More

    ಪಡುತೋನ್ಸೆಯಲ್ಲಿ ಪಂಜರ ಮೀನು ಕೃಷಿ ಯಶಸ್ವಿ

    ವಿಜಯವಾಣಿ ಸುದ್ದಿಜಾಲ ಉಡುಪಿ

    ಉಡುಪಿ ಸಮೀಪದ ಪಡುತೋನ್ಸೆ ಗ್ರಾಮದ ಸ್ವರ್ಣಾ ನದಿ ಅಳಿವೆಯಲ್ಲಿ ರಾಜ್ಯದಲ್ಲೇ ಮೊದಲ ಬಾರಿಗೆ ನಡೆಸಿದ ‘ಇಂಡಿಯನ್ ಪೊಂಪಾನೊ’ ಪಂಜರ ಮೀನು ಕೃಷಿ ಪ್ರಯೋಗ ಯಶಸ್ವಿಯಾಗಿದೆ. ಪರಿಶಿಷ್ಟ ಜಾತಿಯ ಐದು ಕುಟುಂಬಗಳು 5 ತಿಂಗಳಲ್ಲಿ 2.35 ಲಕ್ಷ ರೂ. ಲಾಭ ಗಳಿಸಿವೆ.

    ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ಮಂಗಳೂರು ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು 2009-10ನೇ ಸಾಲಿನಲ್ಲಿ ಪ್ರಾತ್ಯಕ್ಷಿಕೆ ಮೂಲಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಪಂಜರ ಮೀನು ಕೃಷಿ ಕೈಗೆತ್ತಿಕೊಂಡಿದ್ದರು. ಆಂಧ್ರ ಪ್ರದೇಶದ ವಿಶಾಖಪಟ್ಟಣ ಹಾಗೂ ಕೇರಳದ ಕೆಲವು ಭಾಗಗಳಲ್ಲಿ ನಡೆಸಿದ ಈ ಅಪರೂಪದ ‘ಇಂಡಿಯನ್ ಪೊಂಪಾನೊ’ ಪಂಜರ ಮೀನು ಕೃಷಿ ಯಶಸ್ವಿಯಾಗಿತ್ತು. ಇದೇ ಮಾದರಿಯಲ್ಲಿ ಪರಿಶಿಷ್ಟ ಜಾತಿ ಉಪಯೋಜನೆಯಡಿ ‘ಇಂಡಿಯನ್ ಪೊಂಪಾನೊ’ ಪಂಜರ ಮೀನು ಕೃಷಿಯನ್ನು ಪಡುತೋನ್ಸೆ ಗ್ರಾಮದ ಬೆಂಗ್ರೆಯ ಐದು ಪರಿಶಿಷ್ಟ ಜಾತಿ ಕುಟುಂಬಗಳು ಸ್ವರ್ಣ ನದಿ ಅಳಿವೆಯಲ್ಲಿ ಯಶಸ್ವಿಯಾಗಿ ನಡೆಸುತ್ತಿವೆ.

    ಈ ಕುಟುಂಬಗಳಿಗೆ ಮೀನು ಕೃಷಿ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಲಾಗಿದೆ. ಮೂರರಿಂದ ನಾಲ್ಕು ಗ್ರಾಂ ತೂಕ ಇರುವ 4 ಸಾವಿರ ಮೀನು ಮರಿಗಳನ್ನು ಕೇಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆಯ ವಿಶಾಖಪಟ್ಟಣ ಪ್ರಾದೇಶಿಕ ಕೇಂದ್ರದಿಂದ 2022ರ ನ.7ರಂದು ತಂದು, ಒಂದು ಚದರ ಮೀಟರ್‌ನಲ್ಲಿ 40ರಿಂದ 50 ಮೀನು ಮರಿಗಳಂತೆ ಎರಡು ಪಂಜರಗಳಲ್ಲಿ ಬಿಡಲಾಗಿತ್ತು. ಆಂಧ್ರ ಪ್ರದೇಶದ ಭೀಮಾವರಂನಿಂದ ಮೀನಿಗೆ ಬೇಕಾದ ಸ್ಕರ್ಟಿಂಗ್-ಸ್ಟೆಲ್ಲಾ ಫೀಡ್ ತೇಲುವ ಪೆಲೆಟ್ ಆಹಾರದ ತುಂಡುಗಳನ್ನು ತಂದಿದ್ದು, ಮೀನಿನ ದೇಹದ ತೂಕದ ಶೇ.5ರಷ್ಟು ಆಹಾರವನ್ನು ಪ್ರತಿದಿನ ಎರಡು ಬಾರಿಯಂತೆ ಮೀನುಗಳಿಗೆ ನೀಡಿ ಸಾಕಲಾಗಿದೆ.

