ಈ 5 ಲಕ್ಷಣಗಳು ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಅಪಾಯದಲ್ಲಿದೆ ಎಂದರ್ಥ! ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ | Kidney

ವಿಜಯವಾಣಿ (75)
Published on

Kidney Health: ನಮ್ಮ ದೇಹದ ಪ್ರತಿ ಅಂಗವು ತನ್ನದೇ ಆದ ಕಾರ್ಯವನ್ನು ಹೊಂದಿದೆ. ದೇಹವನ್ನು ಆರೋಗ್ಯಕರವಾಗಿಡಲು ಸಾಕಷ್ಟು ಕಸರತ್ತು ಕೂಡ ನಡೆಸುತ್ತವೆ. ಆದರೆ, ಅದಕ್ಕೆ ನಮ್ಮಿಂದಲೂ ಉತ್ತಮ ಸಾಥ್​ ಸಿಗಬೇಕು. ನಮ್ಮಿಂದ ಹೇಗಪ್ಪಾ? ಎಂಬ ಪ್ರಶ್ನೆಗೆ ಉತ್ತರ, ನಾವು ಸೇವಿಸುವ ಆಹಾರ ಮತ್ತು ರೂಢಿಸಿಕೊಂಡಿರುವ ಜೀವನಶೈಲಿ.

ಕಿಡ್ನಿ ಕೆಲಸಗಳೇನು?

ನಮ್ಮ ದೇಹದೊಳಗಿನ ಬಹುಮುಖ್ಯ ಅಂಗಾಗಳಲ್ಲಿ ಒಂದಾಗಿರುವ ಕಿಡ್ನಿ, ದೇಹದಲ್ಲಿನ ರಕ್ತವನ್ನು ಶುದ್ಧೀಕರಿಸುತ್ತವೆ ಮತ್ತು ಮೂತ್ರದ ರೂಪದಲ್ಲಿ ಅನಗತ್ಯ ಅಂಶಗಳನ್ನು ದೇಹದಿಂದ ಹೊರಹಾಕುತ್ತವೆ. ಅವು ರಕ್ತದೊತ್ತಡ ನಿಯಂತ್ರಣ, ಕೆಂಪು ರಕ್ತ ಕಣಗಳ ಉತ್ಪಾದನೆ ಮತ್ತು ಎಲೆಕ್ಟ್ರೋಲೈಟ್ ಸಮತೋಲನದಂತಹ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತವೆ. ಅದಕ್ಕಾಗಿಯೇ ಮೂತ್ರಪಿಂಡದ ಆರೋಗ್ಯವು ಬಹಳ ಮುಖ್ಯ. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ, ಅನೇಕ ಜನರು ಮೂತ್ರಪಿಂಡದ ಸಮಸ್ಯೆಗಳಿಂದ ಬಳಲುತ್ತಿರುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಈ ಸಮಸ್ಯೆಯಿಂದಾಗಿ ಕೆಲವರು ಚಿಕ್ಕ ವಯಸ್ಸಿಗೇ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಆದಾಗ್ಯೂ, ಮೂತ್ರಪಿಂಡದ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಿದರೆ, ಮೊದಲ ಹಂತದಲ್ಲೇ ಗುಣಪಡಿಸಿಕೊಳ್ಳುವ ಸಾಧ್ಯತೆಗಳಿವೆ.

ಮೂತ್ರಪಿಂಡದ ಆರೋಗ್ಯವನ್ನು ಹೇಗೆ ವೃದ್ಧಿಸುವುದು ಎಂಬುದನ್ನು ತಿಳಿಯುವುದು ಎಷ್ಟು ಮುಖ್ಯವೋ, ಅದರ ಸಮಸ್ಯೆಗಳ ಬಗ್ಗೆ ತಿಳಿದುಕೊಳ್ಳುವುದು ಕೂಡ ಅಷ್ಟೇ ಮುಖ್ಯ. ಆರಂಭಿಕ ಹಂತದಲ್ಲಿಯೇ ಕಿಡ್ನಿ ಸಮಸ್ಯೆಗಳನ್ನು ನಾವು ಪತ್ತೆಹಚ್ಚಿದರೆ, ಸೂಕ್ತ ಚಿಕಿತ್ಸೆ ಮೂಲಕ ಉಲ್ಬಣಗೊಳ್ಳುವ ಮೊದಲೇ ಗುಣಪಡಿಸಿಕೊಳ್ಳಬಹುದು. ಅಷ್ಟಕ್ಕೂ ಪತ್ತೆಹಚ್ಚುವುದು ಹೇಗೆ? ಆ ಲಕ್ಷಣಗಳು ಯಾವುವು? ಎಂಬುದನ್ನು ಇಲ್ಲಿ ವಿವರವಾಗಿ ತಿಳಿಯೋಣ.

