ನಿಮ್ಮ ಮಕ್ಕಳು ದಿನವಿಡೀ ಫೋನ್​ನಲ್ಲೇ ಮುಳುಗಿರುತ್ತಾರಾ? ಹಾಗಾದರೆ ಅದನ್ನು ತಪ್ಪಿಸಲು ಇಲ್ಲಿದೆ ಸಿಂಪಲ್​ ಟಿಪ್ಸ್​...Smart Phones

ಮೊಬೈಲ್ ಎನ್ನುವುದು ಒಂದು ಮಾಯಾ ಜಗತ್ತು. ಅದು ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಮಕ್ಕಳು ಸಹ ಕಾರ್ಟೂನ್‌ಗಳು, ಗೇಮ್ಸ್‌, ಶಾರ್ಟ್‌ ವಿಡಿಯೋಗಳು ಸೇರಿದಂತೆ ಮನರಂಜನೆಯ ಕಂಟೆಂಟ್‌ಗಳಿಗಾಗಿ ಫೋನ್ ಅಲ್ಲೇ ಮುಳುಗಿ ಹೋಗುತ್ತಿದ್ದಾರೆ.
Smart Phones
ಸಾಂದರ್ಭಿಕ ಚಿತ್ರ
Published on: 

Smart Phones : ಇಂದು ಬೆರಳ ತುದಿಯಲ್ಲಿ ಇಡೀ ಜಗತ್ತೇ ಇದೆ, ಆದರೆ ಮನುಷ್ಯನಿಗೆ ಬೇಕಾದ ಆರೋಗ್ಯ, ನಿಜವಾದ ಸಂಬಂಧಗಳು ಕ್ರಮೇಣ ಮಾಯವಾಗುತ್ತಿವೆ. ದಿನದಿಂದ ದಿನಕ್ಕೆ ತಂತ್ರಜ್ಞಾನ, ಸಂಪರ್ಕ ಸಾಧನಗಳು ಎಷ್ಟು ಬೆಳೆಯುತ್ತಿದೆಯೋ ಮನುಷ್ಯರ ನಡುವಿನ ಭಾವನಾತ್ಮಕ ಸಂಪರ್ಕಗಳು ಕೂಡ ಅಷ್ಟೇ ಕುಗ್ಗುತ್ತಿವೆ. ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣದಲ್ಲಿ ಇರುವ ನಮಗೆ, ನಿಜ ಜೀವನದ ಬಾಂಧವ್ಯಗಳಲ್ಲಿ 'ಆಫ್‌ಲೈನ್' ಆಗುವುದು ಅಭ್ಯಾಸವಾಗಿ ಹೋಗಿದೆ. ಅಚ್ಚರಿ ಎಂದರೆ ಇಂದಿನ ಮಕ್ಕಳು ಹುಟ್ಟುತ್ತಲೇ ಫೋನ್ ಹಿಡಿದುಕೊಂಡು ಬರುವಂತೆ ಆಗಿದೆ. ಇದರಿಂದ ಮಕ್ಕಳ ಆರೋಗ್ಯ, ಶಿಕ್ಷಣ, ಕುಟುಂಬದೊಂದಿಗೆ ಕಾಲಕಳೆಯುವ ಸಮಯದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾದರೆ ಇದಕ್ಕೆ ಕಾರಣ ಯಾರು? ಇದನ್ನು ತಪ್ಪಸಲು ತೆಗೆದುಕೊಳ್ಳಬೇಕಾದ ಕ್ರಮಗಳನ್ನು ತಿಳಿದುಕೊಳ್ಳೋಣ.

ಮಕ್ಕಳು ಫೋನ್ ನೋಡಲು ಕಾರಣಗಳು

ಮೊಬೈಲ್ ಎನ್ನುವುದು ಒಂದು ಮಾಯಾ ಜಗತ್ತು. ಅದು ಇಂದು ಪ್ರತಿಯೊಬ್ಬರ ಜೀವನದ ಅವಿಭಾಜ್ಯ ಅಂಗವಾಗಿದೆ. ವಿಶೇಷವಾಗಿ ಮಕ್ಕಳು ಸಹ ಕಾರ್ಟೂನ್‌ಗಳು, ಗೇಮ್ಸ್‌, ಶಾರ್ಟ್‌ ವಿಡಿಯೋಗಳು ಸೇರಿದಂತೆ ಮನರಂಜನೆಯ ಕಂಟೆಂಟ್‌ಗಳಿಗಾಗಿ ಫೋನ್ ಅಲ್ಲೇ ಮುಳುಗಿ ಹೋಗುತ್ತಿದ್ದಾರೆ. ಸ್ನೇಹಿತರ ಜತೆ ಆನ್‌ಲೈನ್‌ ಗೇಮ್ಸ್‌ ಆಡಲು, ಕಾರ್ಟೂನ್‌ಗಳನ್ನು ನೋಡಲು, ಕೆಲವು ಬಾರಿ ಓದಿಗೆ ಸಂಬಂಧಿಸಿದ ವಿಡಿಯೋ ನೋಡಲು ಮೊಬೈಲ್ ಬಳಸುವುದು ಸಾಮಾನ್ಯವಾಗಿದೆ.

Also Read
ಇದೇನಾ ರಾಮಾಯಣದ ಸಂಜೀವಿನಿ? ಒಣಗಿ ಸತ್ತಂತಾದರೂ ನೀರಿನಲ್ಲಿ ಹಾವಿನಂತೆ ಹೊರಳಾಡಿ ಜೀವ ಪಡೆಯುವ ಸಸ್ಯ..! Sanjeevani plant
Smart Phones

ಪೋಷಕರ ಪಾತ್ರವೇನು..?

ಮಕ್ಕಳು ಅತಿಯಾಗಿ ಫೋನ್ ಬಳಸಲು ಪೋಷಕರು ಸಹ ಕಾರಣರಾಗಿದ್ದಾರೆ. ತಮ್ಮ ಕೆಲಸದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು, ಮಕ್ಕಳು ಗಲಾಟೆ ಮಾಡದಿರಲಿ ಎಂಬ ಕಾರಣಕ್ಕೆ ಮತ್ತು ಅವರಿಗೆ ಬೇಗನೆ ಊಟ ಮಾಡಿಸಲು ಫೋನ್ ಕೈಗೆ ನೀಡುತ್ತಾರೆ. ಮತ್ತೊಂದೆಡೆ, ಮಕ್ಕಳು ತಮ್ಮ ಸುತ್ತಮುತ್ತಲಿನ ಹಿರಿಯರನ್ನು ನೋಡಿಯೇ ಪ್ರತಿಯೊಂದನ್ನೂ ಕಲಿಯುತ್ತಾರೆ. ಪೋಷಕರೇ ಇಡೀ ದಿನ ಫೋನ್‌ನಲ್ಲಿ ಮುಳುಗಿದ್ದಾಗ, ಮಕ್ಕಳು ಕೂಡ ಅದನ್ನೇ ಅನುಕರಿಸುತ್ತಾರೆ. ಮಕ್ಕಳಿಗೆ ಸೂಕ್ತ ಸಮಯ ನೀಡದೆ, ಅವರೊಂದಿಗೆ ಮಾತನಾಡದೆ ಅಥವಾ ಹೊರಾಂಗಣ ಆಟಗಳಿಗೆ ಪ್ರೋತ್ಸಾಹ ನೀಡದೆ ಫೋನ್ ನೀಡುವ ಮೂಲಕ ಪೋಷಕರೇ ಈ ಸಮಸ್ಯೆಗೆ ನೇರ ಹೊಣೆಯಾಗುತ್ತಾರೆ.

ಯಾವ ಪರಿಣಾಮ ಉಂಟುಮಾಡುತ್ತಿದೆ?

ಮಕ್ಕಳ ಬಾಲ್ಯ ಹೀಗೆಯೇ ಡಿಜಿಟಲ್ ಪರದೆಯೊಳಗೆ ಬಂಧಿಯಾಗುತ್ತಾ ಹೋದರೆ, ಮುಂದಿನ ಪೀಳಿಗೆಯು ನೈಜ ಭಾವನೆಗಳಿಲ್ಲದ ಯಂತ್ರಗಳಂತೆ ಬೆಳೆಯುವ ಅಪಾಯವಿದೆ. ಆಟದ ಮೈದಾನದಲ್ಲಿ ಸಿಗಬೇಕಿದ್ದ ದೈಹಿಕ ಶ್ರಮ, ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವ ಹಾಗೂ ಗೆಳೆಯರೊಂದಿಗಿನ ಸಹೋದರತ್ವದ ಭಾವನೆ ಎಲ್ಲವೂ ಮೆರೆಯಾಗಿ ಫೋನ್ ಸಿಗದಿದ್ದಾಗ ತೀವ್ರ ಹಠ ಮಾಡುವುದು, ಕೋಪಗೊಳ್ಳುವುದು ಮತ್ತು ಓದಿನಲ್ಲಿ ಏಕಾಗ್ರತೆ ಕಳೆದುಕೊಳ್ಳುವುದು ಸಾಮಾನ್ಯವಾಗುತ್ತಿದೆ. ಮೊಬೈಲ್ ಬಳಕೆ ಮಕ್ಕಳ ಶೈಕ್ಷಣಿಕ ಸಾಧನೆಯನ್ನು ಕುಗ್ಗಿಸುವುದಷ್ಟೇ ಅಲ್ಲದೆ, ಅವರನ್ನು ಸೈಬರ್ ಅಪಾಯಗಳು ಹಾಗೂ ಗೇಮಿಂಗ್ ದಾಸ್ಯಕ್ಕೆ ತಳ್ಳಿ ಅವರ ಭವಿಷ್ಯವನ್ನು ಹಾಳುಮಾಡುತ್ತಿದೆ.

