More

    ರಸ್ತೆ ಮೇಲೆಯೇ ವಿದ್ಯುತ್ ಕಂಬ!

    -ಕೆ.ಸಂಜೀವ ಆರ್ಡಿ ಗೋಳಿಯಂಗಡಿ

    ಗೋಳಿಯಂಗಡಿ ಮೂಲಕ ಮಂದಾರ್ತಿ ಸಂಪರ್ಕಿಸುವ ಮಾರ್ಗದ ಆವರ್ಸೆ ಅಂಡಾರ್‌ಕಟ್ಟೆ ಬಳಿಯಿರುವ ತಿರುವು ವಾಹನ ಸವಾರರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇದೆ. ಇಲ್ಲಿರುವ ತಿರುವಿನಲ್ಲಿ ರಸ್ತೆಯ ಮೇಲೆಯೇ ವಿದ್ಯುತ್ ಕಂಬವಿದ್ದು, ಯಾವ ಕ್ಷಣದಲ್ಲಾದರೂ ಅಪಾಯ ಸಂಭವಿಸಬಹುದಾಗಿದೆ.

    ಕೆಲವು ತಿಂಗಳ ಹಿಂದೆ ರಸ್ತೆ ಅಗಲಗೊಳಿಸಿ ಡಾಂಬರು ಹಾಕಲಾಗಿದೆ. ಆದರೆ, ರಸ್ತೆಯ ಮೇಲೆ ಇರುವ ವಿದ್ಯುತ್ ಕಂಬ ಸ್ಥಳಾಂತರಿಸದೆ ಹಾಗೆಯೇ ಬಿಟ್ಟಿದ್ದಾರೆ. ರಾತ್ರಿ ವೇಳೆಯಲ್ಲಿ ಸಂಚರಿಸುವ ವಾಹನ ಸವಾರರು ಕೂದಲೆಳೆಯಷ್ಟು ಅಂತರದಿಂದ ವಿದ್ಯುತ್ ಕಂಬಕ್ಕೆ ಡಿಕ್ಕಿ ಆಗುವದನ್ನು ತಪ್ಪಿಸಿಕೊಂಡು ‘ಅಬ್ಬ….’ ಎಂಬ ನಿಟ್ಟುಸಿರು ಬಿಟ್ಟು ಮುಂದೆ ಪ್ರಯಾಣಿಸುತ್ತಿದ್ದಾರೆ.

    ಟೊಂಗೆಯಿಟ್ಟು ಎಚ್ಚರಿಕೆ

    ಗೋಳಿಯಂಗಡಿಯಿಂದ ಮಂದಾರ್ತಿ ಸಂಪರ್ಕ ರಸ್ತೆಯಲ್ಲಿ ನಿತ್ಯವೂ ವಾಹನ ದಟ್ಟಣೆಯಿರುತ್ತದೆ. ಹೀಗಾಗಿ ಆವರ್ಸೆ ಅಂಡಾರ್‌ಕಟ್ಟೆ ತಿರುವಿನಲ್ಲಿರುವ ವಿದ್ಯುತ್ ಕಂಬದಿಂದ ಅಪಾಯ ಆಗಬಹುದೆಂದು ಸ್ಥಳೀಯರು ಕಂಬದ ಬುಡದಲ್ಲಿ ಮರದ ದೊಡ್ಡ ಟೊಂಗೆಯಿಟ್ಟು ವಾಹನ ಸವಾರರು ಎಚ್ಚೆತ್ತುಕೊಳ್ಳುವಂತೆ ಮಾಡಿದ್ದಾರೆ. ಇದರಿಂದ ಈ ತಿರುವಿನಲ್ಲಿ ಸಂಭವಿಸಬಹುದಾದ ಅನೇಕ ಆಪಘಾತಗಳು ತಪ್ಪಿವೆ.

    avarse road
    ಆವರ್ಸೆ ಅಂಡಾರ್‌ಕಟ್ಟೆ ಬಳಿ ತಿರುವಿನಲ್ಲಿ ರಸ್ತೆಯ ಮೇಲೆಯೇ ಇರುವ ಅಪಾಯಕಾರಿ ವಿದ್ಯುತ್ ಕಂಬ.

    ನಿರ್ಜನ ಪ್ರದೇಶ

    ಈ ಮಾರ್ಗದಲ್ಲಿ ಸಂಚರಿಸುವ ಎಲ್ಲ ಬಗೆಯ ವಾಹನ ಸವಾರರು ಜೀವಭಯದಲ್ಲೇ ಸಾಗುತ್ತಾರೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗಂತೂ ರಸ್ತೆಯ ಮೇಲಿರುವ ವಿದ್ಯುತ್ ಕಂಬವೆಂದರೆ ಭೂತಭಯ. ಜನ ವಸತಿಯಿಲ್ಲದ ನಿರ್ಜನ ಪ್ರದೇಶದಲ್ಲಿ ಈ ತಿರುವು ಇರುವುದರಿಂದ ವಾಹನ ಆಪಘಾತಕ್ಕೊಳಗಾದರೆ ಪ್ರಯಾಣಿಕರ ಹಾಗೂ ವಾಹನ ಸವಾರರ ಜೀವಕ್ಕೆ ಅಪಾಯವಾಗಲಿದೆ. ಬೈಕ್ ಸವಾರರು ಅವಘಡ ತಪ್ಪಿಸಲು ಹೋಗಿ ಹಲವಾರು ಭಾರಿ ಬಿದ್ದು ಗಾಯಗೊಂಡಿದ್ದಾರೆ.

