ಕೆ.ಎಲ್​. ರಾಹುಲ್​, ಗಿಲ್​ಗಿಲ್ಲ ಓಪನಿಂಗ್​? ಈ ಕ್ರಿಕೆಟಿಗರು ಅಗ್ರ 5 ಕ್ರಮಾಂಕದಲ್ಲಿ ಆಡುವುದು ಸೂಕ್ತ: ಪಾಂಟಿಂಗ್​ | IND vs ENG

ವಿಜಯವಾಣಿ (37)
Published on

IND vs ENG Test: ಇದೇ ಜೂನ್​ 20ರಿಂದ ಪ್ರಾರಂಭವಾಗಲಿರುವ ಇಂಗ್ಲೆಂಡ್​ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಗೆ ಭಾರತ ತಂಡ ಸನ್ನದ್ಧಗೊಂಡಿದೆ. ಈಗಾಗಲೇ ಎರಡೂ ದೇಶದ ತಂಡಗಳು ಅಧಿಕೃತವಾಗಿ ಪ್ರಕಟವಾಗಿವೆ. ಭಾರತೀಯ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಅಧ್ಯಾಯ ಶುರುವಾಗಲಿದೆ. ಕ್ರಿಕೆಟ್​ ದಂತಕಥೆಗಳಾದ ವಿರಾಟ್ ಕೊಹ್ಲಿ ಮತ್ತು ರೋಹಿತ್​ ಶರ್ಮ ನಿವೃತ್ತಿ ಬೆನ್ನಲ್ಲೇ ಟೆಸ್ಟ್​ ತಂಡ ನಾಯಕತ್ವವನ್ನು ಹೊತ್ತಿರುವ ಶುಭಮನ್ ಗಿಲ್​, ಹೇಗೆ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುತ್ತಾರೆ ಎಂಬುದೇ ಸದ್ಯ ಕುತೂಹಲ. ​

ಈ ಹಿಂದೆ ರೋಹಿತ್ ಶರ್ಮ ತಂಡದ ಪರ ಓಪನಿಂಗ್ ಆಡುತ್ತಿದ್ದರು. ಆದ್ರೆ, ಯುವ ಆಟಗಾರರಿಂದಲೇ ಕೂಡಿರುವ ಈ ತಂಡದಲ್ಲಿ ಯಾರು ಆರಂಭಿಕರಾಗಿ ಅವರ ಸ್ಥಾನಕ್ಕೆ ತುಂಬಲಿದ್ದಾರೆ ಎಂಬ ಪ್ರಶ್ನೆ, ಗೊಂದಲ ಕ್ರಿಕೆಟ್ ಪ್ರಿಯರಲ್ಲಿ ಕಾಡುತ್ತಿದೆ. ಇದು ಹಲವು ಮಾಜಿ ಕ್ರಿಕೆಟಿಗರ ಪ್ರಶ್ನೆಯೂ ಆಗಿದೆ. ಒಂದಷ್ಟು ವರದಿಗಳು, ಟೀಮ್ ಇಂಡಿಯಾ ಪರ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್​​ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ ಎಂದಿವೆ. ಅವರ ನಂತರದಲ್ಲಿ ಮೂರನೇ ಕ್ರಮಾಂಕದಲ್ಲಿ ರಿಷಭ್ ಪಂತ್​​ ಬಂದರೆ, ಕ್ಯಾಪ್ಟನ್​ ಗಿಲ್​ ನಾಲ್ಕನೇ ಕ್ರಮಾಂಕದಲ್ಲಿ ಆಡಲಿದ್ದಾರೆ ಎಂದು ತಿಳಿಸಿವೆ.

ಓಪನಿಂಗ್ ಕುರಿತಾಗಿ ಕೇಳಿಬಂದಿರುವ ವರದಿಗಳಿಗೆ ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ಮಾಜಿ ಕ್ಯಾಪ್ಟನ್​, ದಿಗ್ಗಜ ಕ್ರಿಕೆಟಿಗ ರಿಕ್ಕಿ ಪಾಂಟಿಂಗ್​, "ನನ್ನ ಪ್ರಕಾರ ಇಂಗ್ಲೆಂಡ್​ ವಿರುದ್ಧ ಸಾಯಿ ಸುದರ್ಶನ್​ ಮತ್ತು ಯಶಸ್ವಿ ಜೈಸ್ವಾಲ್ ಓಪನಿಂಗ್ ಆಡಲಿದ್ದಾರೆ. ಕಾರಣ, ಸುದರ್ಶನ್​ ಒಬ್ಬ ಕ್ಲಾಸ್​ ಆಟಗಾರ. ಟೆಕ್ನಿಕಲಿ ಅವರು ಅದ್ಭುತವಾಗಿದ್ದಾರೆ. ಟೆಸ್ಟ್ ಕ್ರಿಕೆಟ್​ನಲ್ಲಿ ನಿಜಕ್ಕೂ ಸಾಯಿ ಉತ್ತಮವಾಗಿ ಕಾಣಿಸುತ್ತಾರೆ. ಸಾಯಿ ಮತ್ತು ಜೈಸ್ವಾಲ್​ ಯುವ ಆಟಗಾರರು. ಅನುಭವಕ್ಕೆ ಇದು ಉತ್ತಮ ಸಮಯ. ರಾಹುಲ್ ಮತ್ತು ಕರುಣ್​ ನಾಯರ್​ ಪೈಕಿ ಯಾರೇ ಮೂರನೇ ಕ್ರಮಾಂಕದಲ್ಲಿ ಬಂದರೂ ಉತ್ತಮವೇ" ಎಂದು ಹೇಳಿದ್ದಾರೆ.

ಅಗ್ರ ಕ್ರಮಾಂಕಕ್ಕೆ ಈ​ ಐವರು

"ನನ್ನ ಪ್ರಕಾರ, ಸಾಯಿ ಸುದರ್ಶನ್​, ಯಶಸ್ವಿ ಜೈಸ್ವಾಲ್​, ಕೆ.ಎಲ್​. ರಾಹುಲ್​, ಶುಭಮನ್​ ಗಿಲ್​, ಕರುಣ್​ ನಾಯರ್​ ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್ ಪಂದ್ಯದ ಸರಣಿಯಲ್ಲಿ ಮೊದಲ ಐದು ಕ್ರಮಾಂಕದಲ್ಲಿ ಆಡುವುದು ಒಳಿತು" ಎಂದು ಪಾಂಟಿಂಗ್ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net