ಗರ್ಭಿಣಿಯರಲ್ಲಿ ಮಧುಮೇಹ ಬರದಂತೆ ತಡೆಯಲು ಸಾಧ್ಯ

pregnant women
Published on
Aditi
ಡಾ. ಅದಿತಿ ಕುಲಕರ್ಣಿ

ವಿಶ್ವ ಮಧುಮೇಹ ದಿನದಂದು ಪ್ರಸೂತಿ ತಜ್ಞೆಯು ಡಯಾಬಿಟೀಸ್ ಬಗ್ಗೆ ಲೇಖನ ಬರೆಯುವುದರ ಔಚಿತ್ಯವೇನೆಂದು ಹುಬ್ಬೇರಿಸಬೇಡಿ. ಗರ್ಭಿಣಿಗೂ, ಡಯಾ ಬಿಟೀಸ್​ಗೂ ನೇರ ಸಂಬಂಧ ಇದೆ.

‘ಅಡೆತಡೆಗಳನ್ನು ತೊಡೆದು ಹಾಕೋಣ, ಅಂತರವನ್ನು ನಿಮೂಲನೆ ಮಾಡೋಣ’ ಎಂಬುದು ಈ ವರ್ಷದ ಮಧುಮೇಹ ದಿನಾಚರಣೆಯ ಧ್ಯೇಯವಾಕ್ಯವಾಗಿದೆ. ಸಕ್ಕರೆ ಕಾಯಿಲೆ ತಗುಲಿದ ಮಹಿಳೆಗೆ ಗರ್ಭ ಧರಿಸುವುದೇ ಒಂದು ಘೊರ ಸಮಸ್ಯೆ. ಅಕಸ್ಮಾತ್ ಗರ್ಭ ಧಾರಣೆ ಮಾಡಿದರೂ ಅನೇಕ ಅಪಾಯಗಳು, ತೊಂದರೆಗಳು ಉದ್ಭವಿಸುತ್ತವೆ. ಅವಳ ಗರ್ಭದಲ್ಲಿ ಬೆಳೆಯುತ್ತಿರುವ ಭ್ರೂಣಕ್ಕೇ ಅವು ಅಪಾಯದ ಬಾಣ ಬಿಟ್ಟರೂ ಅಚ್ಚರಿ ಇಲ್ಲ. ಆದ್ದರಿಂದ ಎಲ್ಲ ಗರ್ಭಿಣಿಯರು, ಸಾಮಾನ್ಯ ಮಹಿಳೆಯರು ಮಧುಮೇಹ ಹಾಗೂ ಗರ್ಭಧಾರಣೆಯ ಬಗ್ಗೆ ತಿಳಿವಳಿಕೆ ಪಡೆದುಕೊಳ್ಳುವುದು ಅತ್ಯಗತ್ಯ.

ಏನಿದು ಗೆಸ್ಟೇಶನಲ್ ಡಯಾಬಿಟೀಸ್?: ಇದನ್ನು ‘ಗರ್ಭ ಧಾರಣೆಯ ಮಧುಮೇಹ’ ಎಂದು ಕನ್ನಡೀಕರಿಸಬಹುದು. ಮಹಿಳೆಗೆ ಗರ್ಭಧಾರಣೆಯ ಪೂರ್ವದಲ್ಲಿ ಒಂದಿನಿತೂ ಡಯಾಬಿಟೀಸ್ ಲಕ್ಷಣಗಳೇ ತೋರುವುದಿಲ್ಲ. ಆದರೆ, ಶರವೇಗದಲ್ಲಿ ಬೆಳೆಯುತ್ತಿರುವ ಗರ್ಭಾವಸ್ಥೆಯ ಸಮಯದಲ್ಲಿ ಈ ಮಾರಿ ಕಾಣಿಸಿ ಕೊಳ್ಳುತ್ತದೆ. ರಕ್ತದಲ್ಲಿ ತೀವ್ರ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿಕೊಳ್ಳುತ್ತದೆ. ಅದರಿಂದ ಗರ್ಭಿಣಿಗೂ, ಭ್ರೂಣಕ್ಕೂ ಅಪಾಯ ಆಗುವ ಸಾಧ್ಯತೆ ಇರುತ್ತದೆ.

