

Ranya Rao : ಕಂದಾಯ ಗುಪ್ತಚರ ನಿರ್ದೇಶನಾಲಯದ (DRI) ವಶದಲ್ಲಿರುವ ನಟಿ ರನ್ಯಾ ರಾವ್ ವಿಚಾರಣೆಯ ಸಮಯದಲ್ಲಿ ದುಬೈನಿಂದ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು ಎಂದು ಬಹಿರಂಗಪಡಿಸಿದ್ದಾರೆ. ನನಗೆ ಅಪರಿಚಿತ ಸಂಖ್ಯೆಗಳಿಂದ ಕರೆಗಳು ಬರುತ್ತಿದ್ದವು ಮತ್ತು ಯೂಟ್ಯೂಬ್ ವಿಡಿಯೋಗಳನ್ನು ನೋಡಿ ಚಿನ್ನವನ್ನು ಮರೆಮಾಡುವುದನ್ನು ಕಲಿತೆ ಎಂದು ರನ್ಯಾ ಹೇಳಿಕೊಂಡಿದ್ದಾರೆ.
ಅಂದಹಾಗೆ ನಟಿ ರನ್ಯಾ ರಾವ್, ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳು ಎಂಬುದು ಈಗಾಗಲೇ ಎಲ್ಲರಿಗೂ ತಿಳಿದಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ 12.56 ಕೋಟಿ ರೂ. ಮೌಲ್ಯದ 14.2 ಕೆಜಿ ತೂಕದ ಚಿನ್ನದ ಬಿಸ್ಕತ್ತುಗಳನ್ನು ತನ್ನ ಸೊಂಟದ ಸುತ್ತಲೂ ಅಂಟಿಸಿಕೊಂಡು ಕದ್ದು ಸಾಗಿಸುವಾಗ ಡಿಆರ್‌ಐ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದರು. ಇದೀಗ ಡಿಆರ್‌ಐ ಅಧಿಕಾರಿಗಳ ವಶದಲ್ಲಿದ್ದು, ವಿಚಾರಣೆ ಎದುರಿಸುತ್ತಿದ್ದಾರೆ.
ಮಾರ್ಚ್ 1ರಂದು ನನಗೆ ವಿದೇಶಿ ಫೋನ್ ಸಂಖ್ಯೆಯಿಂದ ಕರೆ ಬಂದಿತು. ಕಳೆದ ಎರಡು ವಾರಗಳಿಂದ ನನಗೆ ಅಪರಿಚಿತ ವಿದೇಶಿ ಸಂಖ್ಯೆಗಳಿಂದ ಸಾಕಷ್ಟು ಕರೆಗಳು ಬಂದಿವೆ. ಫೋನ್ ಮಾಡಿದವರು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರ ಗೇಟ್ ಎ ಗೆ ಹೋಗಲು ನನಗೆ ಸೂಚಿಸಿದರು. ದುಬೈ ವಿಮಾನ ನಿಲ್ದಾಣದಲ್ಲಿ ಚಿನ್ನವನ್ನು ಸಂಗ್ರಹಿಸಿ ಬೆಂಗಳೂರಿನಲ್ಲಿ ತಲುಪಿಸಲು ನನಗೆ ತಿಳಿಸಿದರು. ನಾನು ದುಬೈನಿಂದ ಬೆಂಗಳೂರಿಗೆ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದು ಇದೇ ಮೊದಲು. ನಾನು ಇದುವರೆಗೆ ದುಬೈನಿಂದ ಚಿನ್ನವನ್ನು ತಂದಿರಲಿಲ್ಲ ಅಥವಾ ಖರೀದಿಸಿಯೂ ಇಲ್ಲ ಎಂದು ರನ್ಯಾ ರಾವ್ ಡಿಆರ್‌ಐ ಅಧಿಕಾರಿಗಳಿಗೆ ಹೇಳಿದರು.
