ನಿಮ್ಮ ಫೋಟೋಶೂಟ್‌ ನ್ಯಾಚುರಲ್‌ ಹಾಗೂ ಸ್ಟೈಲಿಶ್‌ ಆಗಿರಬೇಕಾ? ಹಾಗಾದ್ರೆ ಈ ಟಿಪ್ಸ್‌ ಪಾಲಿಸಿ...Photoshoot Tips

ಫೋಟೋಗಳು ಕೇವಲ ನೆನಪುಗಳನ್ನು ಉಳಿಸಿಕೊಳ್ಳುವ ಸಾಧನವಾಗಿರದೆ, ನಮ್ಮ ವ್ಯಕ್ತಿತ್ವ, ಸ್ಟೈಲ್‌ ಮತ್ತು ಜೀವನಶೈಲಿಯನ್ನು ತೋರಿಸುವ ಒಂದು ಮಾಧ್ಯಮವಾಗಿವೆ.
Photoshoot Tips
ಸಾಂದರ್ಭಿಕ ಚಿತ್ರ
Published on: 

Photoshoot Tips : ಪ್ರತಿಯೊಬ್ಬರಲ್ಲೂ ಇಂದು ಫೋಟೋಶೂಟ್‌ ಕ್ರೇಜ್‌ ಹೆಚ್ಚಾಗುತ್ತಿದೆ. ಎಲ್ಲರೂ ಚೆನ್ನಾಗಿ ರೆಡಿಯಾಗಿ ಫೋಟೋ ತೆಗೆದುಕೊಂಡು, ಅದನ್ನು ಸೋಶಿಯಲ್ ಮೀಡಿಯಾಗಳಲ್ಲಿ ಅಪ್ಲೋಡ್ ಮಾಡಿಕೊಳ್ಳುವುದು ಸಾಮಾನ್ಯವಾಗಿದೆ. ಆದರೆ, ಫೋಟೋಗಳು ಕೇವಲ ನೆನಪುಗಳನ್ನು ಉಳಿಸಿಕೊಳ್ಳುವ ಸಾಧನವಾಗಿರದೆ, ನಮ್ಮ ವ್ಯಕ್ತಿತ್ವ, ಸ್ಟೈಲ್‌ ಮತ್ತು ಜೀವನಶೈಲಿಯನ್ನು ತೋರಿಸುವ ಒಂದು ಮಾಧ್ಯಮವಾಗಿವೆ. ಎಲ್ಲರಿಗೂ ತಮ್ಮ ಫೋಟೋಗಳು ಸುಂದರವಾಗಿ ಮೂಡಿಬರಬೇಕು ಎಂಬ ಆಸೆ ಇರುತ್ತದೆ. ಆದರೆ, ಅವರಿಗೆ ಯಾವ ಡ್ರೆಸ್‌ ಆಯ್ಕೆ ಮಾಡಬೇಕು? ಯಾವ ರೀತಿಯ ಪೋಸ್‌ ನೀಡಬೇಕು? ಯಾವ ಲೊಕೇಶನ್‌ ಸೂಕ್ತ? ಬೆಳಕು ಹೇಗಿರಬೇಕು? ಎಂಬುದರ ಬಗ್ಗೆ ಅನೇಕರಿಗೆ ಮಾಹಿತಿ ಇರುವುದಿಲ್ಲ. ಹಾಗಾದರೆ, ವಿಭಿನ್ನ ಫೋಟೋಶೂಟ್​ಗೆ ಯಾವ ಕ್ರಮ ಅನುಸರಿಸಬೇಕು ಎಂಬುದನ್ನು ನಾವೀಗ ತಿಳಿಯೋಣ.

