

ಈ ರೋಗ ನಿಧಾನವಾಗಿ ಮೊಣಕಾಲು, ಮೊಣಕೈ, ಪಾದದ ಗಂಟು ಮುಂತಾದ ದೊಡ್ಡ ಸಂಧಿಗಳಿಗೆ ಹರಡಿ ನೋವು, ಸವೆತ ತರುತ್ತದೆ. ದೇಹದ ಯಾವ ಸಂಧಿಯಲ್ಲಿ ಬೇಕಾದರೂ ನೋವಾಗಬಹುದು. ಒಂದೊಂದು ದಿನ ಒಂದೊಂದು ಸಂಧಿಯಲ್ಲಿ ನೋವಿರಬಹುದು. ನೋವು ಹೇಗಿರುತ್ತದೆ ಎಂದು ಹೇಳುವಾಗ ಆಯುರ್ವೆದದಲ್ಲಿ ‘ಚೇಳು ಕಟುಕಿದಷ್ಟು ನೋವಾಗುತ್ತದೆ’ (ವೃಶ್ಚಿಕ ದಂಶವತ್ ವೇದನಾ) ಎಂದಿದ್ದಾರೆ.
ಆಧುನಿಕ ವೈದ್ಯಪದ್ಧತಿಯ ಪ್ರಕಾರ, ಇದು ಕೇವಲ ಸಂಧಿಗಳಿಗಷ್ಟೇ ಅಲ್ಲದೆ ಹೃದಯ, ಮೂತ್ರಪಿಂಡ, ಚರ್ಮ, ಕಣ್ಣುಗಳು ಮತ್ತು ಶ್ವಾಸಕೋಶಗಳಲ್ಲೂ ಸಮಸ್ಯೆಯನ್ನು ತರಬಹುದು. ಹಾಗಾಗಿ ಈ ಸಮಸ್ಯೆ ಬರಲು ದೊಡ್ಡ ಕಾರಣ ಎಂದು ಹೇಳಲಾಗುವ ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬೇಕು. ಹಗಲುನಿದ್ದೆ, ತಂಪು ಪಾನೀಯಗಳು, ಅತಿಯಾದ ಹವಾನಿಯಂತ್ರಕದ ಬಳಕೆ, ಜಂಕ್ಫುಡ್ಗಳ ಸೇವನೆ, ಧೂಮಪಾನ, ಕರಿದ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಶುಂಠಿ, ಹಿಪ್ಪಲಿ, ಕಾಳುಮೆಣಸು, ಚಕ್ಕೆ (ದಾಲ್ಚಿನ್ನಿ), ಜೀರಿಗೆ, ಲವಂಗ ಮುಂತಾದ ಎಲ್ಲ ರೀತಿಯ ಸಾಂಬಾರಪದಾರ್ಥಗಳನ್ನು ಹೆಚ್ಚಾಗಿ ಸೇವಿಸಬೇಕು. ಅರಿಶಿಣ, ನೆಲ್ಲಿಕಾಯಿ, ಮೂಲಂಗಿ, ನುಗ್ಗೆಸೊಪ್ಪು, ಹಾಗಲಕಾಯಿ, ಇಂಗು, ಬಾರ್ಲಿ, ಹುರುಳಿಗಳಂತಹ ಸುಲಭವಾಗಿ ಜೀರ್ಣವಾಗುವ ಮತ್ತು ಉಷ್ಣಗುಣವಿರುವ ಆಹಾರಗಳು ಹೆಚ್ಚು ಪ್ರಯೋಜನಕಾರಿ. ಆಮವಾತದ ಪ್ರಾರಂಭಾವಸ್ಥೆಯಲ್ಲಿ ಅಂದರೆ ಜ್ವರ ಬಂದು ಗಂಟುಗಳಲ್ಲಿ ನೋವು, ಬಿಗಿತ ಉಂಟಾಗಲು ಪ್ರಾರಂಭವಾದಾಗ ಎರಡೆರಡು ಗ್ರಾಂ ಅಮೃತಬಳ್ಳಿ, ಶುಂಠಿ, ಹಿಪ್ಪಲಿ ಮತ್ತು ಜೀರಿಗೆಗಳನ್ನು ಹಾಕಿ ನಾಲ್ಕು ಲೋಟ ನೀರಿನಲ್ಲಿ ಕುದಿಸಿ ಒಂದು ಲೋಟಕ್ಕೆ ಇಳಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.
