

ಮೈಸೂರು: ಡಾ.ರಾಜ್ಕುಮಾರ್ ಅವರ ಯಾವುದೇ ಸಿನಿಮಾಗಳು ಕೇವಲ ಸಿನಿಮಾ ಮಾತ್ರವಾಗಿರದೆ ಅದು ಸಮಾಜಕ್ಕೆ ನೀಡುವ ಬಹುದೊಡ್ಡ ಸಂದೇಶವಾಗಿರುತ್ತದೆ. ಹಾಗಾಗಿ ರಾಜ್ಕುಮಾರ್ ಸಿನಿಮಾವನ್ನು ಮತ್ತೆ ಮತ್ತೆ ನೋಡಬೇಕು. ಜೀವನ ಮೌಲ್ಯಗಳನ್ನು ಕಲಿಯಲು ರಾಜ್ ಕುಮಾರ್ ಸಿನಿಮಾಗಳನ್ನು ನೋಡಬೇಕು ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಡಿ.ವಿ. ಪರಮಶಿವಮೂರ್ತಿ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ನಾಡೋಜ ಡಾ.ರಾಜ್ಕುಮಾರ್ ಅಧ್ಯಯನ ಪೀಠ, ನಗರದ ಶೇಷಾದ್ರಿಪುರಂ ಪದವಿ ಕಾಲೇಜು ವತಿಯಿಂದ ಕಾಲೇಜು ಸಭಾಂಗಣದಲ್ಲಿ ಗುರುವಾರ ಸಾಕ್ಷೃಚಿತ್ರ ಹಾಗೂ ಕೃತಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿ, ಡಾ.ರಾಜ್ ಕುಮಾರ್ ಅವರ ಸಿನಿಮಾಗಳು ಕೇವಲ ಸಿನಿಮಾ ಮಾತ್ರವಲ್ಲ, ಸಂಸ್ಕೃತಿ ನಿರ್ಮಾಣದಲ್ಲೂ ಮಹತ್ವದ ಪಾತ್ರ ವಹಿಸಿವೆ. ರಾಜ್ಕುಮಾರ್ ಅವರ ಸಿನಿಮಾಗಳನ್ನು ನೋಡುವ ಯುವಜನರ ಸಂಖ್ಯೆ ಇದೀಗ ಕಡಿಮೆಯಾಗಿರಬಹುದು. ಆದರೆ, ವಯಸ್ಕರು ಹೆಚ್ಚಿನ ಸಂಖ್ಯೆಯಲ್ಲಿ ಇಂದಿಗೂ ರಾಜ್ಕುಮಾರ್ ಅವರ ಸಿನಿಮಾಗಳನ್ನೇ ಹೆಚ್ಚು ಇಷ್ಟ ಪಡುತ್ತಾರೆ. ರಾಜ್ಕುಮಾರ್ ಸಿನಿಮಾ ಮನಸ್ಸನ್ನು ವಿಕಸನಗೊಳಿಸುತ್ತವೆ ಎಂದರು.
ಡಾ.ರಾಜ್ಕುಮಾರ್ ನಟಿಸಿದಂತಹ ಉತ್ತವ ಉತ್ತಮ ಸಿನಿಮಾಗಳು ಪ್ರಸ್ತುತ ಬರುತ್ತಿಲ್ಲ. ರಾಜ್ಕುಮಾರ್ ಸಿನಿಮಾಗಳು ನಮಗೆ ದಾರಿ ತೊರುವ ಹಾಗೂ ನಮ್ಮನ್ನು ತಿದ್ದುವ ಸಿನಿಮಾಗಳಾಗಿವೆ. ಪ್ರಸ್ತುತ ಕೆಲವೊಂದು ಸಿನಿಮಾಗಳು ನೋಡಿದಾಗ ಮನಸ್ಸು ವಿಕಾರಕ್ಕೆ ಒಳಗಾಗುತ್ತದೆ. ಆದರೆ, ಡಾ.ರಾಜ್ಕುಮಾರ್ ಸಿನಿಮಾ ನೋಡಿದರೆ ಮನಸ್ಸು ಪ್ರಶಾಂತಗೊಳ್ಳುತ್ತದೆ. ನಾವು ಸಹ ಆದರ್ಶದ ಬದುಕನ್ನು ರೂಪಿಸಿಕೊಳ್ಳಬೇಕು ಎಂಬ ಮನೋಭಾವನೆ ಮೂಡುತ್ತದೆ. ಹಾಗಾಗಿ ರಾಜ್ಕುಮಾರ್ ಸಿನಿಮಾಗಳನ್ನು ಹಳೆಯ ಸಿನಿಮಾ ಎಂದು ತಿರಸ್ಕರಿಸದೆ ಅವರ ಸಿನಿಮಾಗಳನ್ನು ನೋಡಿ ಪುನಶ್ಚೇತನಗೊಳ್ಳಬೇಕು ಎಂದು ಹೇಳಿದರು.