ಉತ್ತಮ ಬಟ್ಟೆಗಳ ಆಯ್ಕೆ

ಫೋಟೋಶೂಟ್‌ನಲ್ಲಿ ಬಟ್ಟೆಗಳ ಆಯ್ಕೆಗೆ ಮುಖ್ಯ ಆದ್ಯತೆ ನೀಡಬೇಕು. ನಮ್ಮ ವ್ಯಕ್ತಿತ್ವಕ್ಕೆ ಹೊಂದುವ ಮತ್ತು ಕಂಫರ್ಟ್​​ ಕೊಡುವ ಉಡುಪನ್ನು ಆಯ್ಕೆ ಮಾಡಿ. ಸೀರೆ, ಚೂಡಿದಾರ್, ಲಾಂಗ್ ಡ್ರೆಸ್ ಅಥವಾ ವೆಸ್ಟರ್ನ್ ಔಟ್‌ಫಿಟ್ ಯಾವುದನ್ನೇ ಆಯ್ಕೆ ಮಾಡಿದರೂ ಅದರ ಬಣ್ಣ, ವಿನ್ಯಾಸ ಮತ್ತು ಲೊಕೇಶನ್‌ಗೆ ಹೊಂದಿಕೆಯಾಗುವಂತೆ ನೋಡಿಕೊಳ್ಳಿ. ಡ್ರೆಸ್‌ಗೆ ಹೊಂದುವ ಜ್ಯುವೆಲರಿ, ವಾಚ್, ಬ್ಯಾಗ್ ಅಥವಾ ಇತರ ಆಕ್ಸೆಸರೀಸ್ ಬಳಸಿದರೆ ಲುಕ್ ಇನ್ನಷ್ಟು ಚೆನ್ನಾಗಿ ಮೂಡಿಬರುತ್ತದೆ.

Also Read
ನಿಮ್ಮ ಮಕ್ಕಳು ದಿನವಿಡೀ ಫೋನ್​ನಲ್ಲೇ ಮುಳುಗಿರುತ್ತಾರಾ? ಹಾಗಾದರೆ ಅದನ್ನು ತಪ್ಪಿಸಲು ಇಲ್ಲಿದೆ ಸಿಂಪಲ್​ ಟಿಪ್ಸ್​...Smart Phones
Photoshoot Tips

ನಿಮ್ಮ ಮೇಕಪ್ ಹೀಗಿರಲಿ...

ಫೋಟೋಶೂಟ್‌ಗೆ ಡ್ರೆಸ್‌ ಎಷ್ಟು ಮುಖ್ಯವೋ, ಅದೇ ರೀತಿ ಹೇರ್‌ಸ್ಟೈಲ್‌ ಮತ್ತು ಮೇಕಪ್‌ ಕೂಡ ನಿಮ್ಮ ಲುಕ್‌ ಅನ್ನು ಮತ್ತಷ್ಟು ಸುಂದರವಾಗಿಸುತ್ತದೆ. ಹಾಗಾಗಿ ಮನಸ್ಸಿಗೆ ಬಂದಂತೆ ಹೆವಿ ಮೇಕಪ್‌ ಅಥವಾ ಯಾವುದೇ ಹೇರ್‌ಸ್ಟೈಲ್‌ ಮಾಡಿಕೊಳ್ಳುವ ಬದಲು, ನಿಮ್ಮ ಮುಖದ ಆಕಾರ ಮತ್ತು ವೈಶಿಷ್ಟ್ಯಗಳಿಗೆ ಹೊಂದುವ ನ್ಯಾಚುರಲ್‌ ಮೇಕಪ್‌ಗೆ ಆದ್ಯತೆ ನೀಡಿ. ಫೋಟೋಶೂಟ್‌ನ ಥೀಮ್‌ ಮತ್ತು ಡ್ರೆಸ್‌ಗೆ ತಕ್ಕಂತಹ ಸರಳ ಹೇರ್‌ಸ್ಟೈಲ್‌ ಆಯ್ಕೆ ಮಾಡಿಕೊಳ್ಳಿ. ಅದರಲ್ಲೂ ಫ್ರೀ ಹೇರ್‌ ಬಿಟ್ಟು ಫೋಟೋಶೂಟ್‌ ಮಾಡಿದರೆ ನಿಮ್ಮ ಲುಕ್‌ಗೆ ನ್ಯಾಚುರಲ್‌ ಮತ್ತು ಎಲಿಗಂಟ್‌ ಟಚ್‌ ಸಿಗುತ್ತದೆ.

