ಆಯುಷ್ ವೈದ್ಯರು ಇನ್ನುಮುಂದೆ ಅಲೋಪತಿ ಔಷಧ ನೀಡುವಂತಿಲ್ಲ

allopathy-vs-ayush-1
Published on

ಬೆಂಗಳೂರು: ರಾಜ್ಯದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಯುಷ್ ವೈದ್ಯಾಧಿಕಾರಿಗಳಿಗೆ ತುರ್ತು ಸಂದರ್ಭಗಳಲ್ಲಿ ರೋಗಿಗಳಿಗೆ ಅಲೋಪತಿ ಔಷಧ ಬಳಸಲು ನೀಡಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದ್ದು, ಪರ- ವಿರೋಧ ಚರ್ಚೆ ಶುರುವಾಗಿದೆ. ಸರ್ಕಾರದ ಈ ನಿರ್ಧಾರವನ್ನು ಸ್ವಾಗತಿಸಿರುವ ಭಾರತೀಯ ವೈದ್ಯಕೀಯ ಸಂಘ, ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಹೇಳಿಕೊಂಡಿದೆ.

ಗ್ರಾಮೀಣ ಜನರ ಸೇವೆ ಮಾಡಲು ಅಲೋಪತಿ ವೈದ್ಯರು ಮುಂದಾಗುವುದಿಲ್ಲ. ಮಾಡುವವರಿಗೂ ಬಿಡುವುದಿಲ್ಲ. ಇದರಿಂದ ಗ್ರಾಮೀಣ ಜನರು ವೈದ್ಯಕೀಯ ಸೇವೆಯಿಂದ ವಂಚಿತರಾಗಲಿದ್ದು, ನಕಲಿ ವೈದ್ಯರ ಹಾವಳಿ ಹೆಚ್ಚಲಿದೆ. ಹೀಗಾಗಿ ಅದೇಶ ಹಿಂಪಡೆಯಲು ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಮನವಿ ಮಾಡಲಾಗುವುದು. ಸ್ಪಂದಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು. | ಡಾ.ಮಹಾವೀರ್ ಹಾವೇರಿ ರಾಜ್ಯ ಸಲಹೆಗಾರರು, ಆಯುಷ್ ಫೆಡರೇಷನ್ ಆಫ್ ಇಂಡಿಯಾ

