ಜೀವನಕ್ಕೆ ದಾರ್ಶನಿಕರ ಮಾರ್ಗದರ್ಶನ ಅವಶ್ಯ

20 SGR 01
ಸಾಗರದ ಶ್ರೀ ಮಹಾಗಣಪತಿ ದೇವಾಲಯದ ಆವರಣದಲ್ಲಿ ಆಯೋಜಿಸಿದ್ದ ಭಕ್ತಿ ಸಿಂಚನ ಕಾರ್ಯಕ್ರಮದಲ್ಲಿ ವಿದುಷಿ ಚೇತನಾ ರಾಜೀವ್ ರಾವ್ ಮಾತನಾಡಿದರು. ಎಚ್.ಎಲ್.ರಾಘವೇಂದ್ರ, ಎಚ್.ಎಲ್.ಶ್ರೀಧರ, ವೀರಭದ್ರಪ್ಪ ಜಂಬಿಗೆ, ಮೈತ್ರಿ ಪಾಟೀಲ್ ಇದ್ದರು.
Published on

ಸಾಗರ: ಸಂಗೀತ ಕಲಿಕೆ ಮನೋವಿಕಾಸಕ್ಕೆ ದಾರಿ. ಸಾಧನೆ ಮೂಲಕ ಕಲಾವಿದ ಯಶಸ್ಸು ಕಂಡಾಗ ನಿರಂತರತೆ ಕಾಪಾಡುತ್ತದೆ ಎಂದು ತೇಜಸ್ವಿ ತಬಲ ವಿದ್ಯಾಲಯದ ವಿದುಷಿ ಚೇತನಾ ರಾಜೀವ್ ರಾವ್ ಹೇಳಿದರು.

ಅಂಗಾರಕ ಸಂಕಷ್ಟಿಯಂದು ಇತಿಹಾಸ ಪ್ರಸಿದ್ಧ ಶ್ರೀ ಗಣಪತಿ ದೇವಾಲಯ ಆವರಣದಲ್ಲಿ ಎಚ್.ಎಲ್.ರಾಘವೇಂದ್ರ ನೇತೃತ್ವದಲ್ಲಿ ನಗರದ ಸಂಗೀತ ಸಾಗರ ವಾದ್ಯ ವೃಂದ ಆಯೋಜಿಸಿದ್ದ ಭಕ್ತಿ ಸಿಂಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಲಿಕೆಯಂತೆ ಗ್ರಹಿಕೆಯೂ ಅಷ್ಟೇ ಮುಖ್ಯ ಎಂದು ತಿಳಿಸಿದರು.

ದಾಸರು, ಸಂತರು, ಶರಣರು, ದಾರ್ಶನಿಕರು ತೋರಿದ ಮಾರ್ಗದರ್ಶನ ಜೀವನಕ್ಕೆ ಅತ್ಯಂತ ಅವಶ್ಯ. ಕೀರ್ತನೆ, ವಚನ, ಗೀತೆಗಳ ಮೂಲಕ ಜಾಗೃತಿ ಮೂಡಿಸಿದ್ದಾರೆ. ಸಮಾಜದ ಸಮಸ್ಯೆಗಳನ್ನು ತೋರಿಸಿದ್ದಾರೆ. ಭಗವಂತನ ಸಾಕ್ಷಾತ್ಕಾರ ಆಗಬೇಕಾದರೆ ಭಕ್ತಿಯೊಂದೇ ಮಾರ್ಗ. ಇಂತಹ ಕಾರ್ಯಕ್ರಮಗಳ ಮೂಲಕ ಯುವಜನರಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಬೇಕು ಎಂದರು.

ಸಂಸ್ಥೆಯ ಮುಖ್ಯಸ್ಥ, ಗಾಯಕ ಎಚ್.ಎಲ್.ರಾಘವೇಂದ್ರ ಮಾತನಾಡಿ, ದಾಸ ಸಾಹಿತ್ಯ ವಿಶೇಷ ಆನಂದ ನೀಡುತ್ತದೆ. ಕನಕದಾಸರು, ಪುರಂದರದಾಸರು, ಮಹಿಪತಿದಾಸರು ಹೀಗೆ ದಾಸ ಪರಂಪರೆಯಲ್ಲಿ ಮೂಡಿಬಂದ ಮಹಾನುಭಾವರು ಕೀರ್ತನೆಗಳ ಮೂಲಕ ಭಕ್ತಿ ಮಹತ್ವ ಪರಿಚಯಿಸಿದರು. ಭಗವಂತನ ಸ್ಮರಣೆ ಜೀವನದ ಪ್ರಮುಖ ಗುರಿ ಎನ್ನುವುದನ್ನು ಪ್ರತಿಪಾದಿಸಿದರು. ಕೀರ್ತನೆಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅನನ್ಯ ಕೊಡುಗೆ ಎಂದು ತಿಳಿಸಿದರು.

ಗಾಯನದಲ್ಲಿ ಎಚ್.ಎಲ್.ರಾಘವೇಂದ್ರ, ವಿನಯಾ ದೇವರಾಜ್, ವಿ.ಶಂಕರ್, ರಾಜು, ಸಿ.ಪಿ.ಗಣೇಶ್, ವೆಂಕಟೇಶ್ ಕುತ್ತಾ, ಮಂಜುನಾಥ್, ಪ್ರಾರ್ಥನಾ, ಪ್ರಥಮ್, ಇಂದ್ರಜಿತ್, ನಾಗಭೂಷಣ್, ಮಂಜುಳಾ ಮತ್ತಿತರರು ಸಹಕರಿಸಿದರು. ಕನಕದಾಸರು, ಪುರಂದರದಾಸರ ಭಕ್ತಿಗೀತೆಗಳು ಹಾಗೂ ಶರಣರ ತತ್ವಪದಗಳ ಗಾಯನ ನಡೆಯಿತು. ವೀರ ಮಾರುತಿ ಭಜನಾ ಮಂಡಳಿ ಸದಸ್ಯರು ಕಾರ್ಯಕ್ರಮ ನಡೆಸಿಕೊಟ್ಟರು. ಪ್ರಮುಖರಾದ ಎಚ್.ಎಲ್.ಶ್ರೀಧರ್, ವೀರಭದ್ರಪ್ಪ ಜಂಬಿಗೆ, ಮೈತ್ರಿ ಪಾಟೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net