ಫೋನ್ ಅಭ್ಯಾಸ ಹೇಗೆ ಕಡಿಮೆ ಮಾಡಬೇಕು?

ಪೋಷಕರು ಒಂದೇ ಬಾರಿಗೆ ಮಕ್ಕಳಿಂದ ಫೋನ್ ಕಸಿದುಕೊಳ್ಳಬೇಡಿ. ಅದು ಅವರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದಲೇ ಮೊದಲು ನೀವು ಫೋನ್ ಬಳಕೆಯನ್ನು ಕಡಿಮೆ ಮಾಡಿ. ಊಟದ ಸಮಯ, ಮಲಗುವ ಕೋಣೆ ಮತ್ತು ರಾತ್ರಿ ಮಲಗುವ ಮುನ್ನ ಫೋನ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ, ಆ ಸಮಯವನ್ನು ಕುಟುಂಬದೊಂದಿಗೆ ಕಳೆಯಲು ಮೀಸಲಿಡಿ. ಪ್ರತಿದಿನ ಸಂಜೆ ಮಕ್ಕಳನ್ನು ಹೊರಾಂಗಣ ಆಟಗಳಿಗೆ, ಸೈಕಲ್ ತುಳಿಯಲು ಅಥವಾ ನೆರೆಹೊರೆಯ ಮಕ್ಕಳ ಜೊತೆ ಬೆರೆಯಲು ಪ್ರೋತ್ಸಾಹಿಸುವುದು ಅತ್ಯಗತ್ಯ.

Also Read
ಇಲ್ಲಿನ ಜನಕ್ಕೆ ತೆಂಗು, ಹಣ್ಣು, ತರಕಾರಿಗಳಿಗಿಂತ ಮರದಲ್ಲಿರುವ ಈ ಕೆಂಪು ಇರುವೆಗಳ ಚಟ್ನಿ ಮಾಡಿ ತಿಂದ್ರೇನೆ ಖುಷಿ! Red Ants Chutney
Smart Phones

ಮಾಯವಾಗುತ್ತಿರುವುದೇನು.?

ಹಿಂದಿನ ಕಾಲದಲ್ಲಿ ಮಕ್ಕಳ ಬಾಲ್ಯ ಎಂದರೆ ಬೀದಿಯಲ್ಲಿ ಗೆಳೆಯರೊಂದಿಗೆ ಆಡುವ ಮಣ್ಣಿನ ಆಟಗಳು, ಅಜ್ಜ-ಅಜ್ಜಿಯಂದಿರು ಹೇಳುತ್ತಿದ್ದ ಚಂದಮಾಮನ ಕಥೆಗಳು ಹಾಗೂ ರಜೆಯ ದಿನಗಳಲ್ಲಿ ನೆಂಟರ ಮನೆಗೆ ಹೋಗಿ ಕಳೆಯುತ್ತಿದ್ದ ಸಂಭ್ರಮದ ಕ್ಷಣಗಳಾಗಿದ್ದವು. ಆದರೆ, ಇಂದಿನ ಇಂಟರ್ನೆಟ್ ಯುಗದಲ್ಲಿ ಆಟದ ಮೈದಾನಗಳ ಜಾಗವನ್ನು ಆನ್‌ಲೈನ್ ಗೇಮ್‌ಗಳು, ಯೂಟ್ಯೂಬ್ ವೀಡಿಯೊಗಳು ಮತ್ತು ಸೋಶಿಯಲ್ ಮೀಡಿಯಾ ರೀಲ್ಸ್‌ಗಳು ಆಕ್ರಮಿಸಿಕೊಂಡಿವೆ. ಹೀಗಾಗಿ, ಮಕ್ಕಳ ವಿಚಾರದಲ್ಲಿ ಪೋಷಕರಾದವರು ತುಂಬಾ ಯೋಚಿಸಿ ಹೆಜ್ಜೆ ಇಡುವುದು ತುಂಬಾನೇ ಮುಖ್ಯವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net