    ಅಪಘಾತ, ಸಾವು-ನೋವು ತಪ್ಪಿಸಿ

    ವಿದ್ಯುತ್ ಕಂಬವಿರುವ ಅಪಾಯಕಾರಿ ರಸ್ತೆ ತಿರುವಿನಲ್ಲಿ ಇತ್ತೀಚೆಗೆೆ ಗೂಡ್ಸ್ ವಾಹನ ಹಾಗೂ ಬಸ್ಸಿನ ನಡುವೆ ಡಿಕ್ಕಿ ಸಂಭವಿಸಿ, ಹಲವು ಪ್ರಯಾಣಿಕರು ಗಾಯಗೊಂಡಿದ್ದರು. ಇಲ್ಲಿರುವ ವಿದ್ಯುತ್ ಕಂಬದಿಂದ ಆಗಾಗ ಆಪಘಾತ ಸಂಭವಿಸುತ್ತಿದ್ದರೂ ಸಂಬಂಧಪಟ್ಟ ಇಲಾಖೆಯವರು ಅಪಾಯಕಾರಿಯಾಗಿ ನಿಂತಿರುವ ಕಂಬ ತೆರವುಗೊಳಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಇನ್ನಾದರೂ ಅಧಿಕಾರಿಗಳು ಅಂಡಾರ್‌ಕಟ್ಟೆ ಬಳಿ ವಿದ್ಯುತ್ ಕಂಬ ಸ್ಥಳಾಂತರಿಸಿ ಮುಂದೆ ಸಂಭವಿಸಬಹುದಾದ ದೊಡ್ಡ ಪ್ರಮಾಣದ ಅಪಘಾತ, ಸಾವು-ನೋವುಗಳನ್ನು ತಪ್ಪಿಸಿ ಜನರ ಹಿತ ಕಾಪಾಡಲು ಮುಂದಾಗಲಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

    ಆವರ್ಸೆ ಅಂಡಾರ್‌ಕಟ್ಟೆ ಬಳಿ ತಿರುವಿನಲ್ಲಿ ರಸ್ತೆ ಮಧ್ಯದಲ್ಲಿರುವ ವಿದ್ಯುತ್ ಕಂಬಗಳಿಂದ ಪ್ರಯಾಣಿಕರಿಗೆ ಅಪಾಯವಾಗುವ ಸಾಧ್ಯತೆ ಇದೆ. ಆದರೂ ವಿದ್ಯುತ್ ಕಂಬ ತೆರವುಗೊಳಿಸದೆ ಸಂಬಂಧಿತರು ಸುಮ್ಮನೆ ಕುಳಿತಿರುವುದು ಸರಿಯಲ್ಲ. ವಾಹನ ಸವಾರರು ಭಯದಲ್ಲೇ ಸಾಗುವಂತಾಗಿದೆ.
    -ಮಹೇಶ, ವಾಹನ ಸವಾರ

    ಆವರ್ಸೆ ಅಂಡಾರ್‌ಕಟ್ಟೆ ಬಳಿ ರಸ್ತೆ ತಿರುವಿನಲ್ಲಿ ಕಳೆದ ಕೆಲವು ತಿಂಗಳ ಹಿಂದೆ ಲೋಕೋಪಯೋಗಿ ಇಲಾಖೆಯು ರಸ್ತೆ ಅಗಲೀಕರಣದೊಂದಿಗೆ ಡಾಂಬರೀಕರಣ ಕಾಮಗಾರಿ ಮಾಡಿದೆ. ಗುತ್ತಿಗೆದಾರರು ಕಂಬ ಇದ್ದರೂ ಡಾಂಬರು ಹಾಕಿದ್ದಾರೆ. ಇಲ್ಲಿ ರಸ್ತೆಗೆ ಹೊಂದಿಕೊಂಡು ಇರುವ ವಿದ್ಯುತ್ ಕಂಬ ಸ್ಥಳಾಂತರಿಸುವಂತೆ ಸೂಚಿಸಲಾಗಿದೆ.
    -ವೈಭವ ಶೆಟ್ಟಿ
    ಸಹಾಯಕ ಇಂಜಿನಿಯರ್, ಮೆಸ್ಕಾಂ, ಸಾಬ್ರಕಟ್ಟೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts