ಮೂಲವ್ಯಾಧಿ ನಿಯಂತ್ರಣಕ್ಕೆ ಯೋಗಾಭ್ಯಾಸ

Yoga
Published on

ನನಗೆ 6 ವರ್ಷಗಳಿಂದ ಮೂಲವ್ಯಾಧಿ ಸಮಸ್ಯೆ. ಇದರ ನಿವಾರಣೆಗೆ ಯಾವೆಲ್ಲ ಯೋಗಾಸನಗಳು ಸಹಕಾರಿ ತಿಳಿಸಿ.

| ಬಾಬು 32 ವರ್ಷ ಮಂಗಳೂರು

ಮೂಲವ್ಯಾಧಿಗೆ ಹಲವಾರು ಕಾರಣಗಳಿವೆ. ತೊಂದರೆಗೊಳಗಾದ ಜೀರ್ಣಕ್ರಿಯೆ, ತಪ್ಪಾದ ಜೀವನಶೈಲಿ, ಬೊಜ್ಜು, ವ್ಯಾಯಾಮದ ಕೊರತೆ, ಗುದದ್ವಾರ ಮತ್ತು ಸುತ್ತಮುತ್ತಲಿನ ರಕ್ತನಾಳಗಳ ಮೇಲೆ ಹೆಚ್ಚಿನ ಒತ್ತಡ, ಶೌಚಗೃಹದಲ್ಲಿ ದೀರ್ಘಕಾಲ ಕುಳಿತುಕೊಳ್ಳುವುದು ಇತ್ಯಾದಿ.

ಯೋಗತಂತ್ರಗಳು ರೋಗಲಕ್ಷಣ ಕಡಿಮೆ ಮಾಡುವುದಲ್ಲದೆ ನೈಜ ಕಾರಣವನ್ನು ತೆಗೆದುಹಾಕುವಲ್ಲಿ ಸಹಕಾರಿಯಾಗುತ್ತವೆ. ಯೋಗದ ಭಂಗಿಗಳು ಗುದದ್ವಾರದ ಸ್ನಾಯುಗಳನ್ನು ಪರ್ಯಾಯವಾಗಿ ಹಿಗ್ಗಿಸುತ್ತವೆ ಮತ್ತು ಸಂಕುಚಿತಗೊಳಿಸುತ್ತವೆ. ಯೋಗಚಿಕಿತ್ಸೆ ಮೂಲವ್ಯಾಧಿ ಉಲ್ಬಣಿಸದಂತೆ ತಡೆಯಲು ಮತ್ತು ನಿಯಂತ್ರಿಸಲು ಸಹಾಯ ಮಾಡುತ್ತದೆ. ಜೀರ್ಣಕಾರಿ ಮತ್ತು ಕರುಳಿನ ಸಮಸ್ಯೆಗಳನ್ನು ತಡೆಯುತ್ತದೆ.

ಮತ್ಸ್ಯಾಸನ, ಕಟಿಚಕ್ರಾಸನ, ಪಾರ್ಶ್ವತಾಡಾಸನ, ಶಶಾಂಕಾಸನ, ವಿಪರೀತಕರಣಿ, ಸರ್ವಾಂಗಾಸನ, ವಕ್ರಾಸನ, ಮಂಡೂಕಾಸನ, ಪಾದಹಸ್ತಾಸನ, ಬದ್ಧಕೋಣಾಸನ, ಶೀರ್ಷಾಸನ, ಅಧೋಮುಖ ಶ್ವಾನಾಸನ, ಪವನಮುಕ್ತಾಸನ, ಸುಪ್ತವಜ್ರಾಸನ, ಪಶ್ಚಿಮೋತ್ಥಾನಾಸನ, ಶವಾಸನ. ಬಂಧಗಳಲ್ಲಿ ಮೂಲಬಂಧ ಸಹಕಾರಿಯಾಗುತ್ತದೆ. ಕ್ರಿಯೆಗಳಲ್ಲಿ ಲಘು ಶಂಖಪ್ರಕ್ಷಾಲನ, ಮೂಲಶೋಧನ. ಮುದ್ರೆಗಳಲ್ಲಿ ಅಶ್ವಿನಿಮುದ್ರೆ, ಅಪಾನಮುದ್ರೆ, ಹೃದಯಮುದ್ರೆ, ಪೃಥ್ವಿಮುದ್ರೆ, ಪ್ರಾಣಮುದ್ರೆ. ನುರಿತ ಯೋಗಶಿಕ್ಷಕರ ಮಾರ್ಗದರ್ಶನದಲ್ಲಿಯೇ ಈ ಯೋಗ, ಕ್ರಿಯೆಗಳನ್ನು ಅಭ್ಯಾಸ ಮಾಡಿ. ಸುಲಭವಾಗಿ ಜೀರ್ಣವಾಗುವ ಆಹಾರಗಳಾದ ತಾಜಾ ಹಣ್ಣುಗಳನ್ನು ಸೇವಿಸಿ. ಅತೀ ಮಸಾಲೆ, ಅತೀ ಖಾರ ಬೇಡ.

