More

  ಜಡಭರತನ ಶ್ರೇಷ್ಠ ಜೀವನಗಾಥೆ; ಸಂಸಾರದಲ್ಲಿದ್ದರೂ ಕುಶಲತೆ..

  | ಭಾಷ್ಯಮ್ ರಾಮಚಂದ್ರಾಚಾರ್ 
  ಜುಳು ಜುಳು ಮಂಜುಳ ನಾದದಿಂದ ಪ್ರಶಾಂತವಾಗಿ ಹರಿಯುತ್ತಿದ್ದ ನದಿ. ಸುತ್ತಲೂ ಅರಣಿಕರು ವಿಹರಿಸುತ್ತಿದ್ದ ಕಾಡು, ಅದರಲ್ಲಿನ ದುಂಬಿ – ಜೀರುಂಡೆಗಳ ನಾದ. ಹತ್ತಿರದಲ್ಲೇ ಸಪ್ತಋಷಿಗಳಲ್ಲಿ ಒಬ್ಬರಾದ ಪುಲಹರ ಆಶ್ರಮ. ಈ ಪ್ರಶಾಂತ ವಾತಾವರಣದಲ್ಲಿ ಆಗತಾನೆ ಆಹ್ನಿಕ ಧ್ಯಾನಗಳನ್ನು ಮುಗಿಸಿದ ರಾಜರ್ಷಿ ಭರತರು, ದಹರಾಕಾಶದಲ್ಲಿ ಕಂಡು ಅನುಭವಿಸಿದ ಜ್ಞಾನಸೂರ್ಯನ ಪ್ರಕಾಶ- ಪ್ರಶಾಂತತೆಯ ವಿಸ್ತಾರವನ್ನು, ಪ್ರಣವ ನಾದದ ವಿಸ್ತಾರವನ್ನು ಹೊರಪ್ರಕೃತಿಯಲ್ಲೂ ಅನುಭವಿಸುತ್ತ ಇನ್ನೂ ಒಳಅನುಭವದ ಗುಂಗಿನಲ್ಲೇ ಇದ್ದರು. ಈ ಮಧ್ಯೆ, ಈ ವಾತಾವರಣವನ್ನು ಭೇದಿಸಿ ಹೊರಟ ಸಿಂಹದ ಘರ್ಜನೆ. ಹತ್ತಿರದಲ್ಲೇ ಮೇಯುತ್ತಿದ್ದ ತುಂಬು ಗರ್ಭಿಣಿಯಾದ ಒಂದು ಹರಿಣಿ, ಬೆಚ್ಚಿ, ಬೆದರಿ ದಿಕ್ಕು ಕಾಣದೆ ತನ್ನನ್ನು, ತನ್ನ ಒಳಗಿನ ಕಿರು ಜೀವವನ್ನು ಪಾರುಮಾಡಲೋಸುಗ ಶಕ್ತಿಮೀರಿದ ಪ್ರಯತ್ನದಿಂದ ನದಿಯನ್ನು ಹಾರಿ ದಾಟಲು ಉದ್ಯುಕ್ತವಾಯಿತು.

