

Anjeer: ಸಂಜೆ ಅಂದಾಕ್ಷಣ ಮೊದಲಿಗೆ ಹಲವರಲ್ಲಿ ನೆನಪಾಗುವುದು ಬಿಸಿ ಬಿಸಿ ಚಹಾ ಜೊತೆಗೆ ಬೊಂಡಾ, ಬಜ್ಜಿ, ಸಮೋಸಾದಂತಹ ಎಣ್ಣೆಯಲ್ಲಿ ಕರಿದ ತಿಂಡಿ ತಿನ್ನಿಸುಗಳು. ಇದಿದ್ದರೆ ಸಾಕು ದಿನ ಪೂರ್ಣ ಎಂಬಂತೆ ತೃಪ್ತಿ ಪಡುವವರು ಬಹಳ ಮಂದಿಯಿದ್ದಾರೆ. ಇವೆಲ್ಲ ಆರೋಗ್ಯಕ್ಕೆ ಹಾನಿಕರ, ದೇಹದ ನೂರೆಂಟು ಸಮಸ್ಯೆಗಳಿಗೆ ಕಾರಣ ಎಂದರೂ ಬಿಟ್ಟುಬಿಡದೆ ಇವತ್ತೇ ಕೊನೆ ಎಂದು ಚಪ್ಪರಿಸಿ ತಿನ್ನುತ್ತಾರೆ.
ಪಿಜ್ಜಾ, ಬರ್ಗರ್, ಎಣ್ಣೆಯುಕ್ತ ಆಹಾರಗಳು ಹಲವಾರು ರೋಗಗಳನ್ನು ನಮ್ಮ ದೇಹಕ್ಕೆ ಸೇರಿಸುವ ಏಜೆಂಟ್ಗಳು. ನಾಲಿಗೆಗೆ ಹಿತ ಎನಿಸುವ ಕಾರಣ ಮುಂದಿನ ಬಗ್ಗೆ ಹೆಚ್ಚು ಆಲೋಚಿಸಿದೆ, ಚಿಂತಿಸದೆ ಒಂದು ತಿನ್ನುವ ಜಾಗದಲ್ಲಿ ಎರಡೆರೆಡು ತಿನ್ನುವುದು ತೀರ ಸಾಮಾನ್ಯವಾಗಿಬಿಟ್ಟಿದೆ. ಇದರಿಂದ ನಾಳಿನ ದಿನಗಳಲ್ಲಿ ಆಸ್ಪತ್ರೆ ಪಾಲಾಗಿ ಲಕ್ಷ ಲಕ್ಷ ಹಣ ಕಟ್ಟಿದಾಗಲೇ ಇದೆಲ್ಲವೂ ನೆನಪಿಗೆ ಬರುವುದು ಮತ್ತು ಇನ್ಯಾವತ್ತು ತಿನ್ನೋದಿಲ್ಲ ಎಂದು ತಮ್ಮಲ್ಲೇ ಶಪಥ ಮಾಡಿಕೊಳ್ಳುವುದು. ಹೀಗೆ ಮುಂದೆ ಕಣ್ಣೀರಿಡುವ ಬದಲಿಗೆ ಪರ್ಯಾಯ ಮಾರ್ಗ ಅನುಸರಿಸುವುದು ಇಂದೇ ಉತ್ತಮ.
ಬಹುತೇಕರಿಗೆ ಸಂಜೆ ಸಮಯದಲ್ಲಿ ಏನನ್ನಾದರೂ ತಿನ್ನಬೇಕು ಎಂಬ ಅಭ್ಯಾಸವಿರುತ್ತದೆ. ಕೆಲವರಿಗೆ ಇದು ಚಟ ಎಂದರೂ ತಪ್ಪಿಲ್ಲ. ಹೀಗಿರುವಾಗ ಸಂಜೆ ವೇಳೆ ನಾಲಿಗೆಗೆ ಮಾತ್ರವಲ್ಲದೇ ಹಸಿವನ್ನು ನೀಗಿಸಿ, ಆರೋಗ್ಯಕ್ಕೆ ಹತ್ತಾರು ಪ್ರಯೋಜನ ನೀಡುತ್ತದೆ ಈ ಅಂಜುರಾ (ಡ್ರೈ ಫ್ರೂಟ್ಸ್). ಅಂಜೂರವು ಉತ್ತಮ ಆಹಾರಗಳಲ್ಲಿ ಒಂದಾಗಿದೆ. ಇತ್ತೀಚಿನ ದಿನಗಳಲ್ಲಿ, ಅವುಗಳನ್ನು ಹೆಚ್ಚಾಗಿ ಒಣ ಹಣ್ಣುಗಳಾಗಿ ಸೇವಿಸಲಾಗುತ್ತಿದೆ. ಆದರೆ, ಅದೇ ಅಂಜೂರವನ್ನು ಸಂಜೆ ತಿಂಡಿಗಳಾಗಿಯೂ ಸೇವಿಸಬಹುದು. ಬೆಳಗ್ಗೆ ಎರಡು ಅಥವಾ ಮೂರು ಅಂಜೂರದ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಸಂಜೆ ತಿಂಡಿಗಳಾಗಿ ಸೇವಿಸಿದರೆ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
ಅಂಜೂರದಲ್ಲಿ ಕಬ್ಬಿಣಾಂಶ ಹೇರಳವಾಗಿದೆ. ಇದು ರಕ್ತಹೀನತೆಯನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಉತ್ಪಾದನೆಗೆ ಸಹಕಾರಿಯಾಗಿದೆ. ಇದು ಜೀವಕೋಶಗಳಿಗೆ ಹೆಚ್ಚಿನ ಆಮ್ಲಜನಕವನ್ನು ಒದಗಿಸುತ್ತದೆ ಮತ್ತು ಆಯಾಸ, ಆಲಸ್ಯವನ್ನು ತಡೆಗಟ್ಟುತ್ತದೆ. ಅಂಜೂರದಲ್ಲಿರುವ ರಂಜಕವು ಮೂಳೆಯ ಆರೋಗ್ಯವನ್ನು ಹೆಚ್ಚಿಸುತ್ತದೆ. ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಈ ಹಣ್ಣುಗಳಲ್ಲಿರುವ ಮ್ಯಾಂಗನೀಸ್ ಮೂಳೆ ರಚನೆಗೆ ಸಹಾಯ ಮಾಡುತ್ತದೆ. ಇದು ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಅಂಜೂರದಲ್ಲಿರುವ ಆರೋಗ್ಯಕ್ಕರ ಅಂಶಗಳು ದೇಹದಲ್ಲಿನ ರೋಗ, ಸೋಂಕುಗಳು, ಉರಿಯೂತ ಮತ್ತು ನೋವನ್ನು ನಿಯಂತ್ರಣಕ್ಕೆ ತರುತ್ತದೆ. ಅಂಜೂರದಲ್ಲಿರುವ ಉತ್ಕರ್ಷಣ ನಿರೋಧಕಗಳು ಸ್ವತಂತ್ರ ರಾಡಿಕಲ್‌ಗಳು ಮತ್ತು ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳನ್ನು ತಡೆಗಟ್ಟುತ್ತವೆ. ಅಂಜೂರವು ನಾರಿನಂಶದಿಂದ ಸಮೃದ್ಧವಾಗಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ ಹಾಗೂ ಮಲಬದ್ಧತೆಯಿಂದ ಪರಿಹಾರ ನೀಡುತ್ತದೆ. ವಿಶೇಷವಾಗಿ, ಕೆರಳಿಸುವ ಕರುಳಿನ ಸಹಲಕ್ಷಣದಿಂದ ಬಳಲುತ್ತಿರುವವರಿಗೆ ರಿಲೀಫ್ ನೀಡುತ್ತದೆ.
ಅಂಜೂರವು ಕ್ಯಾಲ್ಸಿಯಂನಲ್ಲಿ ಹೇರಳವಾಗಿದೆ. ಇದು ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಸ್ನಾಯುಗಳಿಗೂ ಉತ್ತಮ. ಅಂಜೂರದಲ್ಲಿರುವ ಪೊಟ್ಯಾಸಿಯಮ್ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ದೇಹದಲ್ಲಿ 300ಕ್ಕೂ ಹೆಚ್ಚು ಜೀವರಾಸಾಯನಿಕ ಪ್ರತಿಕ್ರಿಯೆಗಳನ್ನು ಉತ್ತೇಜಿಸುತ್ತದೆ. ಸಂಜೆ ತಿಂಡಿಯಾಗಿ ಅಂಜೂರವನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳು ಸಿಗುತ್ತವೆ,(ಏಜೆನ್ಸೀಸ್).