ಎಲ್‌ಐಸಿ ಸಂಸ್ಥೆಗೆ ಡಿಜಿಟಲ್‌ ಟಚ್‌: ಇನ್ಮುಂದೆ ಮೊಬೈಲ್‌ನಲ್ಲೇ ಪಡೆಯಬಹುದು ವಿಮೆ! LIC

LIC
Published on

LIC : ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಂಸ್ಥೆ ತನ್ನ ಸೇವೆಯನ್ನು ಮತ್ತಷ್ಟು ವಿಸ್ತಾರಗೊಳಿಸಲು ಹಾಗೂ ಡಿಜಿಟಲೀಕರಣಗೊಳಿಸುವ ಸಲುವಾಗಿ ‘ಒನ್‌ ಮ್ಯಾನ್‌ ಆಫೀಸ್‌’ ಎಂಬ ಅಪ್ಲಿಕೇಶನ್‌ ಸೇವೆಯನ್ನು ಆರಂಭಿಸಿದೆ.

ಫೆ. 17ರಂದು ಈ ಸೇವೆ ಲೋಕಾರ್ಪಣೆಗೊಂಡಿದ್ದು, ಇದು ಎಲ್‌ಐಸಿ ಏಜೆಂಟ್‌, ಡೆವೆಲಪ್‌ಮೆಂಟ್‌ ಆಫೀಸರ್‌, ಹಿರಿಯ ಬ್ಯುಸಿನೆಸ್‌ ಅಸೋಸಿಯೇಟ್‌ ಸೇರಿ ಹಲವು ವಿಭಾಗದ ಸೇವೆ ಪ್ರದಾನಕರ ಕಾರ್ಯವನ್ನು ಮತ್ತಷ್ಟು ಪರಿಣಾಮಕಾರಿಗೊಳಿಸಲು ನೆರವಾಗಲಿದೆ ಎಂದು ಎಲ್‌ಐಸಿ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

2047ರ ಒಳಗೆ ಎಲ್ಲರಿಗೂ ವಿಮೆ (ಇನ್ಶುರೆನ್ಸ್‌ ಫಾರ್‌ ಆಲ್‌) ಎಂಬ ಎಲ್‌ಐಸಿಯ ದೀರ್ಘಕಾಲದ ಗುರಿಯನ್ನು ಸಾಕಾರಗೊಳಿಸುವಲ್ಲಿ ಈ ಸೇವೆ ಮಹತ್ವದ ಹೆಜ್ಜೆಯಾಗಿದೆ. ಒಎಮ್‌ಒ ಸೇವೆ (ಒನ್‌ ಮ್ಯಾನ್‌ ಆಫೀಸ್‌) ಡಿಜಿಟಲ್‌ ಪಾಲಿಸಿ ಮಾರಾಟ, ವಹಿವಾಟುಗಳ ಬೆಳವಣಿಗೆಯನ್ನು ಅರಿಯಲು, ಗ್ರಾಹಕ ಸೇವೆ ಮತ್ತು ಎಲ್‌ಐಸಿ ಏಜೆಂಟ್‌ಗಳಿಗೆ ತರಬೇತಿಯನ್ನು ನೀಡಲು ಬಹಳ ಸಹಕಾರಿಯಾಗಲಿದೆ ಎಂದು ಎಲ್‌ಐಸಿ ಸಿಇಒ ಮತ್ತು ಮ್ಯಾನೆಜಿಂಗ್‌ ಡೈರೆಕ್ಟರ್‌ ಸಿದ್ಧಾರ್ಥ ಮೊಹಾಂಟಿ ಯೋಜನೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ.

ಒಎಮ್‌ಒ ( ಒನ್‌ ಮ್ಯಾನ್‌ ಆಫೀಸ್‌) ಸೇವೆಯನ್ನು ಎಲ್‌ಐಸಿ ಮೊಬೈಲ್‌ ಡಿಜಿಟಲ್‌ ಆಫೀಸ್‌ ಎಂದು ವಿಶ್ಲೇಶಿಸಿದ್ದು, ಮೊಬೈಲ್‌ ಫೋನ್‌ ಮೂಲಕ ಎಲ್‌ಐಸಿಯ ಎಲ್ಲ ಸೇವೆಯನ್ನು ಪಡೆಯಲು ಏಕ ವೇದಿಕೆಯಾಗಿ ಕಾರ್ಯನಿರ್ವಹಿಸಲಿದೆ. ಈ ಸೇವೆ ಎಲ್‌ಐಸಿಯ ಆನಂದ (ಆತ್ಮ ನಿರ್ಭರ ಏಜೆಂಟ್ಸ್‌ ನ್ಯೂ ಬುಸಿನೆಸ್‌ ಡಿಜಿಟಲ್‌ ಆಪ್ಲಿಕೇಶನ್‌) ಆಧರಿಸಿ ರಚಿಸಲಾಗಿದ್ದು ಇದು ಏಜೆಂಟ್‌ಗಳಿಗೆ ಹೊಸ ಗ್ರಾಹಕರನ್ನು ಪಡೆಯಲು ನೆರವಾಗಲಿದೆ.

ಇದರ ಜತೆಗೆ ಯೋಜನೆಗಳ ಪ್ರೀಮಿಯಂ ಲೆಕ್ಕಚಾರ, ಸೇವೆಯ ಲಾಭಗಳ ಮಾಹಿತಿ, ಇ-ಎನ್‌ಎಸಿಹೆಚ್‌ ನೋಂದಣಿ, ವಿಳಾಸ ಬದಲಾಯಿಸುವ ಸೌಲಭ್ಯ, ಆನ್‌ಲೈನ್‌ ಸಾಲ ಅರ್ಜಿ, ಪ್ರೀಮಿಯಂ ಪಾವತಿ ರಿನಿವಲ್‌ ಹಾಗೂ ಕಾಗದಪತ್ರಗಳನ್ನು ಸಲ್ಲಿಸುವ ಅವಕಾಶ ಸೇರಿ ಹಲವು ಸೌಲಭ್ಯವನ್ನು ಇಲ್ಲಿ ಪಡೆಯಬಹುದಾಗಿದೆ. ಜತೆಗೆ ಈ ಅಪ್ಲಿಕೇಶನ್‌ನಲ್ಲಿ ಮತ್ತಷ್ಟು ಹೊಸ ಸೌಲಭ್ಯಗಳನ್ನು ಪರಿಚಯಿಸುವ ಯೋಜನೆಯನ್ನು ಹೊಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net