Alcohol: ಬಿಯರ್​ ಜತೆ ವಿಸ್ಕಿಯನ್ನು ಕುಡಿದರೆ ಏನಾಗುತ್ತದೆ ಗೊತ್ತಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ…

Alcohol
Published on

ಮದ್ಯಪಾನ ( Alcohol ) ಆರೋಗ್ಯಕ್ಕೆ ಹಾನಿಕಾರಕ ಎಂಬುದು ಎಲ್ಲರಿಗೂ ಗೊತ್ತಿದೆ. ಈ ಬಗ್ಗೆ ಎಷ್ಟೇ ಅರಿವು ಮೂಡಿಸಿದರು ಮದ್ಯ ಸೇವನೆ ಮಾಡುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಮದ್ಯಪಾನವು ಹಲವಾರು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ, ಮದ್ಯವ್ಯಸನಿಗಳು ಈ ಚಟವನ್ನು ಬಿಡಲು ಬಯಸುವುದಿಲ್ಲ. ಅದು ವೈನ್, ವಿಸ್ಕಿ ಅಥವಾ ಬಿಯರ್ ಆಗಿರಲಿ ಒಂದಲ್ಲ ಒಂದು ಮದ್ಯದ ಬ್ರಾಂಡ್​ಗೆ ವ್ಯಸನಿಯಾಗಿರುತ್ತಾರೆ.

ಬಿಯರ್​ ಜೊತೆಗೆ ವಿಸ್ಕಿ ಅಥವಾ ವೈನ್ ಬೆರೆಸಿದಾಗ ಏನಾಗುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳ ಸೇವನೆಯಿಂದ ಸಮಸ್ಯೆಗಳು ಹೆಚ್ಚಾಗುತ್ತವೆ ಎನ್ನಲಾಗಿದೆ. ಇದು ಮಾನವನ ಮೆದುಳಿನ ಮೇಲೆ ಆಳವಾದ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ.

ಈ ಎರಡನ್ನೂ ಒಟ್ಟಿಗೆ ತೆಗೆದುಕೊಂಡರೆ ಆ ವ್ಯಕ್ತಿ ಬಹುಬೇಗ ನಶೆಯಲ್ಲಿ ಮುಳುಗುತ್ತಾನೆ. ಅಂತಿಮವಾಗಿ ಯೋಚಿಸುವ ವಿವೇಚನೆಯನ್ನು ಕಳೆದುಕೊಳ್ಳುತ್ತಾನೆ. ಬಿಯರ್, ವೈನ್ ಅಥವಾ ವಿಸ್ಕಿಯನ್ನು ಒಟ್ಟಿಗೆ ಕುಡಿಯುವುದರಿಂದ ನಿರ್ಜಲೀಕರಣದ ಸಮಸ್ಯೆ ಹೆಚ್ಚಾಗುತ್ತದೆ. ಅದರಲ್ಲೂ ರಾತ್ರಿ ಕುಡಿದು ಮಲಗಿದರೆ ಬೆಳಗ್ಗೆ ಆಗುವಷ್ಟರಲ್ಲಿ ದೇಹದಲ್ಲಿ ಹಲವು ಸಮಸ್ಯೆಗಳು ಉದ್ಭವಿಸುತ್ತವೆ. ವಿಶೇಷವಾಗಿ ನಿರ್ಜಲೀಕರಣದಿಂದಾಗಿ ಮೆದುಳಿನ ಕಾರ್ಯವು ದುರ್ಬಲಗೊಳ್ಳುತ್ತದೆ. ಆಲ್ಕೋಹಾಲ್ ದೇಹವನ್ನು ಪ್ರವೇಶಿಸಿದ ತಕ್ಷಣ, ಅದು ದೇಹದಿಂದ ನೀರನ್ನು ಹೊರಹಾಕುತ್ತದೆ.

ವಿಸ್ಕಿ ಮತ್ತು ಬಿಯರ್ ಅನ್ನು ಒಟ್ಟಿಗೆ ಕುಡಿಯುವುದರಿಂದ ವಾಂತಿ ಮತ್ತು ಭೇದಿಯ ಅಪಾಯ ಹೆಚ್ಚಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಇದರಿಂದಾಗಿ ಎದೆಯಲ್ಲಿ ಉರಿಯೂತ ಹೆಚ್ಚಾಗುತ್ತದೆ. ಅಲ್ಲದೆ, ಬಿಯರ್ ಮತ್ತು ವಿಸ್ಕಿಯನ್ನು ಒಟ್ಟಿಗೆ ಸೇವಿಸುವುದರಿಂದ ಕಿಡ್ನಿ ಕಾರ್ಯನಿರ್ವಹಣೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಹೀಗಾಗಿ ಇವೆರೆಡನ್ನು ಯಾವುದೇ ಕಾರಣಕ್ಕೂ ಒಟ್ಟಿಗೆ ತೆಗೆದುಕೊಳ್ಳಬೇಡಿ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net