ನನಗೆ ವಾಯುಪ್ರಕೋಪ (ಕರುಳಿನ ವಾಯು) ಇದೆ. ನಿವಾರಣೆಗಾಗಿ ಯಾವ ಯೋಗ ಅಭ್ಯಾಸ ಮಾಡಬೇಕೆಂದು ತಿಳಿಸಿ.

| ಸುಂದರ್ 49 ವರ್ಷ, ಉಜಿರೆ

ಕೆಲವು ಯೋಗಭಂಗಿಗಳು ಗಾಳಿಯನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತವೆ. ಯೋಗವು ಇಡೀ ದೇಹದಾದ್ಯಂತ ವಿಶ್ರಾಂತಿಗೆ ಸಹಾಯ ಮಾಡುತ್ತದೆ ಹಾಗೂ ಕರುಳಿನಲ್ಲಿರುವ ಅನಿಲ ಹಾದುಹೋಗಲು ಸಹಾಯ ಮಾಡುತ್ತದೆ. ಆಯ್ದ ಆಸನಗಳು ಹೊಟ್ಟೆಗೆ ಉತ್ತಮ ಮಸಾಜ್ ನೀಡುತ್ತವೆ. ಜೀರ್ಣಕ್ರಿಯೆಯನ್ನು ಸರಾಗಗೊಳಿಸುತ್ತವೆ. ಹಸಿವೆ ಆದಾಗ ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಿ. ಬೆಳಗ್ಗೆ ಮತ್ತು ಸಂಜೆ ತಲಾ ನಾಲ್ಕು ನಿಮಿಷ ನಿಂತಲ್ಲೇ ವರುಣಮುದ್ರೆಯಲ್ಲಿ ಯೋಗ, ವಾಕಿಂಗ್ ಮಾಡಿ. ಇದನ್ನೂ ಓದಿ: ಮಕ್ಕಳ ಕಬ್ಬಿಣಾಂಶ ಮಾತ್ರೆಗೂ ಕರೊನಾ ಕೊಳ್ಳಿ! : ಶಾಲೆ ಆರಂಭವಾಗುತ್ತಲೇ ಆರೋಗ್ಯ ತಪಾಸಣೆ

ಯೋಗಾಸನಗಳಲ್ಲಿ ಪವನಮುಕ್ತಾಸನ, ಶಶಾಂಕಾಸನ, ಮತ್ಸ್ಯಾಸನ, ಸುಪ್ತವಜ್ರಾಸನ, ಕಟಿಚಕ್ರಾಸನ, ಉಷ್ಟ್ರಾಸನ, ವಕ್ರಾಸನ, ಮಯೂರಾಸನ, ಹಲಾಸನ, ಯೋಗಮುದ್ರಾಸನ, ಭುಜಂಗಾಸನ, ಧನುರಾಸನ, ಶವಾಸನ, ಸಾಧ್ಯವಾಗುವ ಮುಂದಕ್ಕೆ ಬಾಗುವ ಯೋಗಭಂಗಿಗಳು, ಕಪಾಲಭಾತಿ ಕ್ರಿಯೆ, ಭಸ್ತ್ರಿಕಾ ಪ್ರಾಣಾಯಾಮ, ಉಡ್ಡಿಯಾನ ಬಂಧ, ಸಾಧ್ಯವಾದರೆ ಅಗ್ನಿಸಾರಕ್ರಿಯೆ, ನೌಲಿಕ್ರಿಯೆ. ಮುದ್ರೆಗಳಲ್ಲಿ ವಾಯುಮುದ್ರೆ, ಹೃದಯಮುದ್ರೆ, ಪ್ರಾಣಮುದ್ರೆಗಳನ್ನು ತಲಾ ಹತ್ತು ನಿಮಿಷ ಅಭ್ಯಾಸ ಮಾಡಿ.

ನೀವೂ ಪ್ರಶ್ನೆ ಕೇಳಿ

ಯೋಗದ ಮೂಲಕ ಹಲವು ರೋಗಗಳಿಗೆ ಪರಿಹಾರವಿದೆ. ಅನೇಕರನ್ನು ಕಾಡುತ್ತಿರುವ ಸಮಸ್ಯೆಗಳ ಬಗ್ಗೆ ಯೋಗ ಅಂಕಣಕಾರರು ಉತ್ತರ ನೀಡಲಿದ್ದಾರೆ. ಆಸಕ್ತರು ವಯಸ್ಸು, ಸಮಸ್ಯೆ, ಅದರ ತೀವ್ರತೆ, ಈಗಾಗಲೇ ತೆಗೆದುಕೊಳ್ಳುತ್ತಿರುವ ಔಷಧೋಪಚಾರ ಇತ್ಯಾದಿಗಳನ್ನು ಸಂಕ್ಷಿಪ್ತವಾಗಿ ಬರೆದು ಕಳಿಸಬಹುದು. ಆದ್ಯತೆ ಮೇರೆಗೆ ನಮ್ಮ ಯೋಗ ಅಂಕಣಕಾರರು ಸಲಹೆ, ಸೂಚನೆ ನೀಡಲಿದ್ದಾರೆ. ವಿಳಾಸ: ಸಂಪಾದಕರು, ಯೋಗಕ್ಷೇಮ ಪ್ರಶ್ನೋತ್ತರ ವಿಭಾಗ, ವಿಜಯವಾಣಿ, ನಂ. 24, ಸಾಯಿರಾಂ ಟವರ್ಸ್, ಮೊದಲ ಮಹಡಿ, ಐದನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು-18.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net