ಚಲನಚಿತ್ರ ನಟ ಮಂಡ್ಯ ರಮೇಶ್ ಮಾತನಾಡಿ, ಆಸ್ಕರ್ ಪ್ರಶಸ್ತಿಯನ್ನೂ ಮೀರಿದಂತಹ ದೊಡ್ಡನಟ ಡಾ.ರಾಜ್ಕುಮಾರ್. ಆದರೆ, ಅವರನ್ನು ಏತಕ್ಕೆ ಕನ್ನಡ ಜನತೆಗೆ ತಲುಪಿಸಲು ಸಾಧ್ಯವಾಗಿಲ್ಲ ಎಂಬುದು ಬೇಸರದ ವಿಚಾರ. ನಟನೆ ಕಲಿಯಲು ಬಯಸುವವರು ಮೊದಲು ಡಾ.ರಾಜ್ಕುಮಾರ್ ಅವರ ನಟನೆಯನ್ನು ನೋಡಿ ಕಲಿಯಬೇಕು ಎಂದು ಹೇಳಿದರು.
ಈ ಸಂದರ್ಭ ಲೇಖಕ ಪ್ರೊ.ಜಿ. ಪ್ರಶಾಂತ್ ನಾಯಕ್ ರಚನೆಯ ‘ಡಾ.ರಾಜ್ಕುಮಾರ್: ಬಹುತ್ವದ ಪ್ರಜ್ಞೆ’ ಕೃತಿ, ಲೇಖಕ ಪ್ರೊ.ಡಿ. ಸತೀಶ್ಚಂದ್ರ ರಚನೆಯ ‘ಡಾ.ರಾಜ್ ಚಿತ್ರಗೀತೆಗಳಲ್ಲಿ ಬಾಂಧವ್ಯದ ನೆಲೆಗಳು’ ಕೃತಿ ಮತ್ತು ಬಿ.ಎಂ. ಗಿರಿರಾಜ್ ನಿರ್ದೇಶನದ ‘ಡಾ.ರಾಜ್ಕುಮಾರ್: ಒಂದು ಕಿರು ಅವಲೋಕನ’ ಸಾಕ್ಷಾೃಚಿತ್ರವನ್ನು ಚಲನಚಿತ್ರ ನಟ ಮಂಡ್ಯ ರಮೇಶ್ ಬಿಡುಗಡೆ ಮಾಡಿದರು.
ವೇದಿಕೆಯಲ್ಲಿ ನಾಡೋಜ ಡಾ.ರಾಜ್ಕುಮಾರ್ ಅಧ್ಯಯನ ಪೀಠದ ಸಂಚಾಲಕ ಡಾ.ಎ.ಎಸ್. ಪ್ರಭಾಕರ, ಶೇಷಾದ್ರಿಪುರಂ ಪದವಿ ಕಾಲೇಜು ಕಾರ್ಯದರ್ಶಿ ವೂಡೇ ಪಿ. ಕೃಷ್ಣ, ಲೇಖಕರಾದ ಪ್ರೊ.ಜಿ. ಪ್ರಶಾಂತ್ ನಾಯಕ್, ಪ್ರೊ.ಡಿ. ಸತೀಶ್ ಚಂದ್ರ, ಸಾಕ್ಷೃಚಿತ್ರ ನಿರ್ದೇಶಕ ಬಿ.ಎಂ. ಗಿರಿರಾಜ್, ಚಲನಚಿತ್ರ ನಿರ್ದೇಶಕ ಪ್ರಕಾಶ್ರಾಜ್ ಮೇಹು, ನಿವೃತ್ತ ಪ್ರಾಧ್ಯಾಪಕ ಪ್ರೊ.ಎಂ. ಕೃಷ್ಣೇಗೌಡ, ಶೇಷಾದ್ರಿಪುರಂ ಕಾಲೇಜಿನ ಪ್ರಾಂಶುಪಾಲರಾದ ಡಾ.ಸೌಮ್ಯ ಈರಪ್ಪ ಹಾಗೂ ಇತರರು ಇದ್ದರು.