ವ್ಯಕ್ತಿಯ ಕಣ್ಣಿನಲ್ಲಿ ಪತ್ತೆಯಾಯ್ತು ಜೀವಂತ ಹುಳು: ಈ ಒಂದು ಆಹಾರ ತಿನ್ನುವಾಗ ಎಚ್ಚರ ಅಂದ್ರು ವೈದ್ಯರು! Doctors advise

Doctors advise
Published on

Doctors advise : ಮೂವತ್ತೈದು ವರ್ಷದ ವ್ಯಕ್ತಿಯ ಕಣ್ಣಿನಲ್ಲಿ ಜೀವಂತ ಹುಳು ಪತ್ತೆಯಾಗಿರುವ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಆ ವ್ಯಕ್ತಿಗೆ ಕೆಲವು ದಿನಗಳಿಂದ ತೀವ್ರ ಕಣ್ಣಿನ ಸಮಸ್ಯೆ ಇತ್ತು. ಕೆಣ್ಣು ಕೆಂಪಗೆ ಮತ್ತು ನೋವಿನಿಂದ ಕೂಡಿತ್ತು. ಈ ಹಿನ್ನೆಲೆಯಲ್ಲಿ ಆತ ವೈದ್ಯರನ್ನು ಭೇಟಿ ಮಾಡಿದಾಗ ಆತಂಕಕಾರಿ ಮಾಹಿತಿ ಹೊರಬಿದ್ದಿದೆ.

ಆರಂಭದಲ್ಲಿ ವೈದ್ಯರು ನೀಡಿದ ಔಷಧಿಗಳನ್ನು ತೆಗೆದುಕೊಂಡರು ಕೂಡ ಕಣ್ಣಿನ ಸಮಸ್ಯೆ ಮಾತ್ರ ಸುಧಾರಣೆ ಆಗಲಿಲ್ಲ. ಅಲ್ಲದೆ, ಅವರ ದೃಷ್ಟಿ ಕ್ಷೀಣಿಸಲು ಪ್ರಾರಂಭವಾಯ್ತು. ಇನ್ನು ತಡಮಾಡಿದರೇ ಸರಿಯಲ್ಲ ಅಂತ ಏಮ್ಸ್​ಗೆ ಹೋದರು. ಅಲ್ಲಿ ವಿವರವಾದ ಪರೀಕ್ಷೆ ನಡೆಸಿದಾಗ, ಕಣ್ಣಿನೊಳಗೆ ಗಾಜಿನ ಜೆಲ್​ ರೂಪದಲ್ಲಿ ಒಂದು ಇಂಚು ಉದ್ದದ ಜೀವಂತ ಹುಳು ಕಂಡುಬಂದಿದೆ.

ಇದು ಅಪರೂಪದಲ್ಲೇ ಅಪರೂಪದ ಘಟನೆ ಎಂದು ಏಮ್ಸ್​ ವೈದ್ಯರು ಹೇಳಿದ್ದಾರೆ. ಹುಳು ತೆಗೆಯುವುದೇನೂ ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಬಹಳ ಕಷ್ಟಕರವಾದ ಆಪರೇಷನ್​ ಬಳಿಕ ಜೀವಂತ ಹುಳುವನ್ನು ತೆಗೆದುಹಾಕಲಾಯಿತು. ಈ ಪರಾವಲಂಬಿ ಹುಳು ಯುವಕನ ಕಣ್ಣನ್ನು ಹೇಗೆ ಪ್ರವೇಶಿಸಿತು ಎಂಬುದು ಅಚ್ಚರಿಯ ಸಂಗತಿಯಾಗಿದೆ. ಇದಕ್ಕೆ ವೈದ್ಯರು ಕೂಡ ಉತ್ತರವನ್ನು ನೀಡಿದ್ದಾರೆ.

ಸರಿಯಾಗಿ ಬೇಯಿಸದ ಅಂದರೆ ಅರ್ಧಂಬರ್ಧ ಬೇಯಿಸಿದ ಮಾಂಸವನ್ನು ತಿಂದಾಗ ಇಂತಹ ಹುಳುಗಳು ದೇಹವನ್ನು ಸೇರುತ್ತವೆ. ಅಲ್ಲದೆ, ಇತರ ವಸ್ತುಗಳ ಮೂಲಕವೂ ಕೆಲವೊಮ್ಮೆ ದೇಹವನ್ನು ಪ್ರವೇಶಿಸುತ್ತದೆ. ಈ ಹುಳುಗಳು ಒಮ್ಮೆ ದೇಹವನ್ನು ಪ್ರವೇಶಿಸಿದ ನಂತರ, ಅದು ಚರ್ಮ, ಕಣ್ಣುಗಳು ಮತ್ತು ಮೆದುಳು ಸೇರಿದಂತೆ ದೇಹದ ವಿವಿಧ ಭಾಗಗಳಿಗೆ ಚಲಿಸುತ್ತದೆ.

ಈ ಹುಳಗಳು ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಸರಿಯಾಗಿ ಬೇಯಿಸದೇ ಮಾಂಸವನ್ನು ತಿನ್ನದಂತೆ ವೈದ್ಯರು ಸಲಹೆ ನೀಡಿದ್ದಾರೆ. ಯಾವುದೇ ಆಹಾರವನ್ನಾಗಲಿ ಅದನ್ನು ಚೆನ್ನಾಗಿ ತೊಳೆದು, ಸರಿಯಾಗಿ ಬೇಯಿಸಿ ತಿನ್ನಬೇಕು. ಇಲ್ಲವಾದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net