ಹಾವು ಕಚ್ಚಿದಾಗ ಮಾಡುವ ಈ ಒಂದು ತಪ್ಪಿನಿಂದ ಪ್ರಾಣ ಹೋಗುತ್ತೆ ಎಚ್ಚರ! ಈ ರೀತಿ ಮಾಡೋದನ್ನು ತಪ್ಪಿಸಿ | Snakes

Snakes
Published on

ಕೊಲ್ಲಂ: ಹಾವುಗಳು ( Snakes ) ಕಚ್ಚಿದ ಸಂದರ್ಭದಲ್ಲಿ ಯಾವ ಹಾವು ಕಚ್ಚಿತ್ತು ಎಂಬುದನ್ನು ತಿಳಿದುಕೊಳ್ಳಲು ಕೆಲವರು ಅದರ ಹಿಂದೆ ಹೋಗುತ್ತಾರೆ. ಈ ರೀತಿ ಮಾಡುವುದು ದೊಡ್ಡ ತಪ್ಪು. ಹಾವಿನ ಹಿಂದೆ ಹೋಗುವ ಬದಲು ಮೊದಲು ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ.

ಗಮನಾರ್ಹ ಸಂಗತಿ ಏನೆಂದರೆ, ಎಷ್ಟೇ ಹಾವು ಕಚ್ಚಿದರೂ ಪ್ರತಿವಿಷ ಅಥವಾ ಆ್ಯಂಟಿವೆನಮ್​ ಒಂದೇಯಾಗಿರುತ್ತದೆ. ಕಚ್ಚಿದ ವ್ಯಕ್ತಿಯು ಹಾವಿನ ಹಿಂದೆ ಹೋದರೆ, ವಿಷವು ದೇಹದಲ್ಲಿ ಮತ್ತಷ್ಟು ಹರಡಿ, ಸಾವಿಗೆ ಕಾರಣವಾಗುತ್ತದೆ. ನಾಗರಹಾವು ( Cobra ), ಮಂಡಲದಹಾವು ( Viper ), ಕಟ್ಟು ಹಾವು ( Velli Kattan ) ಇತ್ಯಾದಿ ಹಾವುಗಳ ಕಡಿತವು ಹೆಚ್ಚಾಗಿ ವರದಿಯಾಗುತ್ತವೆ.

ಇನ್ನು ಜನರಲ್ಲಿ ಸಾಮಾನ್ಯವಾಗಿ ಒಂದು ಭ್ರಮೆ ಆವರಿಸಿಕೊಂಡು ಬಿಟ್ಟಿದೆ. ಅದೇನೆಂದರೆ, ಹಾವು ಕಡಿದಾಗ ಆಯಾ ಜಾತಿಯ ಹಾವುಗಳ ವಿಷದ ಪ್ರಕಾರ ಚಿಕಿತ್ಸೆ ನೀಡುತ್ತಾರೆ ಅಂದುಕೊಂಡಿದ್ದಾರೆ. ಹೀಗಾಗಿ ಹಾವು ಕಚ್ಚಿದ ಕೂಡಲೇ ಅದು ಯಾವ ಹಾವು ಎಂದು ತಿಳಿದುಕೊಳ್ಳಲು ಅದರ ಹಿಂದೆ ಬೀಳುತ್ತಾರೆ. ಆದರೆ, ಇದು ಭ್ರಮೆಯಷ್ಟೇ. ಯಾವುದೇ ಹಾವು ಕಚ್ಚಿದರೂ ಆ್ಯಂಟಿವೆನಮ್​ ಒಂದೇಯಾಗಿರುತ್ತದೆ ಎಂಬುದು ನೆನಪಿರಲಿ. ಹೀಗಾಗಿ ಮೊದಲು ಮಾಡಬೇಕಾಗಿರುವ ಕೆಲಸ ಹತ್ತಿರದ ಆಸ್ಪತ್ರೆಗೆ ದೌಡಾಯಿಸುವುದು.

