

ನವ ದೆಹಲಿ: ನಮೀಬಿಯಾದಿಂದ ಕರೆತಂದ ಚೀತಾಗಳನ್ನು ನರೇಂದ್ರ ಮೋದಿಯವರು ತಮ್ಮ ಜನ್ಮದಿನದಂದು (ಸೆ.17) ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಬಿಟ್ಟಿದ್ದರು. ದೇಶದಲ್ಲಿ ಚೀತಾಗಳ ಅಳಿವಿನ ಏಳು ದಶಕಗಳ ನಂತರ ಅವುಗಳನ್ನು ಮರು ಪರಿಚಯಿಸುವ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ ಚೀತಾಗಳನ್ನು ತರಿಸಿಕೊಳ್ಳಲಾಗಿದೆ ಎಂದಿದ್ದ ಪ್ರಧಾನಿ, ಇದಕ್ಕೆ ನೆರವಾದ ನಮೀಬಿಯಾ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, 1952ರಲ್ಲಿ ದೇಶದಲ್ಲಿ ಚೀತಾಗಳು ನಾಶಾಗಿವೆ ಎಂದು ಘೋಷಿಸಲಾಗಿದ್ದರೂ, ಅವುಗಳನ್ನು ಮರು ಪರಿಚಯಿಸಲು ಯಾವುದೇ ಪ್ರಯತ್ನ ನಡೆದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದ್ದರು.
ಇದೀಗ ಪ್ರಧಾನಿಯವರ ಮಾತಿಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ. ಚೀತಾಗಳನ್ನು ಭಾರತಕ್ಕೆ ಕರೆಸಿಕೊಳ್ಳಲು ಮಾಡಿರುವ ಕೆಲವು ಯೋಜನೆಗಳ ಕುರಿತು ಕಾಂಗ್ರೆಸ್ ಹೇಳಿಕೊಂಡಿದೆ. 2008-09ರಲ್ಲಿ ಯುಪಿಎ ಸರ್ಕಾರವಿದ್ದಾಗ 'ಪ್ರಾಜೆಕ್ಟ್ ಚೀತಾ' ಪ್ರಸ್ತಾವನೆಯನ್ನು ಸಿದ್ಧಪಡಿಸಿತ್ತು. ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅನುಮೋದನೆ ನೀಡಿದ್ದರು. ನಂತರ 2010ರಲ್ಲಿ ಅಂದಿನ ಅರಣ್ಯ ಮತ್ತು ಪರಿಸರ ಸಚಿವ ಜೈರಾಮ್ ರಮೇಶ್ ದಕ್ಷಿಣ ಆಫ್ರಿಕಾದ ಚೀತಾ ಔಟ್ರೀಚ್ ಸೆಂಟರ್ಗೆ ತೆರಳಿದ್ದರು.
ಆದರೆ 2013ರಲ್ಲಿ ಸುಪ್ರೀಂ ಕೋರ್ಟ್ ಈ ಯೋಜನೆಗೆ ತಡೆ ನೀಡಿತ್ತು. ನಂತರ 2020ರಲ್ಲಿ ಈ ಯೋಜನೆಗೆ ಅವಕಾಶ ಮಾಡಿಕೊಟ್ಟಿತ್ತು. ಹೀಗಾಗಿ ಭಾರತಕ್ಕೆ ನಮೀಬಿಯಾದಿಂದ ಚಿರತೆಗಳನ್ನು ಕರೆತರಲು ಸಾಧ್ಯವಾಯಿತು ಎಂದು ಕಾಂಗ್ರೆಸ್ ಹೇಳಿದೆ.
ಇದೀಗ ಕಾಂಗ್ರೆಸ್ನ ಹಿರಿಯ ನಾಯಕ ಜೈರಾಮ್ ರಮೇಶ್ ಟ್ವೀಟ್ ಮಾಡಿ ಪ್ರಧಾನಿ ಒಬ್ಬ ಸುಳ್ಳುಗಾರ ಎಂದು ಟೀಕಿಸಿದ್ದಾರೆ. 2009ರಲ್ಲಿ ಚೀತಾಗಳನ್ನು ಭಾರತಕ್ಕೆ ಮತ್ತೆ ಪರಿಚಯಿಸಲು ಪ್ರಯತ್ನ ಪಟ್ಟ ಬಗ್ಗೆ ಬರೆದ ಕಾಗದ ಪತ್ರವನ್ನು ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ. ನಾನು ನಿನ್ನೆ ಭಾರತ್ ಜೊಡೋ ಯಾತ್ರೆಯಲ್ಲಿದ್ದೆ. ಹೀಗಾಗಿ ಈ ಪತ್ರದತ್ತ ಕೈಯ್ಯಾಡಿಸಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ. (ಏಜೆನ್ಸೀಸ್)