ಅಂದಹಾಗೆ ಮಾ.3ರಂದು ದುಬೈ ವಿಮಾನ ನಿಲ್ದಾಣದ ಟರ್ಮಿನಲ್ 3ರಲ್ಲಿ ರನ್ಯಾ ರಾವ್ಗೆ ಬಿಳಿ ಮೈಕಟ್ಟಿನ ಎತ್ತರದ ಮನುಷ್ಯನೊಬ್ಬ 17 ಗಟ್ಟಿಯಿದ್ದ ಚಿನ್ನದ ಬಾಕ್ಸ್ ಕೊಟ್ಟು ಹೊರಗೆ ಸಾಗಿಸಬೇಕು ಎಂದು ಹೇಳುತ್ತಾನೆ. ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರಗಡೆ ಹೋದ ಮೇಲೆ ಸರ್ವಿಸ್ ರಸ್ತೆಯಲ್ಲಿ ಆಟೋ ಒಂದು ನಿಂತಿರುತ್ತೆ, ಅದರಲ್ಲಿ ಇರುವ ವ್ಯಕ್ತಿಗೆ ಚಿನ್ನ ಕೊಡಬೇಕು ಎಂದು ಹೇಳಿ ಅಲ್ಲಿಂದ ಹೊರಟ್ಟಿದ್ದಾನೆ. ಆ ಬಾಕ್ಸ್ ಜತೆಗೆ ಬ್ಯಾಂಡೇಜ್ ತೆಗೆದುಕೊಂಡು ಶೌಚಗೃಹಕ್ಕೆ ಹೋಗಿ ಮೈತುಂಬ ಅಂಟಿಸಿಕೊಂಡು ಬರುವಾಗ ಡಿಆರ್‌ಐ ಅಧಿಕಾರಿಗಳಿಗೆ ಸೆರೆ ಆಗಿರುವುದಾಗಿ ರನ್ಯಾ ರಾವ್ ತನ್ನ ಹೇಳಿಕೆ ದಾಖಲಿಸಿದ್ದಾಳೆ.
ಚಿನ್ನವು ಎರಡು ಪ್ಲಾಸ್ಟಿಕ್ ಹೊದಿಕೆಯ ಪ್ಯಾಕೆಟ್‌ಗಳಲ್ಲಿತ್ತು. ನಾನು ವಿಮಾನ ನಿಲ್ದಾಣದ ಶೌಚಾಲಯಕ್ಕೆ ಹೋಗಿ ನನ್ನ ದೇಹಕ್ಕೆ ಚಿನ್ನದ ಬಾರ್‌ಗಳನ್ನು ಜೋಡಿಸಿದೆ. ಚಿನ್ನವನ್ನು ನನ್ನ ಜೀನ್ಸ್ ಮತ್ತು ಶೂಗಳಿಂದ ಮರೆಮಾಡಿದೆ. ಇದನ್ನು ಹೇಗೆ ಮಾಡಬೇಕೆಂದು ನಾನು ಯೂಟ್ಯೂಬ್ ವಿಡಿಯೋಗಳಿಂದ ಕಲಿತುಕೊಂಡೆ ಎಂದು ಕಂದಾಯ ಗುಪ್ತಚರ ಅಧಿಕಾರಿಗಳಿಗೆ ರನ್ಯಾ ತಿಳಿಸಿದ್ದಾರೆ.