ಕಾರಣ ಏನು?: ಗರ್ಭಿಣಿಯರ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಾಗಲು ಇದಮಿತ್ಥಂ ಎಂದು ಹೇಳಬಹುದಾದ ನಿರ್ದಿಷ್ಟ ಕಾರಣ ಸಿಗುವುದಿಲ್ಲ. ಆದರೂ ಗರ್ಭಧಾರಣೆಯ ಅವಧಿಯಲ್ಲಿ ಮಹಿಳೆಯ ದೇಹದಲ್ಲಿ ವಿವಿಧ ಹಾರ್ವೇನುಗಳು ಸ್ರವಿಸುವುದು, ಉತ್ಪತ್ತಿಯಾಗುವುದು ನಡೆದೇ ಇರುತ್ತದೆ. ಅವು ಅಷ್ಟಕ್ಕೇ ಸೀಮಿತ ಆಗುವುದಿಲ್ಲ. ಈ ಹಾರ್ವೇನುಗಳು ಇನ್ಸುಲಿನ್​ಗೆ ಮಹಿಳೆಯ ಪ್ರತಿರೋಧಕ ಶಕ್ತಿಯನ್ನು ಭಾರಿ ಪ್ರಮಾಣದಲ್ಲಿ ವೃದ್ಧಿಸಿ, ಅವಳಲ್ಲಿ ಸಕ್ಕರೆ ಸಹನ ಶಕ್ತಿಯನ್ನು ದುರ್ಬಲಗೊಳಿಸುತ್ತದೆ.

ಗೆಸ್ಟೇಶನಲ್ ಡಯಾಬಿಟೀಸ್​ನಿಂದ ಏನು ಅಪಾಯ?: ಗರ್ಭಿಣಿಗೆ ಡಯಾಬಿಟೀಸ್ ರೋಗ ತಗುಲಿದರೆ ಜನನ ಹೊಂದುವ ಮಗು ‘ಬಿನ್ ಬೇಬಿ’ ಆಗಬಹುದು. ಕೂಸಿನ ಗಾತ್ರ ಅತಿ ಹೆಚ್ಚು ಪ್ರಮಾಣದಲ್ಲಿ ಏರಿಕೆಯಾಗಿ ಹೆರಿಗೆಯ ಸಮಯದಲ್ಲಿ ವಿಪರೀತ ತೊಂದರೆಗೆ, ಅನನುಕೂಲತೆಗೆ ಕಾರಣ ಆಗಬಹುದು. ಇಂತಹ ಮಕ್ಕಳಿಗೆ ಇನ್ನೆರಡು ಅಪಾಯಗಳು ಎರಗುವ ಸಾಧ್ಯತೆ ಇರುತ್ತದೆ. ಮೊದಲನೆಯದು, ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುವುದು. ಮತ್ತೊಂದು, ಮಗುವಿಗೆ ಕಾಮಾಲೆ ತಗುಲುವುದು. ಆದರೆ, ಎದೆಗುಂದದಿರಿ. ಗರ್ಭಿಣಿಯು ತನ್ನ ರಕ್ತದಲ್ಲಿಯ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಟ್ಟುಕೊಂಡರೆ ಈ ಅಪಾಯಗಳನ್ನು ದೂರ ಇಡಬಹುದು.

ಹೆರಿಗೆ ನಂತರ ಅಪಾಯ ಇದೆಯೇ?: ಗರ್ಭಿಣಿಗೆ ಡಯಾಬಿಟೀಸ್ ತಗುಲಿದರೆ ಹೆರಿಗೆ ನಂತರ ಟೈಪ್- 2 ಡಯಾಬಿಟೀಸ್​ಅನ್ನು ಅವರು ಉಚಿತವಾಗಿ ಬಳುವಳಿ ಪಡೆಯುವ ಸಾಧ್ಯತೆ ಇರುತ್ತದೆ. ಅಪರೂಪಕ್ಕೆಂಬಂತೆ ಕೆಲವರಿಗೆ ಟೈಪ್- 1 ಡಯಾಬಿಟೀಸ್ ತಗುಲಬಹುದು. ಮಹಿಳೆ ತನ್ನ ಆಯುಷ್ಯ ಪೂರ್ತಿ ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳಲೇಬೇಕಾದ ಸ್ಥಿತಿ ಎದುರಾದೀತು. ಸಾಲದೆಂಬಂತೆ, ಅವಳಿಗೆ ಜನಿಸಿದ ಮಕ್ಕಳು ಬಾಲ್ಯಾವಸ್ಥೆಯಲ್ಲಿಯೇ ವಿಪರೀತ ಬೊಜ್ಜು ಹೊಂದಿ ಮುಂದೆ ಅವರಿಗೂ ಈ ಡಯಾಬಿಟೀಸ್ ಎರಗಬಹುದು.