Snakes
Snakes

ಇತ್ತೀಚೆಗೆ ಕೇರಳದ ಕೊಲ್ಲಂನಲ್ಲಿ ಹಾವು ಕಡಿತಕ್ಕೆ ಒಳಗಾದ ಯುವಕನೊಬ್ಬನನ್ನು ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ಇಲ್ಲಿ ಆತನ ಪಾಲಿಗೆ ವಿಲನ್​ ಆಗಿದ್ದು, ಅತ್ಯಮೂಲ್ಯ ಸಮಯ. ಏಕೆಂದರೆ, ಕಚ್ಚಿದ ಹಾವು ಯಾವುದೆಂದು ತಿಳಿದುಕೊಳ್ಳಲು ಸಮಯ ವ್ಯರ್ಥ ಮಾಡಿದ್ದರು. ಇದರಿಂದ ಯುವಕನ ಪ್ರಾಣಕ್ಕೆ ಸಂಚಕಾರವಾಯಿತು. ಅಂದಹಾಗೆ ಹಾವು ಕಡಿತಕ್ಕೆ ಒಳಗಾಗುವ ವ್ಯಕ್ತಿಗೆ ಆ್ಯಂಟಿವೆನಮ್ ಅನ್ನು ನಿರಂತರ ಕೊಡಲಾಗುತ್ತದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೆ ಬದುಕುವ ಸಾಧ್ಯತೆ ಶೇ. 90 ರಷ್ಟು ಇರುತ್ತದೆ.

ನಾಗರಹಾವು: ಈ ಹಾವಿನ ವಿಷ ನರಮಂಡಲ ಹಾಗೂ ಮೆದುಳಿನ ಮೇಲೆ ಪರಿಣಾಮ ಬೀರುತ್ತದೆ. ಉಸಿರಾಟದ ತೊಂದರೆ, ಕಣ್ಣುರೆಪ್ಪೆಗಳ ಊತ, ಗಾಯದ ಸುತ್ತಲಿನ ಪ್ರದೇಶದಲ್ಲಿ ಊತ ಪ್ರಮುಖ ಲಕ್ಷಣಗಳಾಗಿವೆ. ಕೆಲವು ಹಂತದಲ್ಲಿ ಈ ಕಡಿತಕ್ಕೆ ಒಳಗಾದವರಿಗೆ ವೆಂಟಿಲೇಟರ್ ಅಗತ್ಯವಾಗಬಹುದು.

ಮಂಡಲ ಹಾವು: ರಕ್ತ ಪರೀಕ್ಷೆಯಿಂದ ಈ ಹಾವಿನ ವಿಷದ ಪ್ರಮಾಣ ತಿಳಿಯುತ್ತದೆ. ಇದು ಕಚ್ಚಿದವರಿಗೆ ಡಯಾಲಿಸಿಸ್ ಬೇಕಾಗಬಹುದು.

ಕಟ್ಟುಹಾವು: ಸಾಮಾನ್ಯವಾಗಿ ಈ ಹಾವು ಕಚ್ಚಿದಾಗ ಗಾಯ ಮತ್ತು ಊತ ಸೇರಿದಂತೆ ಯಾವುದೇ ರೋಗಲಕ್ಷಣಗಳು ಇರುವುದಿಲ್ಲ. ಆದರೆ, ಇದು ಮಾರಣಾಂತಿಕ ವಿಷವಾಗಿದೆ. ಕೆಲವು ಹಂತದಲ್ಲಿ ರೋಗಲಕ್ಷಣಗಳು ನಾಗರಹಾವು ಕಡಿತದಂತೆಯೇ ಇರುತ್ತವೆ.

ಇನ್ನು ಎಪ್ಪತ್ತು ಪ್ರತಿಶತ ಪ್ರಕರಣಗಳಲ್ಲಿ ವಿಷ ಏರಿರುವುದಿಲ್ಲ. ಅಂತಹ ಸಂದರ್ಭಗಳಲ್ಲಿಯೂ ಕಾಯಬೇಕಾಗುತ್ತದೆ. ಏಕೆಂದರೆ, ವಿಷವಿರದ ವ್ಯಕ್ತಿಗೆ ಆ್ಯಂಟಿವೆನಮ್ ಅನ್ನು ನೀಡುವುದು ಕೂಡ ಅತ್ಯಂತ ಅಪಾಯಕಾರಿ. ದೀರ್ಘಕಾಲದ ಅಲರ್ಜಿಗಳು ಮತ್ತು ಕೆಲವೊಮ್ಮೆ ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು. ಹೀಗಾಗಿ ನಿರಂತರ ವೀಕ್ಷಣೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಚಿಕಿತ್ಸೆಯ ಪ್ರೋಟೋಕಾಲ್ ಪ್ರಕಾರ ಚಿಕಿತ್ಸೆ ನೀಡದಿದ್ದರೂ ಸಹ 24 ಗಂಟೆಗಳ ಆಸ್ಪತ್ರೆಯ ಅಗತ್ಯವಿರುತ್ತದೆ. ಹೀಗಾಗಿ ಹಾವು ಕಡಿತದ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಿ, ಒಂದು ಸಣ್ಣ ತಪ್ಪು ಪ್ರಾಣವನ್ನೇ ಕಸಿಯಬಹುದು ಎಚ್ಚರ! (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net