

ಕುಂದಾಪುರ: ರಸ್ತೆಯಲ್ಲಿ ಬಿದ್ದ ಮರ ತೆರವು ಮಾಡುತ್ತಿರುವ ಸಂದರ್ಭ ಬಿದ್ದ ಮರದ ಬದಿಯ ಮತ್ತೊಂದು ಮರ ಧರೆಗೆ ಉರುಳಿದ್ದು, ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಹಾಗೂ ಮರ ತೆರವು ಮಾಡುತ್ತಿದ್ದ ಸಂಗಡಿಗರ ಸಮಯ ಪ್ರಜ್ಞೆಯಿಂದ ಗುರುವಾರ ಸಂಭವನೀಯ ದುರಂತ ತಪ್ಪಿದೆ.
ಕುಂದಾಪುರ -ಹಾಲಾಡಿ ರಸ್ತೆ ಬದಿಯಲ್ಲಿ ಅಕೇಶಿಯಾ ಸಾಲು ಮರಗಳಿದ್ದು, ಮರಗಳು ರಸ್ತೆ ಬದಿ ವಾಲಿಕೊಂಡಿವೆ. ಹಾಲಾಡಿ ರಸ್ತೆಗೆ ಒರಗಿದ ಮರಗಳ ಕುರಿತು ‘ವಿಜಯವಾಣಿ’ ವಿಸ್ತೃತ ವರದಿ ಮಾಡಿತ್ತು. ಅರಣ್ಯ ಇಲಾಖೆ ತೀರಾ ಅಪಾಯಕಾರಿ ಮರಗಳ ತೆರವು ಕೂಡ ಮಾಡಿತ್ತು. ಆದರೆ ಕಳೆದ ಒಂದೆರಡು ದಿನದಿಂದ ಮಳೆ ಬರುತ್ತಿದ್ದರಿಂದ ಮರದ ಬುಡದ ಮಣ್ಣು ಸಡಿಲಗೊಂಡು ಉರುಳಿ, ಸಂಚಾರಕ್ಕೆ ತೊಡಕು ಉಂಟಾಗಿತ್ತು.
ಎಲ್ಲರೂ ಮರ ತೆರವು ಕಾರ್ಯಕದಲ್ಲಿ ತಲ್ಲೀನರಾಗಿರುವಾಗ ಬಿದ್ದ ಮರದ ಪಕ್ಕದಲ್ಲೇ ಇದ್ದ ಇನ್ನೊಂದು ಸಣ್ಣ ಮರ ಒಮ್ಮಿಂದೊಮ್ಮೆ ಉರುಳಲು ಆರಂಭಿಸಿತು. ಮರ ಉರುಳುವ ಸದ್ದು ಗಮನಿಸಿದ ಶಾಸಕ ಗುರುರಾಜ್ ಗಂಟಿಹೊಳೆ ಮತ್ತು ಸಂಗಡಿಗರು ನಿಂತಲ್ಲಿಂದ ಓಡಿ ತಪ್ಪಿಸಿಕೊಂಡರು.