

ನವದೆಹಲಿ: ಹೃದಯ ಚೆನ್ನಾಗಿ ಕೆಲಸ ಮಾಡಬೇಕು ಅಂದ್ರೆ ಬಾದಾಮಿ ಬೀಜ ತಿನ್ನಬೇಕು ಅಂತಿದೆ ಅಧ್ಯಯನ ವರದಿ. ವಿಶೇಷವಾಗಿ ಮೆಂಟಲ್ ಸ್ಟ್ರೆಸ್ ಉಂಟುಮಾಡುವ ಹಾರ್ಟ್ ರೇಟ್ ವೇರಿಯೆಬಿಲಿಟಿ(ಎಚ್ಆರ್ವಿ) ಅಥವಾ ಹೃದಯ ಬಡಿತದ ವ್ಯತ್ಯಾಸವನ್ನು ಕಡಿಮೆ ಮಾಡುತ್ತದೆ ಎಂಬುದು ಅಧ್ಯಯನದಲ್ಲಿ ಕಂಡುಬಂದ ಮುಖ್ಯ ಅಂಶ.
ಎಚ್ಆರ್ವಿ ಎಂಬುದು ಎರಡು ನಿರಂತರ ಹೃದಯ ಬಡಿತಗಳ ನಡುವಿನ ಅಂತರದ ಸಮಯದಲ್ಲಾಗುವ ವ್ಯತ್ಯಾಸವನ್ನು ಅಳೆಯುವ ಮಾಪನ. ಶರೀರದ ಚಯಾಪಚಯದ ಬೇಡಿಕೆಗಳನ್ನು ಈಡೇರಿಸುವ ಹೃದಯದ ಸಾಮರ್ಥ್ಯವೇ ಕಾರ್ಡಿಯಾಕ್ ಫಂಕ್ಷನ್ ಅಥವಾ ಹೃದಯದ ಕೆಲಸ ಎನ್ನುತ್ತಾರೆ.
ಅಮೆರಿಕನ್ ಜರ್ನಲ್ ಆಫ್ ಕ್ಲಿನಿಕಲ್ ನ್ಯೂಟ್ರಿಷನ್ ನಲ್ಲಿ ಪ್ರಕಟವಾದ ವರದಿ ಪ್ರಕಾರ, ಕಾರ್ಡಿಯೋವಾಸ್ಕುಲರ್ ಡಿಸೀಸ್(ಸಿವಿಡಿ)ಗೆ ಮೆಂಟಲ್ ಸ್ಟ್ರೆಸ್ ಪ್ರಮುಖ ಕಾರಣವಾಗಿದ್ದು, ಜೀವನ ಶೈಲಿ, ಆಹಾರ ಕ್ರಮಗಳೂ ಪರಿಣಾಮಬೀರುತ್ತದೆ. ಸ್ಟ್ರೆಸ್ಗೆ ಕಾರ್ಡಿಯೋವಾಸ್ಕುಲರ್ ವ್ಯವಸ್ಥೆ ಪ್ರತಿಕ್ರಿಯಿಸುವ ಪ್ರಮುಖ ಸಂಕೇತವೇ ಎಚ್ಆರ್ವಿಯಾಗಿದೆ.
ಬ್ರಿಟನ್ನ ಕಿಂಗ್ಸ್ ಕಾಲೇಜು ಲಂಡನ್ನ ಸಂಶೋಧಕರು ಈ ಅಧ್ಯಯನವನ್ನು ನಡೆಸಿದ್ದು, ಹೆಚ್ಚಿನ ಎಚ್ಆರ್ವಿ ಇದೆ ಎಂದಾದರೆ ಪರಿಸರಾತ್ಮಕ ಮತ್ತು ಸೈಕಾಲಾಜಿಕಲ್ ಸವಾಲುಗಳನ್ನು ಎದುರಿಸುವ ಹೃದಯದ ಸಾಮರ್ಥ್ಯ ಹೆಚ್ಚಿದೆ ಎಂದರ್ಥ. ಇದೇ ವೇಳೆ, ಎಚ್ಆರ್ವಿ ಕಡಿಮೆ ಇದೆ ಎಂದರೆ ಕಾರ್ಡಿಯೋವಾಸ್ಕುಲರ್ ಡಿಸೀಸ್ ಮತ್ತು ಸಡನ್ ಆಗಿ ಕಾರ್ಡಿಯಾಕ್ ಡೆತ್ ಸಂಭವಿಸುವ ಸಾಧ್ಯತೆ ದಟ್ಟವಾಗಿದೆ ಎಂದರ್ಥ ಎಂದು ಅವರು ವಿವರಿಸಿದ್ದಾರೆ. (ಏಜೆನ್ಸೀಸ್)