ಆದಾಗ್ಯೂ, ತನಗೆ ಫೋನ್ ಕರೆ ಮಾಡಿದವರು ಯಾರೆಂಬುದು ತಿಳಿದಿಲ್ಲ ಎಂದು ರನ್ಯಾ ಹೇಳಿದ್ದಾರೆ. ಅಲ್ಲದೆ, ಕರೆ ಮಾಡಿದವರು ಆಫ್ರಿಕನ್-ಅಮೆರಿಕನ್ ಉಚ್ಚಾರಣೆಯನ್ನು ಹೊಂದಿದ್ದರು ಎಂದಿದ್ದಾರೆ. ಬೆಂಗಳೂರಿನಲ್ಲಿ ಕಳ್ಳಸಾಗಣೆ ಮಾಡಿದ ಚಿನ್ನವನ್ನು ಯಾರಿಗೆ ನೀಡಬೇಕು ಎಂದು ಕೇಳಿದಾಗ, ಚಿನ್ನದ ಗಟ್ಟಿಗಳನ್ನು ಅಪರಿಚಿತ ವ್ಯಕ್ತಿಗೆ ತಲುಪಿಸಲು ನನಗೆ ಹೇಳಿದರು. ವಿಮಾನ ನಿಲ್ದಾಣದ ಟೋಲ್ ಗೇಟ್ ನಂತರ ಸರ್ವಿಸ್ ರಸ್ತೆಗೆ ಹೋಗಲು ಹೇಳಿದರು. ಅಲ್ಲಿ ಸಿಗ್ನಲ್ ಬಳಿಯ ಆಟೋರಿಕ್ಷಾದಲ್ಲಿ ಚಿನ್ನವನ್ನು ಹಾಕಬೇಕಿತ್ತು. ಆದರೆ, ಆ ಆಟೋರಿಕ್ಷಾದ ಸಂಖ್ಯೆಯನ್ನು ನೀಡಲಿಲ್ಲ ಎಂದು ರನ್ಯಾ ತಿಳಿಸಿದ್ದಾರೆ.
ತಮ್ಮ ಪತಿ ಜತಿನ್ ವಿಜಯ್ ಕುಮಾರ್ ಅವರ ಕ್ರೆಡಿಟ್ ಕಾರ್ಡ್ ಬಳಸಿ ವಿಮಾನದ ಟಿಕೆಟ್ ಬುಕ್ ಮಾಡಿರುವುದಾಗಿ ರನ್ಯಾ ರಾವ್ ಸ್ವಯಂಪ್ರೇರಣೆಯಿಂದ ಇದೇ ಸಂದರ್ಭದಲ್ಲಿ ಹೇಳಿಕೆ ನೀಡಿದರು. ತಾವು ಆಗಾಗ ವಿದೇಶ ಪ್ರವಾಸಗಳನ್ನು ಮಾಡುತ್ತಿದ್ದರ ಬಗ್ಗೆಯೂ ವಿವರಿಸಿದರು. ನಾನು ಛಾಯಾಗ್ರಹಣ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಕ್ಕಾಗಿ ಆಗಾಗ ಪ್ರಯಾಣಿಸಿದ್ದೇನೆ. ನಾನು ಯುರೋಪ್, ಅಮೆರಿಕ, ಆಫ್ರಿಕಾ ಮತ್ತು ಮಧ್ಯಪ್ರಾಚ್ಯಕ್ಕೆ ಹಲವು ಬಾರಿ ಭೇಟಿ ನೀಡಿದ್ದೇನೆ ಎಂದು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಳ್ಳಸಾಗಣೆ ಸಿಂಡಿಕೇಟ್ ಬಗ್ಗೆ ರನ್ಯಾ ರಾವ್ ಯಾವುದೇ ವಿವರಗಳನ್ನು ನೀಡದಿದ್ದರೂ ಡಿಆರ್‌ಐ ತನಿಖೆಯನ್ನು ಮುಂದುವರೆಸಿದೆ. ರನ್ಯಾ ಅವರ ಫೋನ್ ಮತ್ತು ಲ್ಯಾಪ್‌ಟಾಪ್‌ನಿಂದ ಬಂದ ದತ್ತಾಂಶದ ಆಧಾರದ ಮೇಲೆ, ಡಿಆರ್‌ಐ ಕಳ್ಳಸಾಗಾಣೆ ಸಿಂಡಿಕೇಟ್ ಸದಸ್ಯರನ್ನು ಪತ್ತೆಹಚ್ಚಿದೆ. (ಏಜೆನ್ಸೀಸ್)