More

    ಮರುಕಳಿಸಿದ ಎಲೆಚುಕ್ಕೆ ರೋಗ

    ವಿಜಯವಾಣಿ ಸುದ್ದಿಜಾಲ ಹೆಬ್ರಿ

    ಕಳೆದ ಮಳೆಗಾಲದಲ್ಲಿ ಅಡಕೆ ಬೆಳೆಗಾರರನ್ನು ಹೈರಾಣ ಮಾಡಿದ್ದ ಎಲೆಚುಕ್ಕೆ ರೋಗ ಈ ಸಲವೂ ಮಳೆ ಶುರುವಾಗುತ್ತಿದ್ದಂತೆ ಮರುಕಳಿಸಿದೆ. ಆರಂಭದಲ್ಲೇ ರೋಗ ಗಂಭೀರ ಸ್ವರೂಪ ಪಡೆಯುವ ಲಕ್ಷಣ ತೋರುತ್ತಿದ್ದು, ರೈತರು ತಕ್ಷಣ ಮುಂಜಾಗ್ರತೆ ವಹಿಸಿ ನಿರ್ವಹಣಾ ಕ್ರಮ ಅನುಸರಿಸಿಕೊಳ್ಳಲು ತೋಟಗಾರಿಕಾ ಇಲಾಖೆ ಸಲಹೆಯಿತ್ತಿದೆ.

    ನಿರಂತರ ಮಳೆಯಿಂದ ಈ ರೋಗ ತೀವ್ರಗತಿಯಲ್ಲಿ ಹರಡುತ್ತಿದ್ದು, ಅಡಕೆ ಬೆಳೆ ಫಸಲು ನಾಶ ಹಾಗೂ ಮರಗಳ ನಾಶಕ್ಕೂ ಕಾರಣವಾಗಬಹುದಾಗಿದೆ. ಗಾಳಿ ಮುಖೇನ ಹರಡುವ ಕಾರಣ ಪ್ರಾಥಮಿಕ ಹಂತದಲ್ಲೇ ರೋಗ ನಿಯಂತ್ರಣ ಅಗತ್ಯ. 1964ರಲ್ಲಿ ಪ್ರಥಮವಾಗಿ ಅಡಕೆ ಬೆಳೆಯಲ್ಲಿ ಕಂಡು ಬಂದು ಬೆಳೆಗೆ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡಿರಲಿಲ್ಲ. ಆದರೆ ಕಳೆದೆರೆಡು ವರ್ಷಗಳಿಂದ ಈ ರೋಗ ತೀವ್ರತೆ ಹೆಚ್ಚಿನ ಬಾಧೆ ಉಂಟು ಮಾಡುತ್ತಿದ್ದು ರೈತರಲ್ಲಿ ಆತಂಕ ಮೂಡಿಸಿದೆ.

    ರೋಗ ಲಕ್ಷಣ

    ಅಡಕೆ ಸೋಗೆಯಲ್ಲಿ ಹಳದಿ ಬಣ್ಣದ ಅಂಚುಗಳಿರುವ ಕಂದು ಚುಕ್ಕೆ ಹಾಗೂ ಕಪ್ಪು ಬಣ್ಣದ ಅಂಚುಗಳಿರುವ ಬೂದು ಬಣ್ಣದ ಚುಕ್ಕೆಗಳು ಕಂಡು ಬರುತ್ತವೆ. ಸೋಗೆಗಳಲ್ಲಿ ಚುಕ್ಕೆ ಹೆಚ್ಚಾದಂತೆ ಒಂದಕ್ಕೊಂದು ಕೂಡಿ ಒಣಗಿದ ಸೋಗೆಗಳು ಜೋತು ಬಿದ್ದು ಸುಟ್ಟಂತೆ ಕಾಣುತ್ತವೆ. ಮೊದಲು ಕೆಳಭಾಗದ ಒಂದೆರೆಡು ಎಲೆಗಳಲ್ಲಿ ರೋಗಲಕ್ಷಣ ಕಾಣಿಸಿ, ಮೇಲಿನ ಎಲೆಗಳಿಗೂ ಹಬ್ಬುತ್ತದೆ. ಈ ರೋಗದ ಚಿಹ್ನೆಗಳು ಇತ್ತೀಚಿನ ದಿನಗಳಲ್ಲಿ ಎಲೆಗಳ ಮೇಲೆ ಮಾತ್ರವಲ್ಲದೆ ಅಡಕೆ ಹಾಳೆ ಹಾಗೂ ಕಾಯಿಗಳ ಮೇಲೂ ಕಂಡು ಬರುತ್ತಿದೆ. ರೋಗಬಾಧಿತ ಕಾಯಿಗಳು ಬಲಿಯುವ ಮೊದಲೇ ಹಳದಿಯಾಗಿ ಉದುರುತ್ತವೆ. ಕೆಲವೊಮ್ಮೆ, ಕಾಯಿಯ ಮೇಲೆ ಚುಕ್ಕೆ ಮೂಡಿದ ಜಾಗ ಸೀಳಿ ಕಾಯಿಗಳು ಉದುರುತ್ತವೆ. ಈ ರೋಗ ತೋಟದಿಂದ ತೋಟಕ್ಕೆ ಅತಿ ವೇಗವಾಗಿ ಗಾಳಿಯ ಮುಖೇನ ಹರಡುತ್ತದೆ. ಇದರ ನಿಯಂತ್ರಣ ರೈತರು ಸಮುದಾಯ ಮಟ್ಟದಲ್ಲಿ (ಸಾಮೂಹಿಕವಾಗಿ) ಮಾಡಿದಲ್ಲಿ ಉತ್ತಮ ನಿಯಂತ್ರಣ ಸಾಧ್ಯ.

