More

    ಮನೆ ಬಾಗಿಲಿಗೇ ಜನನ-ಮರಣ ಪತ್ರ!

    ವಿಜಯವಾಣಿ ಸುದ್ದಿಜಾಲ ಉಡುಪಿ

    ದೈನಂದಿನ ಜೀವನದಲ್ಲಿ ಎಲ್ಲರಿಗೂ ಜನನ ಮತ್ತು ಮರಣ ದೃಢೀಕರಿಸುವ ದಾಖಲೆ ಅತ್ಯಂತ ಅಗತ್ಯ. ಕೆಲವೊಮ್ಮೆ ಈ ದಾಖಲೆ ಪಡೆಯಲು ತೊಡಕಾಗುತ್ತದೆ. ಸಮಸ್ಯೆ ಮನಗಂಡ ಉಡುಪಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ., ಈ ದಾಖಲೆಯನ್ನು ಸಂಬಂಧಿತರ ಮನೆಗೇ ಕಳುಹಿಸಲು ನಾಗರಿಕ ಸ್ನೇಹಿ ಯೋಜನೆ ಆರಂಭಿಸಿದ್ದಾರೆ.

    ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಉಡುಪಿ ನಗರದ ಸ್ಥಳೀಯ ಜನನ-ಮರಣ ನೋಂದಣಿ ಪ್ರಾಧಿಕಾರವು ಉಡುಪಿ ನಗರಸಭೆ ಮತ್ತು ಅಂಚೆ ಇಲಾಖೆ ವತಿಯಿಂದ ವಿಶೇಷ ಸೇವೆ ಒದಗಿಸಲು ಪರಸ್ಪರ ಒಪ್ಪಂದ (ಎಂಒಯು) ಮಾಡಿಕೊಂಡಿದೆ. ನಗರಸಭೆಯಿಂದ ದಾಖಲೆ ಸಂಗ್ರಹಿಸಲು ಅಂಚೆ ಇಲಾಖೆಯಿಂದ ಪ್ರತ್ಯೇಕ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.

    ಕಚೇರಿಗೆ ಅಲೆದಾಟ

    ಹೊರ ಜಿಲ್ಲೆ ಮತ್ತು ರಾಜ್ಯದಿಂದ ಆಗಮಿಸಿದ ವ್ಯಕ್ತಿ ಮರಣಹೊಂದಿದರೆ ನಂತರ ಆ ವ್ಯಕ್ತಿಯ ಕುಟುಂಬಕ್ಕೆ ಮುಂದಿನ ಚಟುವಟಿಕೆ ಕೈಗೊಳ್ಳಲು ಮರಣ ಪ್ರಮಾಣಪತ್ರ ಅಗತ್ಯವಾಗಿರುತ್ತದೆ. ವ್ಯಕ್ತಿ ಮರಣ ಹೊಂದಿದ ಕೂಡಲೇ ಮರಣ ಪತ್ರ ಸ್ಥಳೀಯ ಜನನ- ಮರಣ ನೋಂದಣಿ ಪ್ರಾಧಿಕಾರದಿಂದ ಲಭಿಸುವುದಿಲ್ಲ. ಒಂದೊಮ್ಮೆ ಪ್ರಮಾಣಪತ್ರ ಕೋರಿ ಅಂದೇ ಅರ್ಜಿ ಸಲ್ಲಿಸಿದರೂ ಸಹ ತಾಂತ್ರಿಕ ಕಾರಣದಿಂದ ಪ್ರಮಾಣಪತ್ರ ಸಿಗುವುದು ಕಷ್ಟಸಾಧ್ಯ. ಹೀಗಾಗಿ ಅನ್ಯ ರಾಜ್ಯ ಅಥವಾ ಜಿಲ್ಲೆಯ ವ್ಯಕ್ತಿಗಳು ಸಾವಿರಾರು ರೂ. ಖರ್ಚು ಮಾಡಿಕೊಂಡು ಮತ್ತೆ ದೂರದ ಉಡುಪಿಗೆ ಬರಬೇಕಾಗುತ್ತದೆ. ಆದರೆ, ಇದೀಗ ದಾಖಲೆಗಾಗಿ ಕಚೇರಿಗೆ ಅಲೆದಾಡದೇ ತಮ್ಮ ಮನೆ ಬಾಗಿಲಿನಲ್ಲಿಯೇ ಸೇವೆ ಸಿಗುವಂತಾಗಿದೆ.

    80ರೂ. ಶುಲ್ಕ

    ಮೃತ ವ್ಯಕ್ತಿಯ ಕುಟುಂಬದವರು ಮರಣ ಪ್ರಮಾಣ ಪತ್ರ ಕೋರಿ ಸಂಬಂಧಿತ ದಾಖಲೆಗಳೊಂದಿಗೆ ಅರ್ಜಿ ನಮೂನೆಯಲ್ಲಿ ಅಂಚೆ ಮೂಲಕ ಕಳುಹಿಸುವ ವ್ಯವಸ್ಥೆ ಆಯ್ಕೆ ಮಾಡಿಕೊಳ್ಳಬಹುದು. ಇದಕ್ಕಾಗಿ ನಿಗದಿಪಡಿಸಿರುವ ಶುಲ್ಕ 80ರೂ. ಪಾವತಿ ಮಾಡಿದರೆ ಸಾಕು. ಕರ್ನಾಟಕ ರಾಜ್ಯ ಸೇರಿದಂತೆ ದೇಶದ ಯಾವುದೇ ಮೂಲೆಯಲ್ಲಿರುವ ಮೃತರ ಕುಟುಂಬಕ್ಕೆ ಸ್ಪೀಡ್ ಪೋಸ್ಟ್ ಮೂಲಕ ಜನನ-ಮರಣ ಪ್ರಮಾಣಪತ್ರ ತಲುಪಿಸಲಾಗುತ್ತದೆ.

    ಜನರ ಮೆಚ್ಚುಗೆ

    ಉಡುಪಿ ಜಿಲ್ಲೆಯ ಮಣಿಪಾಲ ಸೇರಿದಂತೆ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮರಣ ಹೊಂದಿದ ಜಿಲ್ಲೆಯ ಅಥವಾ ಹೊರ ಜಿಲ್ಲೆಯವರು ಇನ್ನು ಪರದಾಡಬೇಕಿಲ್ಲ. ದೇಶದ ಯಾವುದೇ ಹಳ್ಳಿಯ ಮೂಲೆಯಲ್ಲಿದ್ದರೂ ಮೃತ ವ್ಯಕ್ತಿಯ ಕುಟುಂಬದ ಮನೆ ಬಾಗಲಿಗೇ ಪ್ರಮಾಣ ಪತ್ರ ಬರಲಿದೆ. ಇಂತಹ ವಿಶಿಷ್ಟ ನಾಗರಿಕ ಸ್ನೇಹಿ ವ್ಯವಸ್ಥೆ ಜಾರಿಗೊಳಿಸಿದ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರ ಕರ್ತವ್ಯ ಬದ್ಧತೆಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಮಾದರಿಯಾಯ್ತು ವಿಶಿಷ್ಟ ವ್ಯವಸ್ಥೆ

    ಉಡುಪಿ ಜಿಲ್ಲೆಯು ಆರೋಗ್ಯ ಕ್ಷೇತ್ರದ ಪ್ರಮುಖ ಹಬ್ ಆಗಿದೆ. ಇಲ್ಲಿನ ಮಣಿಪಾಲ ಆಸ್ಪತ್ರೆಗೆ ದೇಶದ ವಿವಿಧ ರಾಜ್ಯಗಳ ಜನರು, ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಅಲ್ಲದೆ, ಈ ಆಸ್ಪತ್ರೆಯಲ್ಲಿ ದಿನವೂ ನೂರಾರು ಮಕ್ಕಳ ಜನನವಾಗುತ್ತದೆ. ರೋಗ ಉಲ್ಬಣಗೊಂಡು ಅಂತಿಮ ಹಂತದಲ್ಲಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಸಂಖ್ಯೆಯೂ ಅಪಾರ. ವೈದ್ಯರ ಸತತ ಶ್ರಮದ ನಂತರವೂ ಚಿಕಿತ್ಸೆಗೆ ಸ್ಪಂದಿಸದೆ ಅನೇಕ ರೋಗಿಗಳು ಸಾವನ್ನಪ್ಪುತ್ತಾರೆ. ಇಂತಹ ಹೊರ ರಾಜ್ಯದ ಜನರಿಗೆ ಬಳಿಕ ಮರಣ ಪತ್ರ ಪಡೆಯಲು ತೊಡಕಾಗುತ್ತಿತ್ತು. ಇದೀಗ ಡಿಸಿ ವಿಶೇಷ ಕಾಳಜಿಯಿಂದ ಸಂಬಂಧಿತರ ಮನೆಗೇ ಅಂಚೆ ಮೂಲಕ ಜನನ-ಮರಣ ಪತ್ರ ಲಭಿಸುವ ಮಾದರಿ ವ್ಯವಸ್ಥೆ ಉಡುಪಿಯಲ್ಲಿ ಆರಂಭಗೊಂಡಿದೆ.

    ಉಡುಪಿ ಜಿಲ್ಲೆಗೆ ವೈದ್ಯಕೀಯ ಚಿಕಿತ್ಸೆ, ಉದ್ಯೋಗ ಸೇರಿದಂತೆ ಅನೇಕ ಕಾರಣಗಳಿಗೆ ಸಾವಿರಾರು ಮಂದಿ ವಲಸಿಗರು ಆಗಮಿಸುತ್ತಾರೆ. ಇವರಲ್ಲಿ ಹಲವರು ವಿವಿಧ ಕಾರಣಗಳಿಂದ ಮೃತಪಟ್ಟಾಗ ಮರಣ ಪ್ರಮಾಣಪತ್ರ ಸಕಾಲದಲ್ಲಿ ಪಡೆಯಲು ತೊಂದರೆಯಾಗುತ್ತಿತ್ತು. ಹೀಗಾಗಿ ನಗರಸಭೆ ಮತ್ತು ಅಂಚೆ ಇಲಾಖೆ ಮೂಲಕ ಅವರ ಮನೆ ಬಾಗಿಲಿಗೇ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ. ಕಳೆದ 10 ದಿನದಲ್ಲಿ 100ಕ್ಕೂ ಅಧಿಕ ಜನನ ಮತ್ತು ಮರಣ ಪ್ರಮಾಣಪತ್ರವನ್ನು ಸಂಬಂಧಿಸಿದವರಿಗೆ ಯಶಸ್ವಿಯಾಗಿ ತಲುಪಿಸಲಾಗಿದೆ. ಜಿಲ್ಲೆಯ ಎಲ್ಲ ನಗರ, ಸ್ಥಳೀಯ ಸಂಸ್ಥೆಗಳಲ್ಲೂ ಈ ಸೇವೆ ಅಳವಡಿಸಿಕೊಳ್ಳಲು ಸೂಚನೆ ನೀಡಿದ್ದೇನೆ.
    – ಕೂರ್ಮಾರಾವ್ ಎಂ., ಜಿಲ್ಲಾಧಿಕಾರಿ, ಉಡುಪಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts