

ಪ್ರಸ್ತುತ ಕಾಲಘಟ್ಟದಲ್ಲಿ ತಂತ್ರಜ್ಞಾನದ ಬೆಳವಣಿಗೆ ದಿನದಿಂದ ದಿನಕ್ಕೆ ಆಗುತ್ತಲೇ ಇದೆ. ಸಮಾಜಕ್ಕೆ ಪೂರಕವಾದ ಅದೆಷ್ಟೋ ಹೊಸ ರೀತಿಯ ತಂತ್ರಜ್ಞಾನವನ್ನು ಕಂಡುಹಿಡಿಯುವಲ್ಲಿ ಭಾರತ ಸೇರಿದಂತೆ ಬೇರೆ ಬೇರೆ ಅನೇಕ ದೇಶಗಳು ಮುಂಚೂಣಿಯಲ್ಲಿವೆ. ಸದ್ಯ ಅನೇಕ ಕ್ಷೇತ್ರಕ್ಕೆ ತನ್ನ ವಿಶಿಷ್ಟ ಕಾರ್ಯ ಪ್ರವೃತ್ತಿಯ ಮೂಲಕ ವಿಶೇಷವಾಗಿ ಕೊಡುಗೆ ಕೊಡುವುದರ ಮೂಲಕ ಟ್ರೆಂಡಿಂಗ್‌ನಲ್ಲಿರುವುದೆಂದರೆ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್‘.
ಅನೇಕ ವರ್ಷಗಳ ಹಿಂದಿಯೇ ಇದರ ಪರಿಚಯವಿದ್ದರೂ ತನ್ನ ವಿನೂತನ ಫೀಚರ್ ಮೂಲಕ ಟೆಕ್ಕಿ ಜಗತ್ತಿನಲ್ಲಿ ಇದೀಗ ಇನ್ನಷ್ಟು ಎತ್ತರಕ್ಕೆ ತಲುಪಿದೆ. ಸಾಮಾನ್ಯವಾಗಿ ‘ಎಐ ಟೂಲ್’ ಎಂದೇ ಕರೆಯಲ್ಪಡುವ ಈ ತಂತ್ರಜ್ಞಾನದ ಬೆಳವಣಿಗೆ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. 1956 ರಲ್ಲಿ ಮೊದಲ ಬಾರಿಗೆ ತನ್ನ ಹೆಸರನ್ನು ಗುರುತಿಸಲ್ಪಟ್ಟ ಈ ಎಐ ಟೂಲ್ ಪ್ರಸ್ತುತ ಕಾಲಕ್ಕಲ್ಲದೇ, ಮುಂದಿನ ಅದೆಷ್ಟೋ ತಲೆಮಾರಿಗೆ ಲಾಭದಾಯಕ ಆಗುವಂತಹದ್ದು. ಜೋತಿಷ್ಯ ಕೇಳಿಸಿದಾಗ ಭವಿಷ್ಯ ನುಡಿಯುವಂತೆಯೇ ಈ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್‘ ಕೂಡ ಭವಿಷ್ಯದ ಯೋಜನೆಗಳಿಗೆ ಸುಲಭವಾಗುವಂತಹ ಮಾಹಿತಿ ಕಲೆ ಹಾಕುವಲ್ಲಿ ಮನುಷ್ಯನಿಗಿಂತ ಹತ್ತು ಪಟ್ಟು ಸಾಮರ್ಥ್ಯವನ್ನು ಹೊಂದಿದೆ.
ಮಾನವನ ಬುದ್ಧಿಮತ್ತೆಯನ್ನು ಮರುಸೃಷ್ಟಿಸುವ ಪ್ರಕ್ರಿಯೆ ಇದಾಗಿದೆ ಎಂದರೆ ತಪ್ಪಾಗಲಾರದು. ಹೇಗೆ ಕೈಗಾರಿಕಾ ಕ್ರಾಂತಿಯಿಂದಾಗಿ ಪ್ರಪಂಚದ ಅನೇಕ ದೇಶಗಳು ಮುಂದುವರೆದವೋ, ಅದೇ ರೀತಿ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್‘ ಕೂಡ ಜಗತ್ತಿನ ತಂತ್ರಜ್ಞಾನದಲ್ಲಿ ಒಂದು ರೀತಿಯ ರೆವಲ್ಯೂಷನರಿ ಬದಲಾವಣೆಗೆ ಕಾರಣವಾಗುವುದರಲ್ಲಿ ಸಂಶಯವಿಲ್ಲ. ಇನ್‌ಡಸ್ಟ್ರೀ, ಟ್ರಾಸ್ಸ್ಪೂರ್ಟ್, ಹೆಲ್ತ್ಕೇರ್ ಮತ್ತು ಶಿಕ್ಷಣದಲ್ಲಿ ಹೊಸ ರೀತಿಯ ಬದಲಾವಣೆಗೆ ಎಐ ಟೂಲ್ ಬಹಳ ಉಪಯುಕ್ತ. ಮುಖ್ಯವಾಗಿ ತನ್ನ ಅದ್ಭುತ ಅನ್ವಯಗಳ ಮೂಲಕ ಹೆಲ್ತ್ಕೇರ್ ವಿಭಾಗದಲ್ಲಿ ಹಲವಾರು ರೀತಿಯಲ್ಲಿ ಸಹಕಾರಿಯಾಗಿದೆ.