ಆಮವಾತದ ಸಮಸ್ಯೆ ಪ್ರಾರಂಭವಾಗುತ್ತಿದ್ದಾಗಲೇ ಪ್ರಕೃತಿ ಚಿಕಿತ್ಸೆ, ಪಂಚಕರ್ಮ ಚಿಕಿತ್ಸೆಗಳನ್ನು ತೆಗೆದುಕೊಂಡರೆ ಅದನ್ನು ಗುಣಪಡಿಸಬಹುದು. ಆಮವಾತದಲ್ಲಿ ಉಪವಾಸ ತುಂಬ ಒಳ್ಳೆಯ ಚಿಕಿತ್ಸೆಯಾಗಿ ಕೆಲಸಮಾಡುತ್ತದೆ. ಪ್ರಾರಂಭಾವಸ್ಥೆಯಲ್ಲಿ ಸರಿಯಾದ ರೀತಿಯಲ್ಲಿ ಉಪವಾಸ ಚಿಕಿತ್ಸೆ ಪಡೆದರೆ ಆಮವಾತವನ್ನು ಗುಣಪಡಿಸಬಹುದು. ವಾರಕ್ಕೆ ಅಥವಾ ಕನಿಷ್ಠ ಹದಿನೈದು ದಿನಗಳಿಗೊಮ್ಮೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಹರಳೆಣ್ಣೆಯನ್ನು ಕುಡಿದು ಬಿಸಿನೀರು ಕುಡಿಯುತ್ತಿದ್ದರೆ ಭೇದಿಯಾಗುತ್ತದೆ. 3-4 ಬಾರಿ ಭೇದಿಯಾಗುವಂತೆ ಅವರವರ ಪ್ರಕೃತಿಗೆ ಅನುಸಾರವಾಗಿ ನಿಗದಿತ ಪ್ರಮಾಣದಲ್ಲಿಯೇ ಹರಳೆಣ್ಣೆಯನ್ನು ಕುಡಿಯಬೇಕು. ಮೊದಲ ಬಾರಿ ಕಡಿಮೆ ಪ್ರಮಾಣದಲ್ಲಿ ಸೇವಿಸಿ ಪರಿಣಾಮವನ್ನು ಗಮನಿಸಿ ಮುಂದಿನ ಸಲದಿಂದ 3-4 ಬಾರಿ ಭೇದಿಯಾಗುವಂತೆ ಪ್ರಮಾಣವನ್ನು ಹೊಂದಿಸಿಕೊಳ್ಳಬೇಕು. ಸುಮಾರು 15ರಿಂದ 25 ಮಿ.ಲೀ. ಹರಳೆಣ್ಣೆ ಕುಡಿದರೆ ಸಾಕಾಗುತ್ತದೆ. ಇದನ್ನೂ ಓದಿ: ಹೃದಯ ಚೆನ್ನಾಗಿ ಕೆಲಸ ಮಾಡ್ಬೇಕು ಅಂದ್ರೆ ಬಾದಾಮಿ ತಿನ್ಬೇಕಂತೆ…
ಸಂಧಿಗಳಲ್ಲಿ ಊತವಿದ್ದು ನೋವು ಮತ್ತು ಬಿಗಿತವಿದ್ದರೆ ಮರಳನ್ನು ಹುರಿದು ಬಿಸಿ ಮಾಡಿ ಒಂದು ಬಟ್ಟೆಯಲ್ಲಿ ಗಂಟು ಕಟ್ಟಿ ಶಾಖ ತೆಗೆದುಕೊಂಡರೆ ಸಮಾಧಾನವೆನಿಸುತ್ತದೆ. ಶುಂಠಿಯ ಪುಡಿಯನ್ನು ನೀರಿನಲ್ಲಿ ಕಲಸಿ ಬಿಸಿ ಮಾಡಿ ಗಂಟುಗಳಿಗೆ ಲೇಪ ಮಾಡಿಕೊಂಡರೆ ಅನುಕೂಲವಾಗುತ್ತದೆ. ಆಮವಾತ ತೀವ್ರಾವಸ್ಥೆಗೆ ತಲುಪಿದಾಗ ಅಂದರೆ ಹಸ್ತ, ಪಾದಗಳ ಬೆರಳುಗಳು ವಕ್ರವಾಗಿ, ಮೊಣಕಾಲಿನಂತಹ ಸಂಧಿಗಳಲ್ಲಿ ತೀವ್ರತರವಾದ ನೋವು ಮತ್ತು ಸವೆತ ಆದಾಗ ಅದನ್ನು ಸಂಪೂರ್ಣ ಗುಣಪಡಿಸಲು ಸಾಧ್ಯವಿಲ್ಲ. ಆದರೆ ಸರಿಯಾಗಿ ಚಿಕಿತ್ಸೆ ಪಡೆದರೆ ಇನ್ನೂ ಹೆಚ್ಚಾಗದಂತೆ ತಡೆಯಬಹುದು. ಒಟ್ಟಿನಲ್ಲಿ ಆಮವಾತದ ಸಮಸ್ಯೆ ಬರದಂತೆ ಆಹಾರ, ದಿನಚರಿ ಮತ್ತು ಮನಸ್ಸನ್ನು ಇಟ್ಟುಕೊಳ್ಳಬೇಕು. ಒಂದುವೇಳೆ ಬಂದುಬಿಟ್ಟರೆ ಪ್ರಾರಂಭಾವಸ್ಥೆಯಲ್ಲಿಯೇ ಗುಣಪಡಿಸಿಕೊಳ್ಳಬೇಕು.
ನೀವೂ ಪ್ರಶ್ನೆ ಕೇಳಿ: ನಿಮ್ಮ ಆರೋಗ್ಯದ ಸಮಸ್ಯೆಗಳನ್ನು ಸಂಕ್ಷಿಪ್ತವಾಗಿ ಬರೆದು ಈ ವಿಳಾಸಕ್ಕೆ ಕಳಿಸಬಹುದು: ಸಂಪಾದಕರು, ಧನ್ವಂತರಿ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ.24, ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು - 18.