

ಸಾಮಾನ್ಯವಾಗಿ ಮುಖವನ್ನು, ಕಣ್ಣು, ಮೂಗು, ಬಾಯಿಗಳನ್ನು ಕೈಗಳಿಂದ ಆಗಾಗ ಮುಟ್ಟುತ್ತಿರುವುದು ಮನುಷ್ಯರ ಸಹಜ ಸ್ವಭಾವ. ಕೋವಿಡ್-19 ನಮ್ಮ ದೇಹಕ್ಕೆ ಹರಡಲು ಇರುವ ಅತಿ ದೊಡ್ಡ ಮಾರ್ಗ ಇದುವೇ. ನಮ್ಮ ಕೈಗಳು ಸುಮ್ಮನಿರುವುದಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಕಾರು ನಿಲ್ಲಿಸಿ ಒಳಗೆ ಸುಮ್ಮನೆ ಕುಳಿತುಕೊಳ್ಳಿ. ಪಕ್ಕದಲ್ಲಿ ನಡೆದುಹೋಗುತ್ತಿರುವ ಕೆಲವು ಜನರು ನಿಮ್ಮ ವಾಹನವನ್ನು ಅಲ್ಲಲ್ಲಿ ಮುಟ್ಟುತ್ತ ಮುನ್ನಡೆಯುತ್ತಾರೆ! ಇದು ಕೈಗಳ ಅಭ್ಯಾಸಬಲ! ಹೀಗೆ ಸುಮ್ಮನಿರದ ಈ ಕೈಗಳು ವೈರಾಣುವಿನ ಸಂಪರ್ಕ ಹೊಂದಿದ್ದಾಗ ಮುಖ ಮುಟ್ಟಿದರೆ ಏನು ಗತಿ? ಇದನ್ನು ತಡೆಯಲೂ ಮುಖಕವಚ ಅನುಕೂಲ ಮಾಡುತ್ತದೆ ಎಂಬುದನ್ನು ನಾವರಿಯಬೇಕು.
ಯಾವುದೇ ಕಾರಣಕ್ಕಾಗಿ ಮನೆಯಿಂದ ಹೊರಗೆ ಹೋಗಿ ಕೆಲಸಗಳನ್ನು ಪೂರೈಸಿ ಹಿಂತಿರುಗಿದಾಗ ಮನೆಯಲ್ಲಿರುವ ಯಾವುದೇ ವಸ್ತುಗಳನ್ನು ಮುಟ್ಟದೆ ನೇರವಾಗಿ ಸ್ನಾನದ ಕೋಣೆಗೆ ತೆರಳಬೇಕು. ಮಾರ್ಜಕ ಹಾಕಿಟ್ಟ ಬಿಸಿಯಾದ ನೀರಿನಲ್ಲಿ ಬಟ್ಟೆಗಳನ್ನೆಲ್ಲ ಅರ್ಧಗಂಟೆ ತಾವೇ ಮುಳುಗಿಸಿಟ್ಟರೆ ವೈರಾಣು ಅದರಲ್ಲಿ ಉಳಿಯದು. ಕೂಡಲೇ ಸರ್ವಾಂಗ ಸ್ನಾನ ಮಾಡಬೇಕು. ಆಮೇಲೆ ಮನೆಯಲ್ಲಿ ಸುತ್ತಾಡಿದರೆ ಅಭ್ಯಂತರವಿಲ್ಲ. ತರಕಾರಿಗಳನ್ನು, ಹಾಲಿನ ಪ್ಯಾಕೆಟ್ಗಳನ್ನು ತಂದೊಡನೆ ತೊಳೆದು ಕೈತೊಳೆದುಕೊಳ್ಳಬೇಕು. ದಿನಸಿ, ಆಹಾರವಸ್ತುಗಳು ಸೇರಿ ಯಾವುದನ್ನೇ ಮನೆಗೆ ತಂದರೂ ಬಾಗಿಲ ಬುಡದಲ್ಲಿ ಎರಡು ದಿನ ಹಾಗೆಯೇ ಬಿಡಿ. ಮತ್ತೆ ಬಳಸಿ. ಅಷ್ಟಕ್ಕೂ ಈ ವೈರಾಣು ಮನೆಯಲ್ಲೇ ಉದ್ಭವವಾಗುವುದಿಲ್ಲ ತಾನೇ? ಕೈ ಶುದ್ಧವಾಗಿದ್ದರೆ ಭ್ರಷ್ಟಾಚಾರವೂ ಇರುವುದಿಲ್ಲ, ಭ್ರಷ್ಟ ರೋಗವೂ ಹರಡುವುದಿಲ್ಲ!