    cage fish farming 2

    ಇದಕ್ಕೆ ಸುಮಾರು 37,500ರೂ. ಖರ್ಚಾಗಿದ್ದು, ಐದು ತಿಂಗಳಲ್ಲಿ 2,35,000ರೂ. ನಿವ್ವಳ ಲಾಭ ದೊರಕಿದೆ. ಈ ಯಶಸ್ಸಿನಿಂದ ಪ್ರೇರಣೆ ಪಡೆದ ಹಲವು ಕೃಷಿಕರು ಇಂಡಿಯನ್ ಪೊಂಪಾನೊ ಕೃಷಿ ಮಾಡಲು ಮುಂದೆ ಬಂದಿದ್ದಾರೆ. ಪೊಂಪಾನೊ ಮೀನು ಕಡಿಮೆ ಅವಧಿಯಲ್ಲಿ ಉತ್ತಮ ಬೆಳವಣಿಗೆ ಹೊಂದುತ್ತದೆ. ಜತೆಗೆ ಉತ್ತಮ ಬೇಡಿಕೆ ಇರುವುದರಿಂದ ಅಲ್ಪಾವಧಿಯಲ್ಲಿ ಅಧಿಕ ಲಾಭ ನೀಡುತ್ತದೆ ಎಂಬುದು ಈ ಪ್ರಾತ್ಯಕ್ಷಿಕೆಯಿಂದ ಧೃಡಪಟ್ಟಿದೆ.

    ಭರ್ಜರಿ ಲಾಭ

    ಪಂಜರಕ್ಕೆ ಬಿಟ್ಟ ಮರಿಗಳ ಪೈಕಿ ಶೇ.90ಕ್ಕಿಂತ ಅಧಿಕ ಮೀನುಗಳು ಬದುಕುಳಿದಿದ್ದು, ಕೇವಲ ಐದು ತಿಂಗಳಲ್ಲಿಯೇ 400 ರಿಂದ 450 ಗ್ರಾಂ ವರೆಗೆ ಬೆಳೆದಿದೆ. ಈ ಮೂಲಕ ಒಟ್ಟು 1300 ಕೆ.ಜಿ. ಮೀನು ಇಳುವರಿ ಬಂದಿದೆ. ಪ್ರತಿ ಕೆಜಿಗೆ 450ರೂ. ರಿಂದ 490ರೂ.ರವರೆಗೆ ದೊರೆತಿದ್ದು ಮಾರಾಟದಿಂದ ಒಟ್ಟು 6,10,000 ರೂ. ಹಣ ದೊರಕಿದೆ.

    ಯಶಸ್ವಿ ಪ್ರಯೋಗದಿಂದ ಇದೀಗ ಈ ಮೀನು ಕೃಷಿಯ ಬಗ್ಗೆ ಹಲವರಲ್ಲಿ ಆಸಕ್ತಿ ಹೆಚ್ಚಾಗಿದೆ. ಈ ಬಗ್ಗೆ ಬೇಡಿಕೆಗಳು ಬರುತ್ತಿವೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಕರಾವಳಿಯ ಮೂರು ಜಿಲ್ಲೆಗಳ 10 ಸ್ಥಳಗಳಲ್ಲಿ ಪಂಜರ ಮೀನು ಕೃಷಿ ಮಾಡಲು ಯೋಜನೆ ಹಾಕಿಕೊಳ್ಳಲಾಗಿದೆ.
    -ರಾಜೇಶ್ ಕೆ.ಎಂ.
    ಕೆಂದ್ರೀಯ ಸಮುದ್ರ ಮೀನುಗಾರಿಕೆ ಸಂಶೋಧನಾ ಸಂಸ್ಥೆ ಮಂಗಳೂರು ಪ್ರಾದೇಶಿಕ ಕೇಂದ್ರ ವಿಜ್ಞಾನಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts