More

  ಅಂಡರ್‌ಪಾಸ್ ಬಳಿ ಮಣ್ಣು ಕುಸಿತ

  ವಿಜಯವಾಣಿ ಸುದ್ದಿಜಾಲ ಉಡುಪಿ

  ರಾಷ್ಟ್ರೀಯ ಹೆದ್ದಾರಿ 66ರ ಸಂತೆಕಟ್ಟೆಯಲ್ಲಿ ಅಂಡರ್‌ಪಾಸ್ ನಿರ್ಮಾಣಕ್ಕೆ 15 ಅಡಿಗೂ ಹೆಚ್ಚು ಆಳಕ್ಕೆ ಹೊಂಡ ತೋಡಲಾಗಿದ್ದು, ಮಳೆಗಾಲ ಪ್ರಾರಂಭಕ್ಕೂ ಮುನ್ನ ತಡೆಗೋಡೆ ನಿರ್ಮಿಸದೆ ಇರುವುದರಿಂದ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪೂರ್ವ ಭಾಗದ ಸರ್ವಿಸ್ ರಸ್ತೆ ಕುಸಿದು ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ.

  ಸಂತೆಕಟ್ಟೆ ಪ್ರದೇಶದಲ್ಲಿ ಆರಂಭಗೊಂಡಿರುವ ಅಂಡರ್‌ಪಾಸ್ ಕಾಮಗಾರಿ ಪ್ರದೇಶದಲ್ಲಿ ಮಣ್ಣು ಕುಸಿದು ನಿರ್ಮಾಣ ಹಂತದ ತಡೆಗೋಡೆಗಳಿಗೂ ಹಾನಿಯಾಗಿದೆ. ಇಷ್ಟು ಮಾತ್ರವಲ್ಲದೆ ಮಣ್ಣು ಕುಸಿತ ಹೆಚ್ಚಾಗುತ್ತಿರುವುದರಿಂದ ಪಕ್ಕದಲ್ಲೇ ಇರುವ ಬೃಹತ್ ಕಟ್ಟಡಕ್ಕೆ ಅಪಾಯ ಎದುರಾಗಿದ್ದು, ನಿವಾಸಿಗಳಲ್ಲಿ ಆತಂಕ ಉಂಟಾಗಿದೆ.

  ನಿಜವಾದ ಸಂಸದೆಯ ಊಹೆ

  ಇತ್ತೀಚಿಗೆ ನಡೆದ ದಿಶಾ ಸಭೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಅಂಡರ್ ಪಾಸ್ ಕಾಮಗಾರಿ ನಿಧಾನ ಗತಿಯಲ್ಲಿ ಸಾಗುತ್ತಿರುವುದರಿಂದ ಹೊಂಡದಲ್ಲಿ ನೀರು ನಿಂತರೆ ಹೆದ್ದಾರಿಗೂ ಸಮಸ್ಯೆಯಾಗಬಹುದು. ಹೀಗಾಗಿ ಮಳೆಗಾಲ ಮುಗಿಯುವವರೆಗೆ ಕಲ್ಲು ಹಾಕಿ ಮುಚ್ಚುವಂತೆ ಸೂಚನೆ ನೀಡಿದ್ದರು. ಅದರಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ಅವರು ಹೆದ್ದಾರಿ ಪ್ರಾಧಿಕಾರದ ಸಭೆ ನಡೆಸಿ ಕೂಡಲೇ ಮುನ್ನೆಚ್ಚರಿಕೆ ಕಾಮಗಾರಿ ಆರಂಭಿಸಿ, ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದರು. ಬಳಿಕ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದು ಕಡೆಯಲ್ಲಿ ಸರ್ವಿಸ್ ರಸ್ತೆಗೆ ತಾಗಿಕೊಂಡು ಸುಮಾರು 380 ಮೀಟರ್ ಉದ್ದದ 6 ಮೀಟರ್ ಎತ್ತರದ ರಿಟೈನಿಂಗ್ ವಾಲ್ ನಿರ್ಮಾಣ ಕಾಮಗಾರಿಯನ್ನು ಪ್ರಾರಂಭಿಸಿದ್ದರು. ಇನ್ನೊಂದು ಕಡೆಯಲ್ಲಿ ಮಳೆಗೆ ಮಣ್ಣು ಕುಸಿಯದಂತೆ ಚೀಲಗಳಲ್ಲಿ ಮಣ್ಣನ್ನು ತುಂಬಿಸಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ಅದರ ಮೇಲೆ ಟಾರ್ಪಾಲು ಹೊದಿಕೆ ಹಾಕಲಾಗಿತ್ತು. ಆದರೆ ತಡೆಗೋಡೆ ನಿರ್ಮಾಣ ಪ್ರದೇಶದಲ್ಲಿ ಭೂಕುಸಿತ ಉಂಟಾಗಿದ್ದು, ಮಳೆಗಾಲದ ಬಗ್ಗೆ ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ರಸ್ತೆ ಆಗೆದ ಪರಿಣಾಮ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದಾಗಿ ಸ್ಥಳೀಯರು ಅರೋಪಿಸಿದ್ದಾರೆ.

  ಪರ್ಯಾಯ ರಸ್ತೆಯೂ ನಾದುರಸ್ತಿ

  ಕಾಮಗಾರಿ ನಡೆಯುತ್ತಿರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಸೂಕ್ತ ಡಾಂಬರೀಕರಣ ಮಾಡದ ಕಾರಣ ವಾಹನ ಸವಾರರು ಪರದಾಡುವ ಸ್ಥಿತಿ ಇದೆ. ಡಿವೈಡರ್ ಒಡೆದು ರಸ್ತೆ ಅಗಲೀಕರಣ ಮಾಡಿದ್ದರೂ ಸೂಕ್ತ ಡಾಂಬರೀಕರಣ ಮಾಡಿಲ್ಲ. ಇದೀಗ ಮಳೆಯಲ್ಲಿ ರಸ್ತೆ ಸಂಪೂರ್ಣ ಹಾಳಾಗಿದ್ದು ವಾಹನ ಸಂಚಾರಕ್ಕೆ ವ್ಯತ್ಯಯ ಉಂಟಾಗಿದೆ.

  ಹೆದ್ದಾರಿಯಲ್ಲಿ ಮುಖ್ಯ ರಸ್ತೆಗೆ ಯಾವುದೇ ತೊಂದರೆಯಾಗಿಲ್ಲ. ಹಳೆ ಸರ್ವಿಸ್ ರಸ್ತೆಯ ಪಾರ್ಶ್ವ ಕುಸಿತವಾಗಿದೆ. ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ತಂಡ ಸ್ಥಳ ಪರಿಶೀಲನೆ ನಡೆಸಿದೆ. ಜನರಿಗೆ ತೊಂದರೆಯಾಗದಂತೆ ತಡೆಗೋಡೆ ಶೀಘ್ರಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ.
  -ಕೂರ್ಮಾ ರಾವ್, ಜಿಲ್ಲಾಧಿಕಾರಿ ಉಡುಪಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts