

ಬೆಂಗಳೂರು: ವಾಡಿಕೆಗಿಂತ ಮುನ್ನ ಪ್ರವೇಶಿಸಿ ಅಬ್ಬರಿಸಿ ದುರ್ಬಲಗೊಂಡಿದ್ದ ನೈಋತ್ಯ ಮಾನ್ಸೂನ್ ( ಮುಂಗಾರು) ಜೂ.9ರಿಂದ ರಾಜ್ಯದಲ್ಲಿ ಬಲಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಬಾಗಲಕೋಟೆ, ಬೆಳಗಾವಿ, ಧಾರವಾಡ, ಕೊಪ್ಪಳ, ರಾಯಚೂರು, ವಿಜಯಪುರ,ಯಾದಗಿರಿ, ಗದಗ, ಬಳ್ಳಾರಿ, ವಿಜಯನಗರದಲ್ಲಿ ಜೂ.12ರಿಂದ ಜೂ.14ರವರೆಗೆ ಜೋರಾಗಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಕೊಟ್ಟಿದೆ. ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಚಿತ್ರದುರ್ಗ, ದಾವಣಗೆರೆಯಲ್ಲಿ ಜೂ.13ರಿಂದ ಮುಂದಿನ 2 ದಿನ, ಕೋಲಾರದಲ್ಲಿ ಜೂ.12ರಂದು ಬಿರುಸಾಗಿ ವರ್ಷಧಾರೆಯಾಗುವ ಹಿನ್ನೆಲೆಯಲ್ಲಿ ಯೆಲ್ಲೋ ಅಲರ್ಟ್ ಇರಲಿದೆ. ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿಯೂ ಜೂ.14ರಂದು ಆರೆಂಜ್ ಅಲರ್ಟ್ ನೀಡಲಾಗಿದೆ.
ಕರಾವಳಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ಜೂ.8ರಿಂದ ಜೂ.12ರವರೆಗೆ ಒಣಹವೆ ಇರಲಿದ್ದು, ಜೂ 13ರಿಂದ ಈ ಭಾಗಗಳಲ್ಲಿ ಮಳೆ ಶುರುವಾಗಲಿದೆ. ಬೆಂಗಳೂರು ನಗರ, ಬೆಂ.ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಸೇರಿ ದಕ್ಷಿಣ ಕರ್ನಾಟಕ ಮತ್ತು ಉತ್ತರ ಕರ್ನಾಟಕ ವ್ಯಾಪ್ತಿಯ ಪ್ರದೇಶಗಳಲ್ಲಿ ಮುಂದಿನ 4 ದಿನ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ಜೂ.12ರಿಂದ ಈ ಜಿಲ್ಲೆಗಳಲ್ಲಿ ತುಸು ಬಿರುಸಾಗಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ಪ್ರಸ್ತುತ ಹವಾಮಾನ ಸ್ಥಿತಿಗತಿ ಅವಲೋಕಿಸಿದರೆ ಬಂಗಾಳ ಉಪಸಾಗರ ಮತ್ತು ಅರಬ್ಬಿ ಸಮುದ್ರದಲ್ಲಿ ಮಾನ್ಸೂನ್ ಬಲಗೊಳ್ಳಲು ಪೂರಕ ವಾತಾವರಣ ಉಂಟಾಗುತ್ತಿದೆ. ಸಮುದ್ರ ಮಟ್ಟದಲ್ಲಿ ಮೇಲ್ಮೆ ಸುಳಿಗಾಳಿ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಜೂ.9ರಿಂದ ಮಾನ್ಸೂನ್ ಬಿರುಸುಗೊಳ್ಳಲು ಶುರುವಾಗಲಿದೆ. ಆದ್ದರಿಂದ, ರಾಜ್ಯದಲ್ಲಿ ಜೂ.12ರಿಂದ ಜೋರಾಗಿ ಮಳೆ ಸುರಿಯಲಿದೆ.
| ಸಿ.ಎಸ್.ಪಾಟೀಲ್. ರಾಜ್ಯ ಹವಾಮಾನ ಇಲಾಖೆಯ ನಿರ್ದೇಶಕ.