ಎಐ ಪವರ್ ಸಿಸ್ಟಮ್‌ಗಳು ಅನಾರೋಗ್ಯ ಪೀಡಿತನ ಡೇಟಾದ ಸಹಾಯದಿಂದ ಆತ ಬಳಲುತ್ತಿರುವ ರೋಗದಿಂದ ಗುಣಮುಖವಾಗುವ ಅವಧಿಯನ್ನು ಮತ್ತು ಆತ ಅನುಭವಿಸುತ್ತಿರುವ ರೋಗವನ್ನು ಸರಿಯಾಗಿ ಪತ್ತೆ ಹಚ್ಚುವಲ್ಲಿ ಸಹಾಯಕವಾಗಿದೆ. ಇದಲ್ಲದೇ ಒಬ್ಬ ವ್ಯಕ್ತಿಯ ಸಂಭಾವ್ಯ ಆರೋಗ್ಯ ಅಪಾಯವನ್ನು ಮೊದಲೇ ಗುರುತಿಸಬಹುದಾದ ಉನ್ನತ ತಂತ್ರಜ್ಞಾನವನ್ನು ಹೊಂದಿದೆ. ಇದರ ಜೊತೆಗೆ ಅನೇಕ ಹೊಸ ರೋಗಗಳಿಗೆ ಎಐ ಟೂಲ್‌ನ ಮೂಲಕ ಔಷಧಗಳನ್ನು ಮತ್ತು ಆಯಾ ರೋಗಕ್ಕೆ ಸರಿಹೊಂದುವಂತಹ ಥೆರಪಿಗಳನ್ನು ಕಂಡುಹಿಡಿಯಲಾಗುತ್ತಿದೆ. ಇನ್ನು ಸಾರಿಗೆ ಉದ್ಯಮವು ಎಐ ಟೂಲ್‌ನಿಂದ ಗಣನೀಯವಾಗಿ ಪ್ರಯೋಜನ ಪಡೆಯುತ್ತಿದೆ. ಸ್ವಯಂ ಚಾಲಿತ ಬಸ್‌ಗಳು, ಕಾರ್‌ಗಳು ಮತ್ತು ಟ್ರಕ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಎಐ ಚಾಲಿತ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್‌ಗಳು ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಬಳಸಲಾಗುತ್ತಿದೆ.
ಇದನ್ನೂ ಓದಿ:
ಹೀಗೆ ಅನೇಕ ಪ್ರಯೋಜನಗಳನ್ನು ಹೊತ್ತು ನಿಂತ ‘ಆರ್ಟಿಫಿಷಿಯಲ್ ಇಂಟಲಿಜೆನ್ಸ್‘ ಎಲ್ಲೋ ಒಂದು ಕಡೆಯಿಂದ ನಿರುದ್ಯೋಗ ಸೃಷ್ಟಿಸುತ್ತದೆಯೋ ಎನ್ನುವ ಸಂದೇಹವನ್ನು ಉಂಟುಮಾಡುತ್ತದೆ. ಬಹುಪಾಲು ಮಾನವನ ಕೆಲಸವನ್ನು ಸರಾಗ ಮಾಡುವ ನೆಲೆಯಲ್ಲಿ ಇನ್ನಷ್ಟು ಬೆಳವಣಿಗೆ ಹೊಂದಿ ಉದ್ಯೋಗ ನಷ್ಟಗಳನ್ನು ಸೃಷ್ಟಿಸುವ ಸಾಧ್ಯತೆಗಳು ಇವೆ. ಆದಾಗ್ಯೂ ತನ್ನ ವಿನೂತನ ತಂತ್ರಜ್ಞಾನದಿಂದ ಅಸಂಖ್ಯಾತ ರೀತಿಯಲ್ಲಿ ಸಮಾಜಕ್ಕೆ ಸಹಾಯಕವಾಗಿದೆ. ಎಐ ಮುಂದುವರಿದಂತೆಯೇ ನಮ್ಮ ಭವಿಷ್ಯ ರೂಪಿಸುವಲ್ಲಿ ಇದು ನಿಸ್ಸಂದೇಹವಾಗಿ ಇನ್ನಷ್ಟು ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ.
ಭಾರತಿ ಹೆಗಡೆ, ಶಿರಸಿ