

ಬದಿಯಡ್ಕ: ಸಹೃದಯ ಭಕ್ತರು, ಊರ ಜನರ ಸನ್ಮನಸ್ಸಿನ ಶ್ರದ್ಧೆಗಳಿಂದ ಆರಾಧನಾಲಯಗಳು ಕಾಲಾಕಾಲಕ್ಕೆ ಜೀಣೋದ್ಧಾರಗೊಳ್ಳಬೇಕಿದ್ದರೆ ಪ್ರಬಲ ಇಚ್ಛಾಶಕ್ತಿ ಕಾರಣವಾಗುತ್ತದೆ. ನಮ್ಮ ಗಳಿಕೆಯ ಒಂದಂಶವನ್ನು ಸತ್ಕಾರ್ಯಗಳಿಗೆ ದಾನ ನೀಡುವ ಮನೋಭಾವದಿಂದ ಬದುಕು ಸಾರ್ಥಕಗೊಳ್ಳುತ್ತದೆ ಎಂದು ಶ್ರೀ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಗಳು ಹೇಳಿದರು. ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀಮಹಾವಿಷ್ಣು ದೇವಾಲಯದಲ್ಲಿ ಶನಿವಾರ ಆರಂಭಗೊಂಡ ಪುನಃಪ್ರತಿಷ್ಠಾಪನಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಮಧುಸೂದನ ಅಯರ್ ಅಧ್ಯಕ್ಷತೆ ವಹಿಸಿದ್ದರು. ಚಿತ್ರಾಪುರ ಮಠದ ಶ್ರೀವಿದ್ಯೇಂದ್ರ ತೀರ್ಥ ಸ್ವಾಮೀಜಿ ಆಶೀರ್ವದಿಸಿದರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಕೆ.ಕೆ.ಶೆಟ್ಟಿ ಉದ್ಘಾಟಿಸಿದರು. ಮಧೂರು ಶ್ರೀ ಕ್ಷೇತ್ರದ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಜಯದೇವ ಖಂಡಿಗೆ, ಮಲಬಾರ್ ದೈವಸ್ವಂ ಬೋರ್ಡ್ ಪರಿಶೋಧನಾಧಿಕಾರಿ ಉಮೇಶ್ ಅಟ್ಟೆಗೋಳಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಮಾನ್ಯ ಮಾಸ್ತರ್ ಕಾರ್ಮಾರು, ನರಸಿಂಹ ಭಟ್ ಕಾರ್ಮಾರು, ವೆಂಕಪ್ಪ ಶೆಟ್ಟಿ ಕಾರ್ಮಾರು, ಶ್ರೀ ಕೃಷ್ಣ ಭಟ್ ಪುದುಕೋಳಿ, ತಿರುಮಲೇಶ್ವರ ಭಟ್ ಉಳ್ಳೋಡಿ, ಕುಞ್ಞಪ್ಪ ಮಣಿಯಾಣಿ ಕಾರ್ಮಾರು ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ ಸ್ವಾಗತಿಸಿದರು. ಸುಂದರ ಶೆಟ್ಟಿ ಕೊಲ್ಲಂಗಾನ ವಂದಿಸಿದರು. ಸಂತೋಷ್ ಕುಮಾರ್ ಎಸ್.ಮಾನ್ಯ ನಿರೂಪಿಸಿದರು. ಸ್ಥಳೀಯ ಪ್ರತಿಭೆಗಳಿಂದ ನೃತ್ಯ ವೈವಿಧ್ಯ ಪ್ರಸ್ತುತಗೊಂಡಿತು. ವಿಷ್ಣು ಸರ್ವ ವ್ಯಾಪಕ. ದೇವಾಲಯದ ಪ್ರತಿಯೊಂದು ರಚನೆಯ ಹಿಂದೆಯೂ ಒಂದೊಂದು ವಿಶಿಷ್ಟ ಅರ್ಥ ಇದೆ. ಜಗವ್ಯಾಪಿಯಾದ ಮಹಾವಿಷ್ಣುವಿಗೆ ಇಲ್ಲಿ ಪುನರ್ ನಿರ್ಮಾಣಗೊಂಡ ವಿಶಾಲ ದೇವಾಲಯ ಪ್ರತಿಯೊಬ್ಬ ಭಜಕನ ಬದುಕಿನ ವಿಶಾಲತೆ ಮೆರೆಯುವಲ್ಲಿ ಕಾರಣವಾಗಲಿದೆ. ಹಿಂದೂ ಸಂಸ್ಕೃತಿ, ಆಚಾರ ವಿಚಾರಗಳನ್ನು ಹೊಸ ತಲೆಮಾರಿಗೆ ದಾಟಿಸುವ ಚಟುವಟಿಕೆಗಳು ಕ್ರಿಯಾತ್ಮಕವಾಗಿರಲಿ.