  ತನ್ನ ಭಾರವನ್ನು ಮತ್ತು ಉದರದಲ್ಲಿದ್ದ ಕಿರಿಯ ಭಾರವನ್ನೂ ದಾಟಿಸಲಾಗದೆ ನೀರಿನಲ್ಲಿ ಬಿದ್ದು ಅಸು ನೀಗಿತು. ಅದೃಷ್ಟವಶಾತ್ ಗರ್ಭದಲ್ಲಿದ್ದ ಮರಿ ಹೊರಬಂದಿತು. ಈ ಘಟನೆಗಳನ್ನು ಇನ್ನೂ ಒಳಗುಂಗಿನಲ್ಲೇ ಇದ್ದ ಆತ್ಮಗುಣಸಂಪನ್ನನಾದ ಋಷಿಯ ಮನಸ್ಸು ಗುರುತಿಸಿ, ದಯೆ ಒಸರಿ, ಕರುಣಾರಸವಾಗಿ ದ್ರವಿಸಿ, ಅವರ ಹೊರ ಇಂದ್ರಿಯಗಳಿಗೆ ಚೈತನ್ಯವನ್ನು ಕೊಟ್ಟು, ನದಿಯಲ್ಲಿ ಧುಮಿಕಿಸಿ ಆ ಕಂದನನ್ನು ಕಾಪಾಡುವಂತೆ ಮಾಡಿತು. ಮರಿಯನ್ನು ಆಶ್ರಮಕ್ಕೆ ತಂದ ಅವರು, ಅದಕ್ಕೆ ಹಾಲುಯ್ದು, ಮೇವುಣಿಸಿ ಸಂರಕ್ಷಿಸಲುದ್ಯುಕ್ತರಾದರು. ಆ ಜಿಂಕೆ, ತನ್ನ ಮಿಂಚಿನ ಕುಡಿನೋಟದಿಂದ, ಚಿಮ್ಮುವ ಹಾರುವಿಕೆಯಿಂದ, ಪ್ರೀತಿಯವರ್ತನೆಯಿಂದ ಅವರ ಕರುಣೆಯನ್ನು ವಾತ್ಸಲ್ಯವಾಗಿ, ಪ್ರೀತಿಯಾಗಿ ಅವರಿಗೇ ತಿಳಿಯದಂತೆ ಮಾರ್ಪಡಿಸಿತು. ತಾನು ದರ್ಭ ಸಂಗ್ರಹಕ್ಕೆ ಹೋದರೂ ಮರಿಯದೇ ಗುಂಗು, ಧ್ಯಾನದಲ್ಲೂ ಕೆಲವೊಮ್ಮೆ ಅದರ ಯೋಚನೆಯೇ! ಪ್ರೀತಿ ಕೊನೆಗೆ ಎಲ್ಲಿಲ್ಲದ ಮೋಹವಾಗಿ ಪರಿಣಮಿಸಿ, ಭಗವಂತನ ಧ್ಯಾನದ ಬದಲಿಗೆ ಜಿಂಕೆಯ ಧ್ಯಾನದಲ್ಲಿ ಪರ್ವ್ಯವಸಾನಗೊಂಡಿತು. ತನ್ನ ಅಂತ್ಯಕಾಲದಲ್ಲೂ ಆ ಹರಿಣದ ನೆನಪಿನಲ್ಲೇ ಋಷಿ ಅಸುನೀಗಿದರು. ಅಂತ್ಯಕಾಲದಲ್ಲಿ ಯಾವ ಚಿಂತೆಯಲ್ಲಿರುತ್ತೇವೆಯೋ ಮರು ಜನ್ಮ ಅದರಲ್ಲೇ ಎಂಬ ಭಗವಂತನ ನಿಯಮದಂತೆ, ಭರತರು ಜಿಂಕೆಯಾಗಿಯೇ ಜನ್ಮ ಪಡೆದರು. ಆದರೂ ಪೂರ್ವಜನ್ಮದ ಸಂಸ್ಕಾರ ಬಲವಾಗಿದ್ದದರಿಂದ, ತನ್ನ ಹಿಂದಿನ ಜನ್ಮದ ನೆನಪು ಪ್ರಖರವಾಗಿಯೇ ಇದ್ದಿತು. ಈ ತಪ್ಪನ್ನು ಮತ್ತೆ ಮಾಡಬಾರದು ಎಂದು ಸಂಕಲ್ಪಿಸಿದ ಆ ಋಷಿ ಜಿಂಕೆ, ಒಬ್ಬ ಋಷಿ ಆಶ್ರಮದಲ್ಲಿ ತನ್ನ ಜೀವನವನ್ನು ಕಳೆದು ಮತ್ತೆ ಮಾನವನಾಗಿ ಜನಿಸಿತು. ಹುಟ್ಟಿನಿಂದಲೇ ಆಧ್ಯಾತ್ಮದಲ್ಲೇ ತಲ್ಲೀನರಾಗಿ, ಲೌಕಿಕವಿಷಯಗಳಲ್ಲಿ ಜಡರಾಗಿ ಜಡಭರತ ಎಂಬ ಬಿರುದು ಪಡೆದರು.

  ಸಂಸಾರದಲ್ಲಿದ್ದರೂ ಕುಶಲತೆ

  ಅರಿಷಡ್ವರ್ಗಗಳಿಂದ ತಪ್ಪಿಸಿಕೊಂಡು, ರಾಗ-ಮೋಹಗಳ ಬಂಧಗಳಿಗೆ ಒಳಗಾಗದೆ, ಭಗವಂತನ ತಾದಾತ್ಮ್ಯವನ್ನು ಹೊಂದಿ, ಅಂತ್ಯ ಕಾಲದಲ್ಲಿ ಅವನೆಡೆಯಲ್ಲಿಯೇ ಮನಸ್ಸಿದ್ದರೆ, ಅವನಲ್ಲೇ ಲೀನವಾಗಬಹುದು ಎಂಬುದು ಭರತರ ಜೀವನದ ಸಾರಾಂಶ. ಭಗವಂತನ ಧ್ಯಾನ ಬಿಟ್ಟು ಜಿಂಕೆಯ ವ್ಯಾಮೋಹದಲ್ಲಿ ತೊಡಗಿದ್ದರಿಂದ ಜಿಂಕೆಯಾಗಿ ಜನ್ಮ ತಳೆಯಬೇಕಾದುದು ದುರ್ದೈವ. ಆದರೂ ಒಳ್ಳೆಯ ಸಂಸ್ಕಾರ, ಕರ್ಮಗಳು ಅವನ ಪೂರ್ವಜನ್ಮದ ಸ್ಮರಣೆಯನ್ನು ಹಾಗೇ ಉಳಿಸಿ ಮತ್ತೆ ಮಹಾ ಧ್ಯೇಯದತ್ತ ಸಾಗುವಂತಾದುದು ಸುಕೃತದ ಫಲ. ನಾವೆಲ್ಲಾ ಕಲಿಯಬೇಕಾದ ಜೀವನ ಪಾಠಗಳನ್ನು ಬಿತ್ತರಿಸುವ ಕಥೆಯಾಗಿ, ಭಾರತ ಎಂಬ ನಾಮಧೇಯಕ್ಕೆ ಕಾರಣರಾದ ಭರತ ಮಹಾಮುನಿಗೆ ನಮೋನಮಃ.

  ಒಂದೇ ಒಂದು ಲೈವ್​; ಚಂದ್ರನಲ್ಲಿಗೆ ಜಿಗಿಯಿತು ‘ಇಸ್ರೋ’ ಸಬ್​ಸ್ಕ್ರೈಬರ್ಸ್​ ಸಂಖ್ಯೆ

  ರಾಜ್ಯೋತ್ಸವ ರಸಪ್ರಶ್ನೆ - 25

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts