VIDEO| ಲೈವ್ ಶೋನಲ್ಲಿ ಹೊಡೆದಾಡಿಕೊಂಡ ಅತಿಥಿಗಳು; ಇದು ನಾಚಿಕಗೇಡಿನ ವಿಷಯವೆಂದ ನೆಟ್ಟಿಗರು

fight
Published on

ನವದೆಹಲಿ: ಸುದ್ದಿ ವಾಹಿನಿಗಳಲ್ಲಿ ಅತಿಥಿಗಳನ್ನು ಆಹ್ವಾನಿಸುವುದು ಚರ್ಚೆಗಳನ್ನು ಆಯೋಜಿಸುವುದು ಸರ್ವೇ ಸಾಮಾನ್ಯ ಸಂಗತಿ. ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಅತಿಥಿಗಳ ನಡುವೆ ಚರ್ಚೆಗಳು, ವಾದ ವಿವಾದ ಜೋರಾಗಿರುತ್ತದೆ ಹಾಗೂ ಪ್ರತಿಯೊಬ್ಬರೂ ತಮ್ಮ ತಮ್ಮ ಆಲೋಚನೆಗಳಿಗೆ ಬದ್ದರಾಗಿ ಮಾತನಾಡುತ್ತಿರುತ್ತಾರೆ.

ಕೆಲವೊಮ್ಮೆ ಚರ್ಚೆ ನಡೆಯುವ ವೇಳೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸಂಭವಗಳು ಜಾಸ್ತಿ ಇರುತ್ತವೆ. ಅದೇ ರಿತಿ ಸುದ್ದಿ ವಾಹಿನಿಯೊಂದರ ಚರ್ಚೆಯಲ್ಲಿ ಈ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ ಮತ್ತು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಪಾಕಿಸ್ತಾನದ ಪ್ರತಿಷ್ಠಿತ ಸುದ್ದಿ ವಾಹಿನಿಯೊಂದರ ನಿರೂಪಕ ಜಾವೇದ್​ ಚೌಧರಿ ನಡೆಸಿಕೊಡುವ ಪ್ರಸಾರವಾಗುವ ಕಲ್​ ತಕ್​ ಎಂಬ ಶೋನಲ್ಲಿ ಈ ಘಟನೆ ನಡೆದಿದ್ದು, ಪಾಕಿಸ್ತಾನ್ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್ - ನವಾಜ್ (ಪಿಎಂಎಲ್-ಎನ್) ಪಕ್ಷದ ನಾಯಕರು ಲೈವ್​ನಲ್ಲೇ ಬಡಿದಾಡಿಕೊಂಡಿದ್ದಾರೆ. ಪಿಟಿಐ ಪಕ್ಷದ ಶೇರ್ ಅಫ್ಜಲ್ ಮರ್​ವಾತ್ ಮತ್ತು ಪಿಎಂಎಲ್-ಎನ್ ಅಫ್ನಾನ್ ಉಲ್ಲಾ ಹೊಡೆದಾಡಿಕೊಂಡಿದ್ದು ಇದರ ವಿಡಿಯೋ ವೈರಲ್ ಆಗಿದೆ.

ಚರ್ಚೆ ವೇಳೆ ಪಿಎಂಎಲ್-ಎನ್ ಪಕ್ಷದ ನಾಯಕ ಅಫ್ನಾನ್​ ಉಲ್ಲಾ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್​ ಖಾನ್​ ಕುರಿತು ಆರೋಪ ಮಾಡಿದ್ದು, ಇದಕ್ಕೆ ಪಿಟಿಐ ಪಕ್ಷದ ನಾಯಕ ಅಫ್ಜಲ್ ಮರ್​ವಾತ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಕೂಡಲೇ ಅಲ್ಲಿದ್ದವರು ಇವರಿಬ್ಬರ ನಡುವಿನ ಜಗಳವನ್ನು ಬಿಡಿಸಲು ಪ್ರಯತ್ನಿಸಿದರಾದರು ಯಾವುದೇ ಪ್ರಯೋಜನವಾಗಿಲ್ಲ.

ಇದೇ ಮೊದಲೇನಲ್ಲ

ಪಾಕ್‌ನ ರಾಜಕೀಯ ಇತಿಹಾಸದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಕೂಡ ಲೈವ್ ಶೋಗಳಲ್ಲಿ ಹೊಡೆದಾಟ ನಡೆಸಿದ ಅನೇಕ ಘಟನೆಗಳು ವರದಿಯಾಗಿವೆ. 2019 ರಲ್ಲಿ, ನದೀಮ್ ಮಲಿಕ್ ಆಯೋಜಿಸಿದ್ದ ಟಾಕ್ ಶೋನಲ್ಲಿ ಪಿಟಿಐ ನಾಯಕ ಮಸ್ರೂರ್ ಅಲಿ ಸಿಯಾಲ್ ಮತ್ತು ಹಿರಿಯ ಪತ್ರಕರ್ತ ಇಫ್ತಿಕರ್ ಅಹ್ಮದ್ ಕೂಡ ಇದೇ ರೀತಿ ಹೊಡೆದಾಡಿಕೊಂಡಿದ್ದರು.

ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮದಲ್ಲಿ ನಾಗರಿಕ ಚರ್ಚೆಯಾಗಿ ಪ್ರಸ್ತುತವಾಗಬೇಕಿದ್ದ ಕಾರ್ಯಕ್ರಮ ಇಬ್ಬರು ಪ್ರತಿಸ್ಪರ್ಧಿಗಳ ನಡುವಿನ ದೈಹಿಕ ವಾಗ್ವಾದಕ್ಕೆ ಕಾರಣವಾಗಿದ್ದು ಮಾತ್ರ ನಾಚಿಕಗೇಡಿನ ವಿಷಯವಾಗಿದೆ. ಆರೋಗ್ಯಕರ ಮತ್ತು ಪ್ರಗತಿಪರ ಸಮಾಜಕ್ಕೆ ಅಗತ್ಯವಾದ ಪ್ರಜಾಸತ್ತಾತ್ಮಕ ಮೌಲ್ಯಗಳು ಮತ್ತು ರೂಢಿಗಳನ್ನು ಇಂತಹ ವ್ಯಕ್ತಿಗಳು ದುರ್ಬಲಗೊಳಿಸುತ್ತಾರೆ ಎಂದು ವೈರಲ್​ ವಿಡಿಯೋ ಕುರಿತು ನೆಟ್ಟಿಗರು ಕಿಡಿಕಾರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net