ಮತ್ತೊಂದೆಡೆ ಕೇವಲ ಸರ್ಕಾರಿ ವೈದ್ಯರೇ ಅಲ್ಲದೆ ಖಾಸಗಿ ಆಯುಷ್ ವೈದ್ಯರಿಗೂ ಅಲೋಪತಿ ಔಷಧ ಬಳಕೆಗೆ ಅನುಮತಿ ನೀಡುವಂತೆ ಆಗ್ರಹಿಸಿದ್ದ ಆಯುಷ್ ಫೆಡರೇಷನ್ ಆಫ್ ಇಂಡಿಯಾ ಸರ್ಕಾರ ಕೂಡಲೇ ಆದೇಶ ಹಿಂಪಡೆಯಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ಹಿಂಪಡೆದಿದ್ದೇಕೆ?: ರಾಜ್ಯದಲ್ಲಿ ಡಾ.ಪೂನಂ ವರ್ವ ವಿರುದ್ಧ (ಹೋಮಿಯೋಪತಿ ವೈದ್ಯೆ ಅಲೋಪತಿ ಔಷಧ ನೀಡಿ ರೋಗಿ ಸಾವನ್ನಪ್ಪಿದ್ದರು) ಪ್ರಕರಣ, ಕೇರಳದಲ್ಲಿ ಡಾ.ಎ.ಕೆ.ಸಭಾಪತಿ ಹಾಗೂ ಪಂಜಾಬಿನ ಡಾ.ಮುಕ್ತಿಯಾರ್ ಚಾಂದ್ ವಿರುದ್ಧ ಪ್ರಕರಣಗಳಲ್ಲಿ ವಿಚಾರಣೆ ನಡೆಸಿದ ನ್ಯಾಯಾಲಯ, ಆಯುಷ್ ವೈದ್ಯರು ತಾವು ಹೊಂದಿರುವ ವಿದ್ಯಾರ್ಹತೆಯ ಪದ್ಧತಿಗಳಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಲಿ. ಅಲೋಪತಿ ಚಿಕಿತ್ಸೆ ನೀಡಲು ಬರುವುದಿಲ್ಲ ಎಂದು ತೀರ್ಪು ನೀಡಿತ್ತು. ನ್ಯಾಯಾಲಯದ ಈ ತೀರ್ಪು ಆಧರಿಸಿ ಔಷಧ ಮತ್ತು ಕಾಂತಿವರ್ಧಕ ಅಧಿನಿಯಮ 1940 ಮತ್ತು 1945 ನಿಯಮಾವಳಿ ನಿಯಮ 2ರಡಿ ಪ್ರದತ್ತವಾದ ಅಧಿಕಾರ ಚಲಾಯಿಸಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಹಾಗೂ ಈ ಕುರಿತು ರಾಜ್ಯ ಆರೋಗ್ಯ ಇಲಾಖೆ ಆಯುಕ್ತರು ನೀಡಿರುವ ಅಯುಷ್ ವೈದ್ಯರು ಸರ್ಕಾರಿ ಆಸ್ಪತ್ರೆಯಲ್ಲಿ ಅಲೋಪತಿ ಬಳಸಲು ಅನುಮತಿ ನೀಡಲು ಬರುವುದಿಲ್ಲ ಎಂಬ ವರದಿ ಆಧರಿಸಿ, ರಾಜ್ಯ ಸರ್ಕಾರ ಈ ಹಿಂದೆ ನೀಡಿದ್ದ ಅದೇಶವನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆದುಕೊಂಡಿದೆ.

ಅಲೋಪತಿ ಪ್ರಾಕ್ಟೀಸ್​ಗೆ ಅವಕಾಶವಿಲ್ಲ: ಐದು ವರ್ಷ ಓದಿ ಎಂಬಿಬಿಎಸ್ ಪದವಿ ಪಡೆದರೂ ಕರ್ನಾಟಕ ವೈದ್ಯಕೀಯ ಪರಿಷತ್ತು (ಕೆಎಂಸಿ)ನಲ್ಲಿ ನೋಂದಣಿಯಾಗದೆ ಪ್ರಾಕ್ಟೀಸ್ ಮಾಡುವಂತಿಲ್ಲ. ಇನ್ನು ಕೆಪಿಎಂಇ ಅಡಿಯಲ್ಲಿ ನೋಂದಣಿಯಾದರೂ ಆಯಾ ವೈದ್ಯಪದ್ಧತಿಯಲ್ಲೇ ಪ್ರಾಕ್ಟೀಸ್ ಮಾಡಲು ಅನುಮತಿ ನೀಡಲಾಗುವುದು. ಹೀಗಾಗಿ ಆಯುಷ್ ವೈದ್ಯರು ಅಲೋಪತಿ ಔಷಧ ನೀಡಲು ಬರುವುದಿಲ್ಲ. ಹಾಗೆ ಮಾಡಿದಲ್ಲಿ ಅದು ಕಾನೂನು ಬಾಹಿರ ಎಂದು ಭಾರತೀಯ ವೈದ್ಯಕೀಯ ಸಂಘದ ರಾಜ್ಯ ಕಾರ್ಯದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.

ಆಯುಷ್ ವೈದ್ಯರಿಗೆ ಅನ್ಯಾಯ: 2016ರಲ್ಲಿ ಡ್ರಗ್ ಕಂಟ್ರೋಲರ್ ನೇತೃತ್ವದಲ್ಲಿ ನಾನಾ ಇಲಾಖೆಗಳ ಆಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿತ್ತು. ಇತರ ರಾಜ್ಯಗಳಲ್ಲಿ ಆಯುಷ್ ವೈದ್ಯರಿಗೆ ಅಲೋಪತಿ ಔಷಧ ನೀಡಲು ಅನುಮತಿ ನೀಡಿರುವುದನ್ನು ಆಧರಿಸಿ, ಔಷಧ ಮತ್ತು ಕಾಂತಿವರ್ಧಕ ನಿಯಮದಡಿ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳಿಗೆ ಕೆಲ ಷರತ್ತಿನೊಂದಿಗೆ ತುರ್ತು ಸಂದರ್ಭಗಳಲ್ಲಿ ಅಲೋಪತಿ ಔಷಧ ನೀಡಲು ಸರ್ಕಾರ ಅನುಮತಿ ನೀಡಿತ್ತು. ಇದರಿಂದ ಗ್ರಾಮೀಣ ಪ್ರದೇಶದ ಲಕ್ಷಾಂತರ ಜನರಿಗೆ ಸಕಾಲದಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗಿತ್ತು. ಆದರೆ ಸರ್ಕಾರ ಏಕಾಏಕಿ ಆದೇಶ ಹಿಂಪಡೆಯುವ ಮೂಲಕ ಆಯುಷ್ ವೈದ್ಯರಿಗೆ ಅನ್ಯಾಯ ಮಾಡಿದೆ.

ಸರ್ಕಾರದ ಏಕಮುಖ ನಿರ್ಧಾರ: ಆಯುಷ್ ವೈದ್ಯರು ವೈದ್ಯಕೀಯ ಕೋರ್ಸ್ ವೇಳೆ ಅಯುಷ್ ಮತ್ತು ಅಲೋಪತಿ ಎರಡೂ ಪದ್ಧತಿಗಳ ಬಗ್ಗೆಯೂ ಅಧ್ಯಯನ ಮಾಡಿರುತ್ತಾರೆ. ಮಹಾರಾಷ್ಟ್ರ, ತಮಿಳುನಾಡು, ಹಿಮಾಚಲ ಪ್ರದೇಶ, ಜಾರ್ಖಂಡ್, ಉತ್ತರಪ್ರದೇಶ ಸೇರಿ 12 ರಾಜ್ಯಗಳಲ್ಲಿ ಆಯುಷ್ ವೈದ್ಯರಿಗೆ ಅಲೋಪತಿ ಔಷಧ ನೀಡಲು ಅನುಮತಿ ನೀಡಲಾಗಿದೆ. ಅದರಂತೆ ಕರ್ನಾಟಕದಲ್ಲೂ ಅನುಮತಿಗೆ ಆಗ್ರಹಿಸಲಾಗಿತ್ತು. ರಾಜ್ಯದಲ್ಲಿ 27 ಸಾವಿರ ಆಯುಷ್ ವೈದ್ಯರಿದ್ದು, ಎಲ್ಲರಿಗೂ ಅಲೋಪತಿ ಔಷಧ ನೀಡಲು ಅನುಮತಿ ನೀಡಿದ್ದರೆ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ನಿವಾರಿಸುವುದರೊಂದಿಗೆ ಗ್ರಾಮೀಣ ಪ್ರದೇಶದ ಜನರಿಗೆ ಸಕಾಲದಲ್ಲಿ ವೈದ್ಯಕೀಯ ಸೇವೆ ಪಡೆಯಲು ಅನುಕೂಲವಾಗಿತ್ತು. ಸವೋಚ್ಛ ನ್ಯಾಯಾಲಯದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ತಡೆಯಾಜ್ಞೆ ಇದೆ. ಕೋರ್ಟ್ ಅದೇಶವನ್ನು ಕೂಲಂಕುಷವಾಗಿ ಪರಿಶೀಲಿಸದೆ ಯಾವುದೋ ಎರಡು ನಿರ್ದಿಷ್ಟ ಪ್ರಕರಣಗಳಿಗೆ ನೀಡಿರುವ ತೀರ್ಪು ಆಧರಿಸಿ ಸರ್ಕಾರ ಏಕಮುಖವಾಗಿ ನಿರ್ಣಯ ಕೈಗೊಂಡಿದೆ. ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಆಯುಷ್ ವೈದ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net