

ಪುತ್ತೂರು ಗ್ರಾಮಾಂತರ: ದೇಯಿ ಬೈದ್ಯೆತಿ, ಕೋಟಿ-ಚೆನ್ನಯರ ಮೂಲಸ್ಥಾನವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ನಂದನಬಿತ್ತ್ಲ್ ಗೆಜ್ಜೆಗಿರಿ ಕ್ಷೇತ್ರದಲ್ಲಿ ಭಾನುವಾರ ಕ್ಷೇತ್ರದ ಮಾತೆ ದೇಯಿ ಬೈದ್ಯೆತಿ ಅಮ್ಮನವರ ಮಹಾ ಸಂಕಲ್ಪದಂತೆ ನಾಡಿನ ಎಲ್ಲ ಮಾತೆಯರಿಗೆ ಅಮ್ಮನ ಪ್ರೀತಿ ತುಂಬಿದ ಆಶೀರ್ವಾದ ರೂಪದಲ್ಲಿ ಮಡಿಲ ತುಂಬಿಸುವ ‘ಅಮ್ಮನ ಮಡಿಲ ಪ್ರಸಾದ’ ಕಾರ್ಯಕ್ರಮ ವಿಶೇಷವಾಗಿ ಮೂಡಿಬಂತು. ಜನಸಾಗರವೇ ಗೆಜ್ಜೆಗಿರಿಗೆ ಹರಿದು ಬಂದಿತ್ತು.
ಮೂಡುಬಿದಿರೆಯ ಶಿವಾನಂದ ತಂತ್ರಿ ನೇತೃತ್ವದಲ್ಲಿ ಬೆಳಗ್ಗೆ ಗಣಪತಿ ಹೋಮ, ಗುರುಪೂಜೆ, ತೋರಣ ಮುಹೂರ್ತ, ನಾಗದೇವರ ಸಾನ್ನಿಧ್ಯದಲ್ಲಿ ಗಣಹೋಮ, ನವಕ ಕಲಶಾಭಿಷೇಕ, ಆಶ್ಲೇಷ ಬಲಿ ಸೇವೆ, ಮಂಗಳಾರತಿ, ಧೂಮಾವತಿ ಸಾನ್ನಿಧ್ಯ ಹಾಗೂ ಎಲ್ಲ್ಲ ಪರಿವಾರ ಸಾನ್ನಿಧ್ಯದಲ್ಲಿ ಶುದ್ಧಿ ನವಕ ಕಲಶಾಭಿಷೇಕ ನಡೆಯಿತು. ಬೆಳಗ್ಗೆ 11.28ರ ವೃಷಭ ಲಗ್ನದಲ್ಲಿ ಧ್ವಜಾರೋಹಣ, ಪರ್ವ ಸೇವೆ, ಮೂಲಸ್ಥಾನ ಗರಡಿಯಲ್ಲಿ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಮಧ್ಯಾಹ್ನ 12 ಗಂಟೆಯಿಂದ ಅಮ್ಮನ ಮಡಿಲ ಪ್ರಸಾದ ವಿತರಣೆ ಆರಂಭಗೊಂಡಿತು. ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಸಂಜೆ ಧೂಮಾವತಿ ಬಲಿ ಉತ್ಸವ, ಧರ್ಮಚಾವಡಿಯಲ್ಲಿ ಭಗವತಿ ಸೇವೆ ಮಹಾಪೂಜೆ ನಡೆಯಿತು.
ಬೆಳಗ್ಗೆ ಪುತ್ತೂರಿನ ಸ್ವರ ಮಾಧುರ್ಯ ಸಂಗೀತ ಬಳಗದ ಸೋನಿಕಾ ಜನಾರ್ದನ್ ಬಳಗದವರಿಂದ ಭಕ್ತಿ ಗಾಯನ ನಡೆಯಿತು. ವಿವಿಧ ಭಜನಾ ತಂಡಗಳಿಂದ ಭಜನೆ, ಗೆಜ್ಜೆಗಿರಿ ಮೇಳದಿಂದ ‘ಶ್ರೀದೇವಿ ಮಹಾತ್ಮೆ’ ಯಕ್ಷಗಾನ ಬಯಲಾಟ ನಡೆಯಿತು.
ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಗೌರವಾಧ್ಯಕ್ಷ ಪೀತಾಂಬರ ಹೆರಾಜೆ ಮತ್ತು ಜಯಂತ ನಡುಬೈಲು, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಮೊಕ್ತೇಸರ ಶ್ರೀಧರ ಪೂಜಾರಿ, ಕ್ಷೇತ್ರಾಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾರ್ಯದರ್ಶಿ ರಾಜಾರಾಮ್ ಕೆ.ಬಿ, ಉಪಾಧ್ಯಕ್ಷರಾದ ಉಲ್ಲಾಸ್ ಕೋಟ್ಯಾನ್, ದೀಪಕ್ ಕೋಟ್ಯಾನ್, ಕೋಶಾಧಿಕಾರಿ ಮೋಹನದಾಸ್ ವಾಮಂಜೂರು, ಕಾರ್ಯದರ್ಶಿಗಳಾದ ಜಯವಿಕ್ರಮ್ ಕಲ್ಲಾಪು, ಸಂತೋಷ್ಕುಮಾರ್, ಪ್ರಮುಖರಾದ ಎನ್.ಟಿ.ಪೂಜಾರಿ, ಪ್ರಮಲ್ ಕುಮಾರ್, ರಾಜೇಂದ್ರ ಚಿಲಿಂಬಿ, ಸಂಜೀವ ಪೂಜಾರಿ ಕೂಚಿಗುಡ್ಡೆ, ಚಂದ್ರಹಾಸ ಅಮೀನ್, ಗಂಗಾಧರ ಅಮೀನ್ ಮುಂಬೈ, ಸುಜಿತಾ ಬಂಗೇರ, ನವೀನ್ ಸುವರ್ಣ ಸಜಿಪ, ನವೀನ್ ಅಮೀನ್ ಶಂಕರಪುರ, ಹರಿಶ್ಚಂದ್ರ ಅಮೀನ್, ಹರೀಶ್ ಕೆ.ಪೂಜಾರಿ, ನಿತ್ಯಾನಂದ ನಾವರ, ವಿದ್ಯಾ ರಾಕೇಶ್, ಉಷಾ ಅಂಚನ್ ನೆಲ್ಯಾಡಿ, ಅಜಿತ್ ಪಾಲೇರಿ, ನಾರಾಯಣ ಮಚ್ಚಿನ, ಡಾ.ಗೀತಾ ಪ್ರಕಾಶ್, ಅಶೋಕ್ ಪೂಜಾರಿ ಪಡ್ಪು, ಕರುಣಾಕರ ಸುವರ್ಣ ಉಪ್ಪಿನಂಗಡಿ, ಮಾಧವ ಪೂಜಾರಿ ವಿಟ್ಲ, ವರದರಾಜ್ ಎಂ, ಸುಧಾಕರ ಪೂಜಾರಿ ಕೇಪು, ಶಶಿಧರ ಕಿನ್ನಿಮಜಲು, ಆನಂದ ಪೂಜಾರಿ ಸರ್ವೆದೋಳ, ವಿಶ್ವಜಿತ್ ಅಮ್ಮುಂಜ, ಅಶೋಕ್ಕುಮಾರ್ ಪಡ್ಪು, ಎಲ್ಯಣ್ಣ ಪೂಜಾರಿ ಮೈರುಂಡ, ಪದ್ಮನಾಭ ಪೂಜಾರಿ ಅಳಿಕೆ, ಮೋಹನ್ ಗುರ್ಜಿನಡ್ಕ, ವಿನೋದ್ ಕುಂಡಡ್ಕ ಮತ್ತಿತರರು ಉಪಸ್ಥಿತರಿದ್ದರು. ಶಾಸಕ ಅಶೋಕ್ಕುಮಾರ್ ರೈ ಕ್ಷೇತ್ರಕ್ಕೆ ಭೇಟಿಯಿತ್ತು ಪ್ರಸಾದ ಸ್ವೀಕರಿಸಿದರು.
ಬ್ರಹ್ಮಕಲಶದ ನಂತರ ಮೊದಲು
ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಕ್ಷೇತ್ರದ ಸತ್ಯಧರ್ಮ ಚಾವಡಿಯಲ್ಲಿ ದಕ್ಷಿಣ ಭಾರತದಲ್ಲೇ ಪ್ರಥಮ ಬಾರಿಗೆ ನಡೆದ ಈ ಕಾರ್ಯಕ್ರಮದಲ್ಲಿ ನಾಡಿನ ವಿವಿಧ ಕಡೆಗಳಿಂದ ಬಂದಿದ್ದ ಸಹಸ್ರಾರು ಮಂದಿ ಮಹಿಳೆಯರು ಪಾಲ್ಗೊಂಡು ಅಮ್ಮನ ಮಡಿಲ ಪ್ರಸಾದ ಸ್ವೀಕರಿಸಿದರು. 25 ಸಾವಿರಕ್ಕೂ ಅಧಿಕ ಮಂದಿ ಭಕ್ತರು ಪಾಲ್ಗೊಂಡಿದ್ದು, ಗೆಜ್ಜೆಗಿರಿಯಲ್ಲಿ ನಡೆದ ಬ್ರಹ್ಮಕಲಶೋತ್ಸವದ ಬಳಿಕ ಇಷ್ಟು ಜನರು ಸೇರಿದ್ದು ಇದೇ ಮೊದಲು.