ಬಹಳಷ್ಟು ಗರ್ಭಿಣಿಯರು ಹಿತಮಿತವಾದ ಆಹಾರ ಕ್ರಮದಿಂದ, ಆಹಾರದಲ್ಲಿ ಕೆಲವು ಬದಲಾವಣೆ ಮಾಡಿಕೊಂಡು, ರಭಸವಾದ ಕಾಲ್ನಡಿಗೆ, ವ್ಯಾಯಾಮದಿಂದ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸಂತೋಷದ ಸಂಗತಿ. ಆದರೆ, ಹಲವರು ಇನ್ಸುಲಿನ್ ತೆಗೆದುಕೊಳ್ಳುವುದು ಮತ್ತು ಮಧುಮೇಹ ಪ್ರತಿರೋಧಕ ಮಾತ್ರೆಗಳನ್ನು ಸೇವಿಸುವುದು ಕಡ್ಡಾಯವಾಗುವುದು ದುರದೃಷ್ಟಕರ. ವಯಸ್ಸು 35 ಮೀರಿದ ಮಹಿಳೆ ಗರ್ಭ ಧರಿಸಿದರೆ ತೊಂದರೆಗಳಿಗೆ ಸಿಲುಕುವ ಸಂಭವ ಜಾಸ್ತಿ. ಆದ್ದರಿಂದಲೇ ಪ್ರಾಯಶಃ ಪೂರ್ವಜರು ಮಹಿಳೆಗೆ ಬೇಗನೇ ಮದುವೆ ಮಾಡಿ, 26ರಿಂದ 30 ವಯಸ್ಸಿನವಳಾಗುವುದರೊಳಗೆ ಮಕ್ಕಳನ್ನು ಪಡೆಯುವಂತೆ ಜಾಗರೂಕತೆ ವಹಿಸುತ್ತಿದ್ದರು. ಅನೇಕ ಬಾರಿ ಮಧುಮೇಹ ಇರುವ ಗರ್ಭಿಣಿಯರಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ.

ಕೆಲವರಲ್ಲಿ ಮಾತ್ರ ಅತಿಯಾದ ಬಾಯಾರಿಕೆ, ಪದೇಪದೆ ಮೂತ್ರ ವಿಸರ್ಜನೆ, ಆಯಾಸ, ದಣಿವು, ಮಂದದೃಷ್ಟಿ ಕಾಣಿಸಿಕೊಳ್ಳಬಹುದು. ಗರ್ಭಧಾರಣೆಯ ಪೂರ್ವದಲ್ಲಿ ಸ್ತ್ರೀರೋಗ ತಜ್ಞರ ಬಳಿ ಆಪ್ತಸಮಾಲೋಚನೆ ಮಾಡುವದು ಇಂದಿನ ದಿನಗಳಲ್ಲಿ ಕಡ್ಡಾಯ. ಆಧುನಿಕ ಜೀವನ ಶೈಲಿ, ಮಾನಸಿಕ ಒತ್ತಡ, ನಿಯಂತ್ರಣ ಇಲ್ಲದ ಜಂಕ್​ಫುಡ್ ಸೇವನೆ, ವ್ಯಾಯಾಮದ ಕೊರತೆ ಇವೆಲ್ಲವುಗಳನ್ನು ಸ್ತ್ರೀರೋಗ ತಜ್ಞರ ಜತೆ ರ್ಚಚಿಸಿ, ಗರ್ಭವತಿಯಲ್ಲಿ ಡಯಾಬಿಟೀಸ್ ಬರದಂತೆ ನೋಡಿಕೊಳ್ಳುವುದು ವಿಹಿತ. ಡಯಾಬಿಟೀಸ್ ಬಂದ ಬಳಿಕ ‘ನನ್ನ ಹಣೆಬರಹ’ ಎಂದು ಹೇಳದೇ, ಸಕ್ಕರೆ ರೋಗವನ್ನು ಹಿಮ್ಮೆಟ್ಟಿಸಿ, ಆರೋಗ್ಯಕರ ಮಗುವಿಗೆ ಜನ್ಮ ನೀಡಿ ಅಕ್ಕರೆಯಿಂದ, ಗತ್ತಿನಿಂದ ಮಗುವನ್ನು ಬೆಳೆಸಲು ಅವಕಾಶವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net