ಸನ್ಮಾರ್ಗವೇ ಸಂಪತ್ತು: ಮನೋಲ್ಲಾಸ

Man on Horse
Published on
| ವಿದ್ಯಾ ಜೋಶಿ

ಕಳ್ಳನೊಬ್ಬ ಸುಂದರವಾದ ಕುದುರೆಯನ್ನು ಕದ್ದು ತಂದ. ಊರಿನ ಜನರೆಲ್ಲಾ ವಿಚಾರಿಸತೊಡಗಿದರು. ‘ಚೆನ್ನಾಗಿದೆ, ಎಲ್ಲಿ ಖರೀದಿಸಿದೆ’ ಎಂದಾಗ, ಏನೋ ಸುಳ್ಳು ಹೇಳಿ ಬಾಯಿ ಮುಚ್ಚಿಸಿದ. ಒಂದೆರೆಡು ವಾರದ ನಂತರ ಅದನ್ನು ಮಾರಲು ನಿರ್ಧರಿಸಿ ಪೇಟೆಯ ಕಡೆ ಹೊರಟ. ಮುಂಜಾನೆಯಿಂದ ಸಂಜೆಯವರೆಗೆ ಕುಳಿತರೂ ಕುದುರೆ ಕೊಳ್ಳಲು ಒಬ್ಬರೂ ಬರಲಿಲ್ಲ, ಬೇಸತ್ತು ಏನು ಮಾಡುವುದೆಂದು ಪೇಚಾಡತೊಡಗಿದ. ಸೂರ್ಯ ಮುಳುಗಿ ಕತ್ತಲಾಗುತ್ತಿದ್ದಂತೆ ವ್ಯಾಪಾರಿಯೊಬ್ಬ ಬಂದು, ‘ಏನಪ್ಪಾ, ಕುದುರೆ ಮಾರಾಟಕ್ಕೆ ತಂದಿದ್ದೀಯಾ? ಚೆನ್ನಾಗಿ ಓಡುತ್ತಾ?’ ಅಂತ ಪ್ರಶ್ನಿಸತೊಡಗಿದ. ನಂತರ ಅದರ ಬೆಲೆ ಎಷ್ಟು ಎಂದ.

‘10,000 ಯಜಮಾನರೆ ‘ ಎಂದು ಕಳ್ಳ ಹೇಳಿದಾಗ, ‘ತುಂಬಾ ದುಬಾರಿಯಾಯ್ತು, ಸ್ವಲ್ಪ ಕಡಿಮೆ ಮಾಡು’ ಎಂದ ವ್ಯಾಪಾರಿ. ‘ಕಡಿಮೆ ಬೆಲೆಗೆ ಮಾರುವುದಾದರೆ ಮುಂಜಾನೆಯಿಂದ ಇಲ್ಲಿಯವರೆಗೆ ನಾನೇಕೆ ಉಪವಾಸ ಕೂಡುತ್ತಿದ್ದೆ. ಆಗಲೇ ಮಾರಿ ಹೋಗುತ್ತಿದ್ದೆ. ಇದು ತುಂಬಾ ಬೆಲೆ ಬಾಳುವ ಚತುರ ಕುದುರೆ’ ಎಂದು ಕಳ್ಳ ಹೇಳಿದಾಗ, ‘ಹಾಗಾದರೆ ಇಷ್ಟು ದುಬಾರಿ ಅಂದ ಮೇಲೆ ಹೇಗಿದೆ ಅಂತ ಅದನ್ನು ಓಡಿಸಿ ನೋಡಲೇಬೇಕು, ಆಗಬಹುದಾ?’ ಎಂದು ವ್ಯಾಪಾರಿ ಕೇಳಿದ್ದಕ್ಕೆ ಕಳ್ಳ ಒಪ್ಪಿದ. ಕುದುರೆ ಮೇಲೆ ಸುತ್ತು ಹಾಕಿಬರುತ್ತೇನೆ ಎಂದು ಹೋದ ವ್ಯಾಪಾರಿ ಎರಡು ಮೂರು ಗಂಟೆಗಳಾದರೂ ಬರಲೇ ಇಲ್ಲ. ಮಧ್ಯರಾತ್ರಿ ಆಗತೊಡಗಿದಾಗ ಕಳ್ಳನು ನಿರಾಶೆಯಿಂದ ಇನ್ನೇನು ವ್ಯಾಪಾರಿ ಬರುವುದಿಲ್ಲ ಎಂದು ಮನಸ್ಸಿನಲ್ಲಿ ಖಚಿತಪಡಿಸಿಕೊಂಡು ಊರಿನ ಕಡೆಗೆ ಮರಳಿದ. ಮಾರನೆಯ ಮುಂಜಾನೆ, ಕುದುರೆ ವ್ಯಾಪಾರ ಆಯ್ತಾ? ಬೆಲೆ ಎಷ್ಟು ಬಂತು ಅಂತ ಊರಿನ ಜನ ವಿಚಾರಿಸತೊಡಗಿದರು.

ಅಗ ಕಳ್ಳ, ‘ಎಷ್ಟಕ್ಕೆ ತಂದಿದ್ದೆ ಅಷ್ಟಕ್ಕೆ ಮಾರಿದೆ’ ಎಂದು ಹೇಳಿದ. ಕಳ್ಳನಿಗೆ ತಪ್ಪಿನ ಅರಿವಾಯಿತು. ಮುಂದೆಂದೂ ಕಳ್ಳತನ ಮಾಡಬಾರದು, ದುಡಿದು ಬದುಕಬೇಕು ಎಂಬ ವಿಚಾರಕ್ಕೆ ಬದಲಾದ. ಕಳ್ಳತನ ಮಾಡುವವರು ಕೇವಲ ವಸ್ತುಗಳನ್ನು ಕದಿಯಬಹುದು. ಆದರೆ, ಮೈಗಳ್ಳತನ ಸುಂದರ ಭವಿಷ್ಯವನ್ನೇ ಕದಿಯುತ್ತದೆ. ಊಟ ಎಲ್ಲರಿಗೂ ಬೇಕು, ರೈತನಾಗಲು ಯಾರಿಗೂ ಇಷ್ಟ ಇಲ್ಲ. ನೆರಳು ಎಲ್ಲರಿಗೂ ಬೇಕು, ಮರ ನೆಡಲು ಯಾರೂ ಬರುವುದಿಲ್ಲ. ಹಾಗೆಯೇ ಶ್ರೀಮಂತಿಕೆ ಎಲ್ಲರಿಗೂ ಬೇಕು. ದುಡಿಯುವುದು ಯಾರಿಗೂ ಬೇಡ. ಜೀವಿಸುವುದಕ್ಕಾಗಿ ಸಂಪಾದಿಸಬೇಕೆ ಹೊರತು ಸಂಪಾದನೆಯೇ ಜೀವನ ಆಗಬಾರದು. ಸಂಪತ್ತು ಯಾವುದೇ ಇರಲಿ ನಮಗೆ ಯಾವ ರೀತಿಯಿಂದ ಬಂದಿರುತ್ತೆ ಅದೇ ರೀತಿ ಹೋಗುತ್ತೆ ಎಂಬುದನ್ನು ಮನಸ್ಸಿನಲ್ಲಿಕೊಂಡು ಮುನ್ನಡೆಯಬೇಕು. ಸಂಪತ್ತು ಸಂಗ್ರಹಿಸಲು, ಸ್ವಾರ್ಥ ಸಾಧಿಸಲು, ಅನರ್ಥಗಳನ್ನುಂಟು ಮಾಡಲು ಮತ್ತು ಪಾರಮಾರ್ಥವನ್ನು ಸಿದ್ಧಿಸಿ ಕೊಡಲು ಮನಸ್ಸೇ ಕಾರಣ. ಅದು ರಾಮನೂ ಹೌದು ರಾವಣನೂ ಹೌದು. ಶಂಕರನೂ ಹೌದು, ಭಯಂಕರನೂ ಹೌದು. ಇದನ್ನರಿತು ಕೈತುಂಬ ಕೆಲಸ, ಬಾಯಿ ತುಂಬ ದೇವರನಾಮ ಸ್ಮರಣೆ ಮಾಡುವುದು ನೆಮ್ಮದಿ ಬದುಕಿನ ರಾಜಮಾರ್ಗವಾಗಿದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net