ಬೇರೆ ಬೇರೆ ಪೋಸ್‌ಗಳಿರಲಿ

ಒಂದೇ ರೀತಿಯ ಪೋಸ್‌ಗಳಲ್ಲಿ ಫೋಟೋ ತೆಗೆಸಿಕೊಳ್ಳುವುದಕ್ಕಿಂತ ವಿಭಿನ್ನ ಪೋಸ್‌ಗಳಲ್ಲಿ ಫೋಟೋಶೂಟ್ ಮಾಡಿಸಿ. ಸೈಡ್‌ ಪೋಸ್‌, ವಾಕಿಂಗ್‌ ಪೋಸ್‌, ಕ್ಯಾಮೆರಾದಿಂದ ಸ್ವಲ್ಪ ದೂರ ನೋಡುತ್ತಿರುವ ಪೋಸ್‌, ಕುಳಿತುಕೊಂಡಿರುವ ಪೋಸ್‌ ಹಾಗೂ ನ್ಯಾಚುರಲ್‌ ಕ್ಯಾಂಡಿಡ್‌ ಕ್ಷಣಗಳನ್ನು ಸೆರೆಹಿಡಿಯಿರಿ. ಕೆಲವೊಮ್ಮೆ ಕ್ಯಾಮೆರಾವನ್ನು ನೇರವಾಗಿ ನೋಡದೆ, ಸಹಜವಾಗಿ ನಗುತ್ತಾ ಅಥವಾ ನಿಮ್ಮದೇ ಲೋಕದಲ್ಲಿ ಇರುವಂತೆ ಪೋಸ್‌ ನೀಡಿದರೆ ಫೋಟೋಗಳು ಇನ್ನಷ್ಟು ನ್ಯಾಚುರಲ್‌ ಮತ್ತು ಆಕರ್ಷಕವಾಗಿ ಮೂಡಿಬರುತ್ತವೆ.

ಲೊಕೇಶನ್ ಆಯ್ಕೆ ಉತ್ತಮವಾಗಿರಲಿ

ಫೋಟೋಶೂಟ್‌ನ ಲೊಕೇಶನ್ ಫೋಟೋದ ಒಟ್ಟಾರೆ ಲುಕ್ ಅನ್ನು ಬದಲಾಯಿಸಬಲ್ಲದು. ಪ್ರಕೃತಿ ಇಷ್ಟವಿದ್ದರೆ ಹಸಿರು ಗಿಡಮರಗಳು, ಉದ್ಯಾನವನ ಅಥವಾ ತೆರೆದ ಪ್ರದೇಶವನ್ನು ಆಯ್ಕೆ ಮಾಡಬಹುದು. ಸಾಂಪ್ರದಾಯಿಕ ಲುಕ್​‌ಗೆ ಹಳೆಯ ಕಟ್ಟಡಗಳು, ದೇವಾಲಯದ ಸುತ್ತಮುತ್ತಲಿನ ವಾಸ್ತುಶಿಲ್ಪ ಸ್ಥಳಗಳು ಉತ್ತಮವಾಗಿವೆ. ಮಾಡರ್ನ್​ ಲುಕ್ ಬೇಕಿದ್ದರೆ ಕೆಫೆ, ನಗರದ ರಸ್ತೆಗಳು, ನೂತನ ಕಟ್ಟಡಗಳು ಇರುವ ಜಾಗಗಳನ್ನು ಆಯ್ಕೆ ಮಾಡಬಹುದು.

ಫೋಟೋಶೂಟ್‌ಗೆ ಸಮಯ ನಿಗದಿಪಡಿಸಿ

ಫೋಟೋ ಚೆನ್ನಾಗಿ ಬರಲು ಲೈಟಿಂಗ್ ಬಹಳ ಮುಖ್ಯ. ಬೆಳಗ್ಗೆ ಅಥವಾ ಸಂಜೆ ಸೂರ್ಯನ ಬೆಳಕು ಮೃದುವಾಗಿರುವ ಸಮಯದಲ್ಲಿ ಫೋಟೋ ತೆಗೆದರೆ ಮುಖದ ಮೇಲೆ ಹೆಚ್ಚು ಕಠಿಣವಾದ ನೆರಳು ಬೀಳುವುದಿಲ್ಲ. ವಿಶೇಷವಾಗಿ ಸಂಜೆ ಸಮಯದಲ್ಲಿ ತೆಗೆದ ಫೋಟೋಗಳು ಸುಂದರವಾದ ವಾರ್ಮ ಲುಕ್ ನೀಡಬಹುದು. ಮಧ್ಯಾಹ್ನದ ತೀವ್ರ ಬಿಸಿಲಿನಲ್ಲಿ ಫೋಟೋಶೂಟ್‌ ತಪ್ಪಿಸಿ.

Also Read
ಇದೇನಾ ರಾಮಾಯಣದ ಸಂಜೀವಿನಿ? ಒಣಗಿ ಸತ್ತಂತಾದರೂ ನೀರಿನಲ್ಲಿ ಹಾವಿನಂತೆ ಹೊರಳಾಡಿ ಜೀವ ಪಡೆಯುವ ಸಸ್ಯ..! Sanjeevani plant
Photoshoot Tips

ಆತ್ಮವಿಶ್ವಾಸ, ನಗು ಇರಲಿ

ಉತ್ತಮ ಫೋಟೋಗೆ ಕೇವಲ ಅಲಂಕಾರ ಮಾತ್ರ ಸಾಕಾಗುವುದಿಲ್ಲ; ನಿಮ್ಮ ಎಕ್ಸ್ಪ್ರೆಶನ್ ಕೂಡ ಮುಖ್ಯ. ಪ್ರತಿಯೊಂದು ಫೋಟೋದಲ್ಲೂ ಒಂದೇ ರೀತಿಯಾಗಿ ನಗುವ ಬದಲು ಸೌಮ್ಯ ನಗು, ಸಹಜವಾದ ನಗು, ಗಂಭೀರ ನೋಟ ಮತ್ತು ನೈಸರ್ಗಿಕ ಭಾವಭಂಗಿಗಳನ್ನು ಪ್ರಯತ್ನಿಸಿ. ಕ್ಯಾಮೆರಾ ಮುಂದೆ ಆತ್ಮವಿಶ್ವಾಸದಿಂದ ಇದ್ದರೆ ಫೋಟೋಗಳು ಹೆಚ್ಚು ಸಹಜವಾಗಿ ಮೂಡಿಬರುತ್ತವೆ.

ಬೇರೆ ಬೇರೆ ಆ್ಯಂಗಲ್‌ಗಳು ಬಳಕೆ ಮಾಡಿ

ಫೋಟೋಶೂಟ್‌ನಲ್ಲಿ ಆ್ಯಂಗಲ್‌ಗಳು ಬಹಳ ಮುಖ್ಯವಾಗಿವೆ. ಒಂದೇ ಫೋಟೋವನ್ನು ಬೇರೆ ಬೇರೆ ಆ್ಯಂಗಲ್‌ಗಳಲ್ಲಿ ತೆಗೆದಾಗ, ಫೋಟೋಗಳಿಗೆ ವಿಭಿನ್ನತೆ ಮತ್ತು ಆಕರ್ಷಣೆ ಮೂಡುತ್ತದೆ. ಒಂದೇ ಸ್ಥಳದಲ್ಲಿದ್ದರೂ ಕ್ಲೋಸ್‌ಅಪ್, ಮಿಡ್‌ಶಾಟ್, ಫುಲ್-ಲೆಂಗ್ತ್, ಸೈಡ್ ಪ್ರೊಫೈಲ್ ಹಾಗೂ ಕ್ಯಾನ್ಡಿಡ್ ಶಾಟ್ಸ್‌ಗಳನ್ನು ತೆಗೆದುಕೊಳ್ಳುವುದು ಉತ್ತಮ. ಇದರಿಂದ ಫೋಟೋಗಳಲ್ಲಿ ವೈವಿಧ್ಯತೆ ಕಾಣಿಸುವುದರ ಜೊತೆಗೆ, ಪ್ರತಿಯೊಂದು ಪೋಸ್‌ ಕೂಡ ವಿಭಿನ್ನವಾಗಿ ಮತ್ತು ನ್ಯಾಚುರಲ್ ಆಗಿ ಕಾಣಿಸುತ್ತದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net