    areca

    ನಿಯಂತ್ರಣ ಕ್ರಮ

    ಹೆಚ್ಚು ಬಾಧಿತ ಎಲೆಗಳನ್ನು ಕತ್ತರಿಸಿ ಸುಡುವುದರಿಂದ ಸೋಂಕಿನ ತೀವ್ರತೆ ಕಡಿಮೆಗೊಳಿಸಬಹುದು. ಈ ಕೆಲಸ ಪ್ರಾಯೋಗಿಕವಾಗಿ ಕಷ್ಟಸಾಧ್ಯವಾದರೂ ತೀವ್ರ ಬಾಧೆಯಿರುವೆಡೆ ಅತ್ಯವಶ್ಯ. ಮುಂಜಾಗ್ರತಾ ಕ್ರಮವಾಗಿ ಅಡಿಕೆ ಗೊನೆಗಳಿಗೆ ಮೈಲುತುತ್ತು/ಬೋರ್ಡೋ ಮಿಶ್ರಣ ಸಿಂಪಡಿಸುವಾಗ ಎಲೆಗಳಿಗೂ ಕಡ್ಡಾಯವಾಗಿ ಸಿಂಪಡಣೆ ಮಾಡಬೇಕು.

    ಹೆಚ್ಚು ರೋಗಬಾಧೆಯಿರುವ ತೋಟಗಳಲ್ಲಿ, ಮಳೆಯಿಲ್ಲದ ಶುಷ್ಕ ವಾತಾವರಣದಲ್ಲಿ ಪ್ರೊಪಿಕೊನಝೋಲ್, ಟೆಬುಕೊನಝೋಲ್ ಅಥವಾ ಹೆಕ್ಸಾಕೊನಝೋಲ್ ಶಿಲೀಂಧ್ರನಾಶಕ ಒಂದು ಲೀಟರ್ ನೀರಿಗೆ ಒಂದು ಮಿ. ಲೀ. ಪ್ರಮಾಣದಲ್ಲಿ ಮರಗಳಿಗೆ ಸಿಂಪಡಿಸಬೇಕು. ಮೂರರಿಂದ ನಾಲ್ಕು ವಾರಗಳ ನಂತರ, ಪ್ರೋಪಿನೆಬ್ 70 ಡಬ್ಲುೃಪಿ ಶಿಲೀಂಧ್ರನಾಶಕವನ್ನು ಒಂದು ಲೀಟರ್ ನೀರಿಗೆ ಎರಡು ಗ್ರಾಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಶಿಲೀಂಧ್ರನಾಶಕ ದ್ರಾವಣ ತಯಾರಿಸುವಾಗ ಪ್ರತೀ ಲೀಟರ್ ದ್ರಾವಣಕ್ಕೆ ಒಂದು ಮಿ.ಲೀ. ಪ್ರಮಾಣದಲ್ಲಿ ಅಂಟನ್ನು ಸೇರಿಸಬೇಕು. ಶಿಲೀಂಧ್ರನಾಶಕ ಸಿಂಪಡಣೆಯ ನಂತರ ಕನಿಷ್ಟ 2-3 ತಾಸುಗಳು ಮಳೆ ಇರದೇ ಬಿಸಿಲಿನ ವಾತಾವರಣವಿರುವುದು ಅವಶ್ಯಕ.

    ಈ ರೋಗವು ಪ್ರಮುಖವಾಗಿ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಸಾರಜನಕಯುಕ್ತ ಸಾವಯವ ಹಾಗೂ ರಾಸಾಯನಿಕ ಗೊಬ್ಬರ ನೀಡುವ ಹೆಚ್ಚು ಕಂಡು ಬರುತ್ತಿದೆ. ಬಸಿ ಕಾಲುವೆ ಸ್ವಚ್ಛಗೊಳಿಸಿ ತೋಟಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ರೋಗ ಪೀಡಿತ ಪ್ರದೇಶಗಳಿಂದ ಅಡಕೆ ಸಸಿಗಳನ್ನು ಸಾಗಿಸಕೂಡದು. ಗಾಳಿಯಲ್ಲಿ ರೋಗಾಣು ಬಹಳ ಬೇಗನೆ ಹರಡುವುದರಿಂದ ಸಮುದಾಯ ಮಟ್ಟದ ರೋಗ ನಿಯಂತ್ರಣಾ ಕ್ರಮಗಳು ಬಲು ಮುಖ್ಯವಾಗಿರುತ್ತವೆ.
    -ಶ್ರೀನಿವಾಸ್, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು
    ಜಿಲ್ಲಾ ಪಂಚಾಯಿತಿ, ಕಾರ್ಕಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts