

Life : ಇಂದಿನ ಸಾಮಾಜಿಕ ಜಾಲತಾಣ ಯುಗದಲ್ಲಿ ಖಾಸಗಿ ಬದುಕನ್ನು ಕಾಪಾಡುವುದೇ ಒಂದು ದೊಡ್ಡ ಸವಾಲಾಗಿದೆ. ಮನೆ ಮತ್ತು ಮನಸ್ಸಿನಲ್ಲಿ ಇರುವುದನ್ನು ಎಲ್ಲರ ಮುಂದೆ ಹೇಳಿಕೊಳ್ಳುವುದು ಕೆಲವರಿಗೆ ಅಭ್ಯಾಸವಾಗಿ ಬದಲಾಗಿದೆ. ಅದರಲ್ಲೂ ಯೂಟ್ಯೂಬ್ ವೇದಿಕೆಯಲ್ಲಿ ತಮ್ಮ ಮನೆಯ ಪ್ರತಿಯೊಂದು ಸಂಗತಿಯನ್ನು ಹೇಳಿಕೊಂಡು ಹಣ ಗಳಿಸುವ ಮಂದಿಯೂ ಕೂಡ ಇದಾರೆ.
ಹೋಮ್ ಟೂರ್ ಹೆಸರಿನಲ್ಲಿ ತಮ್ಮ ಮನೆಯ ಪ್ರತಿಯೊಂದು ಮೂಲೆಯನ್ನು ತೋರಿಸುವುದರ ಜೊತೆಗೆ ತಮ್ಮ ವೈಯಕ್ತಿಕ ಬದುಕಿನ ಅನೇಕ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಇದನ್ನು ಲಕ್ಷಾಂತರ ಮಂದಿಯು ಕೂಡ ವೀಕ್ಷಣೆ ಮಾಡುತ್ತಾರೆ. ತಮ್ಮ ಬಗ್ಗೆ ವಿವರವಾಗಿ ಹೇಳಿಕೊಳ್ಳುವುದು ಅಭ್ಯಾಸವಾಗಿಬಿಟ್ಟಿದೆ. ಆದರೆ, ನಮ್ಮ ಬಗ್ಗೆ ಎಲ್ಲವನ್ನೂ ಹೇಳದೆ, ಕೆಲವು ವಿಷಯಗಳನ್ನು ಮರೆಮಾಡಿದರೆ ಎಷ್ಟು ಪ್ರಯೋಜನಗಳಿವೆ ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.
ನಿಮ್ಮ ಖಾಸಗಿ ಜೀವನವನ್ನು ರಹಸ್ಯವಾಗಿ ಇಟ್ಟುಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ಶಾಂತಿ ಸಿಗುತ್ತದೆ. ಎಲ್ಲವನ್ನೂ ವಿಡಿಯೋ ಮುಂದೆ ಹೇಳಿ, ಕಾಮೆಂಟ್ಗಳಲ್ಲಿ ಅವರ ಅಭಿಪ್ರಾಯಗಳನ್ನು ನೋಡಿ ಚಿಂತೆಗೆ ಬೀಳುವುದು ತಪ್ಪುತ್ತದೆ. ಅದರಲ್ಲೂ ಕೆಟ್ಟ ಕಾಮೆಂಟ್ಗಳು ಕೆಲವರಲ್ಲಿ ಮಾನಸಿಕ ನೆಮ್ಮದಿಯನ್ನೇ ಕಸಿದುಕೊಂಡು ಬಿಡುತ್ತದೆ. ಹೀಗಾಗಿ ನಮ್ಮ ಖಾಸಗಿ ಬದುಕನ್ನು ಮರೆಮಾಡುವುದರಿಂದ ಆ ರೀತಿಯ ಯಾವುದೇ ಒತ್ತಡ ಸೃಷ್ಟಿಯಾಗುವುದೇ ಇಲ್ಲ. ಆಧುನಿಕ ಪ್ರಪಂಚದ ಒತ್ತಡದ ಸಮಯದಲ್ಲಿ ಶಾಂತಿಯು ಅತ್ಯಗತ್ಯ ಎಂಬುದನ್ನು ವಿಶೇಷವಾಗಿ ಹೇಳಬೇಕಿಲ್ಲ.
ನಿಮ್ಮ ಜೀವನವನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಎಂದರೆ ಜನರಿಗೆ ನಿಮ್ಮ ಬಗ್ಗೆ ಯಾವುದೇ ಅಭಿಪ್ರಾಯವಿರುವುದಿಲ್ಲ. ಅಂದರೆ, ನಿಮ್ಮ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. ಹೀಗಾಗಿ ನಿಮ್ಮ ಬಗ್ಗೆ ಮಾತನಾಡಲು ಕೂಡ ಯಾವುದೇ ವಿಚಾರವೂ ಇರುವುದಿಲ್ಲ. ಈ ರೀತಿ ಮಾಡುವುದರಿಂದ ನಿಮ್ಮ ಮೇಲೆ ನಿಮಗೆ ನಿಯಂತ್ರಣ ಇರುತ್ತದೆ. ನಿಮ್ಮ ಬಗ್ಗೆ ಸುಳ್ಳು ಮಾಹಿತಿಯು ಕೂಡ ಇತರರಿಗೆ ಹೋಗಲು ಯಾವುದೇ ಮಾರ್ಗ ಇರುವುದಿಲ್ಲ.
ನಾವು ನಮ್ಮ ಫಾಲೋವರ್ಸ್ಗೆ ಎಲ್ಲವನ್ನೂ ಹೇಳುತ್ತಲೇ ಇದ್ದರೆ, ನಮ್ಮ ಸುತ್ತಮುತ್ತಲಿನವರೊಂದಿಗಿನ ನಮ್ಮ ಸಂಬಂಧ ದುರ್ಬಲಗೊಳ್ಳುವ ಸಾಧ್ಯತೆಯಿದೆ. ನಾವು ನಮ್ಮ ಜೀವನವನ್ನು ಖಾಸಗಿಯಾಗಿ ಇಟ್ಟುಕೊಂಡರೆ, ನಮ್ಮ ಸುತ್ತಮುತ್ತಲಿನವರೊಂದಿಗಿನ ಸಂಬಂಧವು ಬಲಗೊಳ್ಳುತ್ತದೆ. ನಿಮಗೆ ಏನನ್ನಾದರೂ ಹೇಳಲು ಬಯಸಿದರೆ ಸ್ನೇಹಿತರು ಹಾಗೂ ಕುಟುಂಬಸ್ಥರು ಇರುತ್ತಾರೆ. ಹೀಗಾಗಿ ನೀವು ಎಲ್ಲರಿಗೂ ಹೇಳಬೇಕಾಗಿಲ್ಲ.
ನಿಮ್ಮ ಬಗ್ಗೆ ಎಲ್ಲರಿಗೂ ಎಲ್ಲವೂ ತಿಳಿದಿರುವುದರಿಂದ, ಇತರರು ಏನು ಯೋಚಿಸುತ್ತಾರೋ ಎಂಬ ಭಯ ಇರುತ್ತದೆ. ಆದರೆ, ಖಾಸಗಿಯಾಗಿ ವಾಸಿಸುವವರಿಗೆ ಆ ರೀತಿಯ ಯಾವುದೇ ಭಯ ಇರುವುದಿಲ್ಲ. ಈ ವಿಷಯದಲ್ಲಿ ಅವರಿಗೆ ಹೆಚ್ಚಿನ ಸ್ವಾತಂತ್ರ್ಯ ಇರುತ್ತದೆ.