'ಕೆಜಿಎಫ್'​, 'ಕಾಂತಾರ'ದಂತೆ 'ವಿಜಯಾನಂದ' ಕೂಡ ಪ್ಯಾನ್​ ಇಂಡಿಯಾ ಸದ್ದು ಮಾಡಲಿ: ಹರ್ಷಿಕಾ ಪೂಣಚ್ಚ

Vijayanand
Published on

ಬೆಂಗಳೂರು: ವಿಆರ್​​ಎಲ್​ ಸಮೂಹ ಸಂಸ್ಥೆಗಳ ಚೇರ್​​ಮನ್​ ಡಾ.ವಿಜಯ ಸಂಕೇಶ್ವರ ಅವರ ಜೀವನಾಧಾರಿತ 'ವಿಜಯಾನಂದ' ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಇಂದು ಬೆಂಗಳೂರಿನ ಒರಾಯನ್ ಮಾಲ್​ನ ಲೇಕ್​ವ್ಯೂನಲ್ಲಿ ಅದ್ಧೂರಿಯಾಗಿ ನಡೆಯಿತು.

ಈ ಕಾರ್ಯಕ್ರಮಕ್ಕೆ ನಟ ಶರಣ್​, ನಟಿ ಹರ್ಷಿಕಾ ಪೂಣಚ್ಚ ಅತಿಥಿಯಾಗಿ ಆಗಮಿಸಿದ್ದು, ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿನ ವರ್ಣರಂಜಿತ ವೇದಿಕೆಯಲ್ಲಿ ಈ ಅದ್ಧೂರಿ ಸಮಾರಂಭ ನಡೆಯಿತು. ಸಂಗಿತ ಬಿಡುಗಡೆ ಬಳಿ ನಟಿ ಹರ್ಷಿಕಾ ಪೂಣಚ್ಚ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.

ವಿಜಯವಾಣಿ-ದಿಗ್ವಿಜಯ ಎಂದರೆ ನನಗೆ ಮನೆ ಥರ ಎಂದ ಹರ್ಷಿಕಾ, ವಿಜಯಾನಂದ ಚಿತ್ರದ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಒಂದು ಚಿತ್ರವನ್ನು ಹಿಟ್ ಮಾಡಲು ಏನೇನೋ ಕಲ್ಪನೆಗಳನ್ನು ತುರುಕುವ ಪ್ರಯತ್ನ ಮಾಡಲಾಗುತ್ತದೆ. ಆದರೆ ವಿಜಯಾನಂದದಲ್ಲಿ ಆ ರೀತಿಯ ಕಲ್ಪನೆಗಳಿಲ್ಲ ಎಂದ ಹರ್ಷಿಕಾ, ಇದು ಕನ್ನಡದ ಮೊದಲ ಬಯೋಪಿಕ್. ಕನ್ನಡದಲ್ಲಿ ಮೊದಲನೆ ಬಯೋಪಿಕ್ ಬರುತ್ತಿರುವುದು ಖುಷಿಯ ವಿಚಾರ. 'ಕೆಜಿಎಫ್', 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಸೌಂಡ್ ಮಾಡಿವೆ. 'ವಿಜಯಾನಂದ' ಕೂಡ ಹಾಗೇ ಸದ್ದು ಮಾಡಬೇಕು ಎಂದು ಹಾರೈಸಿದರು. ಈಗ ದಕ್ಷಿಣ ಭಾರತೀಯ ಚಿತ್ರರಂಗ ಎಂದರೆ ಕನ್ನಡ ಚಿತ್ರರಂಗ ಎಂಬಂತಾಗಿದೆ, ಅಷ್ಟರಮಟ್ಟಿಗೆ ಕನ್ನಡ ಚಿತ್ರರಂಗ ಬೆಳೆದಿದೆ ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.

ವಿಆರ್​ಎಲ್​ ಪ್ರೊಡಕ್ಷನ್ಸ್​ ಮೂಲಕ ಡಾ.ಆನಂದ ಸಂಕೇಶ್ವರ ನಿರ್ಮಿಸುತ್ತಿರುವ “ವಿಜಯಾನಂದ’ ಚಿತ್ರದಲ್ಲಿ ನಿಹಾಲ್ ರಜಪೂತ್​​, ಅನಂತ್​ ನಾಗ್​, ರವಿಚಂದ್ರನ್​, ವಿನಯಾ ಪ್ರಸಾದ್​, ಸಿರಿ ಪ್ರಹ್ಲಾದ್​ ಮುಂತಾದವರು ನಟಿಸಿದ್ದಾರೆ. ರಿಷಿಕಾ ಶರ್ಮ ಚಿತ್ರಕಥೆ ರಚಿಸುವುದರ ಜತೆಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾಗೆ ಖ್ಯಾತ ಸಂಗೀತ ನಿರ್ದೇಶಕ ಗೋಪಿಸುಂದರ್ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net