1. ಮೂತ್ರದಲ್ಲಿನ ಬದಲಾವಣೆಗಳು

ಆರೋಗ್ಯದ ಮೇಲೆ ಪರಿಣಾಮ ಬೀರುವ ಮೂತ್ರಪಿಂಡದ ಸಮಸ್ಯೆಗಳ ಮೊದಲ ಸೂಚನೆಯೇ ಮೂತ್ರ. ಮೂತ್ರದ ಬಣ್ಣದಲ್ಲಿನ ಬದಲಾವಣೆಗಳು, ನೊರೆ, ರಕ್ತ ಹರಿಯುವಿಕೆ, ಪದೇ ಪದೇ ಮೂತ್ರ ವಿಸರ್ಜನೆ, ವಿಶೇಷವಾಗಿ ರಾತ್ರಿಯಲ್ಲಿ, ಮತ್ತು ಮೂತ್ರ ವಿಸರ್ಜನೆಯಲ್ಲಿ ತೊಂದರೆ ಇವೆಲ್ಲವೂ ನಿಮ್ಮ ಮೂತ್ರಪಿಂಡಗಳು ತ್ಯಾಜ್ಯವನ್ನು ಸರಿಯಾಗಿ ಹೊರಹಾಕುತ್ತಿಲ್ಲ ಎಂಬ ಮುನ್ಸೂಚನೆ. ಆದ್ದರಿಂದ, ನೀವು ಈ ಯಾವುದೇ ಲಕ್ಷಣಗಳನ್ನು ಅನುಭವಿಸಿದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ.

2. ಕಾಲು, ತೋಳು ಮತ್ತು ಮುಖದ ಊತ

ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ದ್ರವವನ್ನು ತೆಗೆದುಹಾಕುತ್ತವೆ. ಆದರೆ, ಅವು ಸರಿಯಾಗಿ ಕೆಲಸ ಮಾಡದಿದ್ದಾಗ, ದೇಹದಲ್ಲಿ ದ್ರವವು ಸಂಗ್ರಹವಾಗುತ್ತದೆ. ಪರಿಣಾಮವಾಗಿ, ಕಾಲುಗಳು, ಮೊಣಕಾಲುಗಳು, ಪಾದಗಳು, ಕೈಗಳು ಮತ್ತು ಕಣ್ಣುಗಳ ಸುತ್ತಲೂ ಊದಿಕೊಳ್ಳುತ್ತವೆ. ಮೂತ್ರಪಿಂಡಗಳು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಸೂಚನೆಯಿದು.

3. ಅತಿಯಾದ ಆಯಾಸ ಮತ್ತು ನಿಶಕ್ತಿ

ಕಿಡ್ನಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಅಗತ್ಯವಾದ ಹಾರ್ಮೋನ್ ಎರಿಥ್ರೋಪೊಯೆಟಿನ್ ಅನ್ನು ಉತ್ಪಾದಿಸುತ್ತವೆ. ಆದಾಗ್ಯೂ, ಅವು ಸರಿಯಾಗಿ ಕಾರ್ಯನಿರ್ವಹಿಸದಿದ್ದರೆ, ರಕ್ತಹೀನತೆ ಉಂಟಾಗುತ್ತದೆ. ದೇಹವು ಸಾಕಷ್ಟು ಆಮ್ಲಜನಕವನ್ನು ಪಡೆಯುವುದಿಲ್ಲ. ಇದು ಆಯಾಸ, ಶಕ್ತಿಯ ಕೊರತೆ ಮತ್ತು ತಲೆನೋವಿನಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಪ್ರತಿದಿನ ಸಾಕಷ್ಟು ನಿದ್ರೆ ಪಡೆದರೂ ನೀವು ಆಯಾಸ ಅನುಭವಿಸುತ್ತಿದ್ದರೆ, ಇದು ಮೂತ್ರಪಿಂಡದ ಸಮಸ್ಯೆಗಳ ಸಂಕೇತ ಎಂಬುದು ನಿಮ್ಮ ಗಮನದಲ್ಲಿರಲಿ.

4. ಒಣ ಚರ್ಮ (ಡ್ರೈ ಸ್ಕಿನ್​)

ಮೂತ್ರಪಿಂಡಗಳು ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕದಿದ್ದರೆ, ಅವು ರಕ್ತದಲ್ಲಿ ಶೇಕರಣೆಯಾಗುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಚರ್ಮವು ಒಣಗುತ್ತದೆ ಮತ್ತು ತೀವ್ರ ತುರಿಕೆಗೆ ಕಾರಣವಾಗುತ್ತದೆ. ತಲೆ, ಕೈ ಮತ್ತು ಹೊಟ್ಟೆಯ ಭಾಗಗಳಲ್ಲಿ ಕೆಲವು ಬದಲಾವಣೆಗಳನ್ನು ತರುತ್ತದೆ. ಇವುಗಳು ಕೂಡ ಕಿಡ್ನಿ ಸಮಸ್ಯೆಯ ಒಂದು ಲಕ್ಷಣ.

5. ಉಸಿರಾಟದ ತೊಂದರೆ, ಎದೆಯಲ್ಲಿ ಭಾರ

ಮೂತ್ರಪಿಂಡಗಳು ವಿಫಲವಾದರೆ, ಶ್ವಾಸಕೋಶಕ್ಕೆ ದ್ರವ ಪ್ರವೇಶಿಸುವ ಅಪಾಯವಿರುತ್ತದೆ. ಇದರ ಪರಿಣಾಮವಾಗಿ, ಮೆಟ್ಟಿಲುಗಳನ್ನು ಹತ್ತುವಾಗ ಎದೆಯಲ್ಲಿ ಒತ್ತಡ, ಉಸಿರಾಟದ ತೊಂದರೆ ಮತ್ತು ಆಯಾಸವನ್ನು ಅನುಭವಿಸಬಹುದು. ನೀವು ಅಂತಹ ಲಕ್ಷಣಗಳನ್ನು ಅನುಭವಿಸಿದರೆ, ವೈದ್ಯರನ್ನು ಸಂಪರ್ಕಿಸುವುದು ಒಳಿತು.

ಮೂತ್ರಪಿಂಡದ ಆರೋಗ್ಯಕ್ಕೆ ಈ ಸಲಹೆಗಳ ಪಾಲಿಸಿ

  • ದಿನಕ್ಕೆ 2ರಿಂದ 3 ಲೀಟರ್ ನೀರು ಕುಡಿಯಿರಿ.
  • ಉಪ್ಪು ಮತ್ತು ಸಂಸ್ಕರಿಸಿದ ಆಹಾರವನ್ನು ಕಡಿತಗೊಳಿಸಿ.
  • ಮಧುಮೇಹ ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುವುದು ಬಹಳ ಉತ್ತಮ.
  • ಮಧ್ಯಪಾನ ಮತ್ತು ಧೂಮಪಾನ ತ್ಯಜಿಸಿ.
  • ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಲು ಮರೆಯದಿರಿ.

ಎಚ್ಚರಿಕೆ ವಹಿಸಿ!

ಮೂತ್ರಪಿಂಡದ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಿ, ಗುಣಪಡಿಸಿಕೊಳ್ಳದಿದ್ದರೆ, ಅವು ಗಂಭೀರ ಹಂತಗಳಿಗೆ ಹೋಗಬಹುದು. ಡಯಾಲಿಸಿಸ್ ಮತ್ತು ಕಸಿ ಚಿಕಿತ್ಸೆಗಳ ಮೊರೆ ಹೋಗುವ ಅನಿವಾರ್ಯತೆ ಮತ್ತು ಅಗತ್ಯ ಕಾಡಬಹುದು. ಹೀಗಾಗಿ, ಮೇಲ್ಕಂಡ ರೋಗಲಕ್ಷಣಗಳನ್ನು ಆರಂಭಿಕ ಹಂತದಲ್ಲಿಯೇ ಗುರುತಿಸುವ ಮೂಲಕ ನಿಮ್ಮ ಕಿಡ್ನಿಯನ್ನು ಕಾಪಾಡಿಕೊಳ್ಳಬಹುದು,(ಏಜೆನ್ಸೀಸ್).

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net