

ನವ ದೆಹಲಿ: ನಮೀಬಿಯಾದಿಂದ ಭಾರತಕ್ಕೆ ಬರಲಿರುವ ಚೀತಾಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಟ್ಟು 8 ಚೀತಾಗಳು ಭಾರತಕ್ಕೆ ಬರಲಿದೆ. ಹರಿದಾಡುತ್ತಿರುವ ವಿಡಿಯೋದಲ್ಲಿ 2 ಚೀತಾಗಳು ಮರದಡಿಯಲ್ಲಿ ವಿಶ್ರಾಂತಿ ಪಡೆಯುತ್ತಿರುವುದು ಕಾಣುತ್ತಿದೆ.
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ನಬೀಬಿಯಾದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ತಮ್ಮ (ಸೆ.17) ಜನ್ಮದಿನದಂದು ಚೀತಾಗಳನ್ನು ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಲಿದ್ದಾರೆ.
ಹಿನ್ನೆಲೆ: ಭಾರತದಲ್ಲಿ ಚೀತಾಗಳ ಸಂಖ್ಯೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ನಮೀಬಿಯಾ ದೇಶದಿಂದ ಚೀತಾಗಳನ್ನು ಕರೆತರಲಾಗುತ್ತಿದೆ. ಇದಕ್ಕಾಗಿ ನಮೀಬಿಯಾ ದೇಶದಿಂದ ಚೀತಾಗಳನ್ನು ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಲಾಗಿತ್ತು. ಈ ಪ್ರಯತ್ನದ ಫಲವಾಗಿ ಇದೀಗ ಭಾರತಕ್ಕೆ ಮೊದಲ ಹಂತದಲ್ಲಿ 8 ಚೀತಾಗಳು ಬರುತ್ತಿವೆ.
5 ಗಂಡು ಹಾಗೂ 3 ಹೆಣ್ಣು ಚೀತಾಗಳು ನಮೀಬಿಯಾದಿಂದ ಭಾರತಕ್ಕೆ ಬರುತ್ತಿದೆ. ಸೆ.17 ರಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮ ದಿನದ ಸಂದರ್ಭದಲ್ಲಿ ಈ ಚೀತಾಗಳನ್ನು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಅರ್ಪಿಸಲಿದ್ದಾರೆ.
ಚಿರತೆ ಕರೆತರಲು ವಿಶೇಷ ವಿಮಾನ
ನಮೀಬಿಯಾದಿಂದ ಚೀತಾಗಳನ್ನು ಕರೆತರಲು ವಿಶೇಷ ವಿಮಾನವನ್ನು ಸಜ್ಜುಗೊಳಿಸಲಾಗಿತ್ತು. ಇದಕ್ಕಾಗಿ ವಿಮಾನದ ಮುಂಭಾಗದಲ್ಲಿ ಭಾರತದ ರಾಷ್ಟ್ರೀಯ ಪ್ರಾಣಿ ಹುಲಿಯ ಚಿತ್ರವಿರುವ ವಿಮಾನ ನಮೀಬಿಯಾ ದೇಶಕ್ಕೆ ತೆರಳಿತ್ತು. ಈ ವಿಶೇಷ ವಿಮಾನದ ಚಿತ್ರವನ್ನು ನಮೀಬಿಯಾದಲ್ಲಿರುವ ಭಾರತದ ಹೈ ಕಮಿಷನ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿತ್ತು. (ಏಜೆನ್ಸೀಸ್)