವುದು ಉತ್ತಮ.
* ಇತ್ತೀಚೆಗೆ, ಅನೇಕ ಜನರು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಬಿಸಿನೀರಿನೊಂದಿಗೆ ತುಪ್ಪವನ್ನು ತೆಗೆದುಕೊಳ್ಳುತ್ತಿದ್ದಾರೆ. ಹೀಗೆ ಮಾಡುವುದರಿಂದ ತುಪ್ಪದಲ್ಲಿರುವ ಪೋಷಕಾಂಶಗಳು ಕಡಿಮೆಯಾಗುತ್ತವೆ. ಇದಲ್ಲದೆ, ಇದರಿಂದ ಯಾವುದೇ ಪ್ರಯೋಜನವಿಲ್ಲ. ತುಪ್ಪವನ್ನು ಬಿಸಿನೀರಿನೊಂದಿಗೆ ಮಾತ್ರವಲ್ಲದೆ ಚಹಾ ಅಥವಾ ಕಾಫಿಯಂತಹ ಪದಾರ್ಥಗಳೊಂದಿಗೆ ಸೇವಿಸುವುದರಿಂದ ಅಸಿಡಿಟಿಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು ಮತ್ತು ಜೀರ್ಣಾಂಗ ವ್ಯವಸ್ಥೆಯ ಕಾರ್ಯನಿರ್ವಹಣೆಯ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ.
* ತುಪ್ಪದ ಜೊತೆಗೆ ಮೀನನ್ನು ಸಹ ಸೇವನೆ ಮಾಡಬಾರದು. ತೆಗೆದುಕೊಂಡರೆ ದೇಹದ ಮೆಟಬಾಲಿಸಂ ಸಂಪೂರ್ಣ ಹಾಳಾಗಿ ಜೀರ್ಣಾಂಗ ವ್ಯವಸ್ಥೆಯ ಕಾರ್ಯವೈಖರಿ ಕಡಿಮೆಯಾಗಿ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಬರುತ್ತವೆ. ಆದ್ದರಿಂದ ಇಂತಹ ಆಹಾರ ಪದಾರ್ಥಗಳ ಜೊತೆಗೆ ತುಪ್ಪವನ್ನು ತೆಗೆದುಕೊಳ್ಳಲೇಬಾರದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.