More

  ಪುರಾಣ ನೀತಿ ಕಥೆಗಳಿಂದ ಜನರಲ್ಲಿ ಮೂಡಿದೆ ನೈತಿಕತೆ: ಪರ್ಯಾಯ ಕೃಷ್ಣಾಪುರ ಶ್ರೀ ಆಶೀರ್ವಚನ

  ಉಡುಪಿ: ಕರಾವಳಿಯ ಜಾನಪದ ಕಲೆ ಯಕ್ಷಗಾನ ಅವಿದ್ಯಾವಂತರಿಗೂ ನೈತಿಕ ಹಾಗೂ ಧಾರ್ಮಿಕ ಶಿಕ್ಷಣ ನೀಡುವ ಮೂಲಕ ಅವರನ್ನು ಸುಸಂಸ್ಕ್ರತರನ್ನಾಗಿಸಿದೆ ಎಂದು ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರ ತೀರ್ಥ ಸ್ವಾಮೀಜಿ ಹೇಳಿದರು.

  ಉಡುಪಿ ಶ್ರೀಕೃಷ್ಣ ಮಠ ರಾಜಾಂಗಣದಲ್ಲಿ ಇತ್ತೀಚೆಗೆ ಪರ್ಯಾಯ ಮಠ ಆಶ್ರಯದಲ್ಲಿ ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸಹಕಾರದಲ್ಲಿ ಶ್ರೀ ಮಿತ್ರ ಯಕ್ಷಗಾನ ಮಂಡಳಿ ಸರಳೇಬೆಟ್ಡು, ಶ್ರೀ ಮಿತ್ರ ಕಲಾನಿಕೇತನ ಟ್ರಸ್ಟ್ ಸರಳೆಬೆಟ್ಟು, ಶ್ರೀ ಯಕ್ಷಮಿತ್ರ ಯಕ್ಷಗಾನ ತರಬೇತಿ ಕೇಂದ್ರ ಸರಳೇಬೆಟ್ಟು, ವಿಟ್ಲ ಜೋಶಿ ಪ್ರತಿಷ್ಠಾನ ಪರ್ಕಳ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡ ಶ್ರೀಮಿತ್ರ ಯಕ್ಷಗಾನ ಮಂಡಳಿಯ 40ನೇ ವಾರ್ಷಿಕೋತ್ಸವ ಸಂಭ್ರಮದಲ್ಲಿ ಆಶೀರ್ವಚನ ನೀಡಿದರು.

  ಪುರಾಣದ ನೀತಿ ಕಥೆಗಳು ಜನರಲ್ಲಿ ನೈತಿಕತೆಯನ್ನು ಬೆಳೆಸಿ ಸಮಾಜದಲ್ಲಿ ಶಾಂತಿ, ನೆಮ್ಮದಿಯನ್ನು ನೆಲೆಗೊಳಿಸುವ ಸಾಮರ್ಥ್ಯ ಹೊಂದಿವೆ. ಯಕ್ಷಗಾನ ಒಂದು ದೊಡ್ಡ ಸಮಾರಾಧನೆ ಇದ್ದ ಹಾಗೆ. ಹೇಗೆ ಸಮಾರಾಧನೆಯಲ್ಲಿ ಷಡ್ರಸೋಪೇತ ಪದಾರ್ಥಗಳು ಇರುವಂತೆ ಯಕ್ಷಗಾನದಲ್ಲಿ ಸಂಗೀತ, ನಾಟ್ಯ, ಹಾಡುಗಾರಿಕೆ ಮೊದಲಾದ ನವರಸಗಳು ತುಂಬಿವೆ. ಇದು ಎಲ್ಲ ಬಗೆಯ ಅಭಿರುಚಿಯುಳ್ಳ ಪ್ರೇಕ್ಷಕರನ್ನು ತಣಿಸಬಲ್ಲದು. ಇಂದು ಯಕ್ಷಗಾನಕ್ಕೆ ರಾಜಾಶ್ರಯವಿಲ್ಲ. ಹಾಗಾಗಿ ಪ್ರೇಕ್ಷಕನೇ ಇಲ್ಲಿ ರಾಜನಾಗಿ ಕಲೆ ಉಳಿಸಿ ಬೆಳೆಸುವ ಕಾರ್ಯ ಮಾಡಬೇಕು ಎಂದು ಶ್ರೀಗಳು ತಿಳಿಸಿದರು.

  ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ಹಾಗೂ ಸಂಸ್ಥೆಯ ಗೌರವಾಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಮಾತನಾಡಿದರು. ಮಂಡಳಿ ವತಿಯಿಂದ ಪ್ರತಿ ವರ್ಷ ಸಾಮಾಜಿಕ, ಧಾರ್ಮಿಕ, ಶಿಕ್ಷಣ, ಯಕ್ಷಗಾನ ರಂಗಗಳ ಸಾಧಕರಿಗೆ 10 ಪ್ರಶಸ್ತಿಗಳಂತೆ ಈವರೆಗೆ 150 ಕಲಾವಿದರಿಗೆ 1.80 ಲಕ್ಷ ರೂ.ದತ್ತಿ ನಿಧಿಯೊಂದಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಎಂದು ಮಂಡಳಿಯ ಅಧ್ಯಕ್ಷ ಎಚ್.ಪ್ರಕಾಶ ಶಾನುಭಾಗ್ ತಿಳಿಸಿದರು.

  ಕಲಾ ವಿಮರ್ಶಕ ಪ್ರೊ.ಎಸ್.ವಿ.ಉದಯ ಕುಮಾರ್ ಶೆಟ್ಟಿ ಅಭಿನಂದನಾ ಭಾಷಣ ಮಾಡಿದರು. ಸ್ವಾಗತ ಸಮಿತಿ ಗೌರವಾಧ್ಯಕ್ಷ ಭುವನಪ್ರಸಾದ್ ಹೆಗ್ಡೆ, ಕಲಾಭಿಮಾನಿ ನರಹರಿ ಬಿ., ವಿಟ್ಲಜೋಶಿ ಪ್ರತಿಷ್ಠಾನದ ಡಾ.ಹರೀಶ್ ಜೋಶಿ, ಮಂಡಳಿ ಸ್ಥಾಪಕಾಧ್ಯಕ್ಷ ಉಪೇಂದ್ರ ನಾಯಕ್, ಪ್ರಧಾನ ಕಾರ್ಯದರ್ಶಿ ಹರಿಶ್ಚಂದ್ರ ಬಿ., ಎಸ್.ಅನಂತ ನಾಯ್ಕ, ಶಂಕರ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ನಂತರ ಬಾಲಕಲಾವಿದರಿಂದ ವೀರಮಣಿ ಕಾಳಗ ಯಕ್ಷಗಾನ ಪ್ರದರ್ಶನಗೊಂಡಿತು.

  ಪ್ರಶಸ್ತಿ ಪ್ರದಾನ

  ವಿವಿಧ ಕ್ಷೇತ್ರ ಕಲಾ ಸಾಧಕರಾದ ರಾಮಕೃಷ್ಣ ಭಟ್ ಯಲ್ಲಾಪುರ, ಕೆ.ಎಸ್.ಮಂಜುನಾಥ ಹರಿಹರ, ಸುಬ್ರಮಣ್ಯ ಪ್ರಸಾದ್ ಮುದ್ರಾಡಿ, ಸುಧೀರ್‌ರಾಜ್ ಕೆ.ನಿಟ್ಟೆ, ಬಗ್ವಾಡಿ ಕೃಷ್ಣಮೂರ್ತಿ ಭಟ್ ಇಂದ್ರಾಳಿ, ನಿರ್ಮಲಾ ವಾಸುದೇವ ಪೈ ಗುಂಡಿಬೈಲು, ಲಲಿತಾ ಸತೀಶ್ ಎನ್. ಮಣಿಪಾಲ, ವಿದುಷಿ ಪಾವನಾ ಬಿ. ಆಚಾರ್ ಮಣಿಪಾಲ, ಈಶ್ವರ ಮಣಿಪಾಲ ಇವರಿಗೆ ಶ್ರೀಮಿತ್ರ ಯಕ್ಷಗಾನ ಮಂಡಳಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

  ಕಳೆದ 40 ವರ್ಷಗಳಿಂದ ಕಲಾಸೇವೆಗೈಯುತ್ತಿರುವ ಮಿತ್ರ ಯಕ್ಷಗಾನ ಮಂಡಳಿಯ ಕಲಾರಾಧನೆ ಮಾದರಿಯಾಗಿದೆ. ಕಲಾರಾಧಕರ ಪ್ರೋತ್ಸಾಹದಿಂದಾಗಿ ಮಾತ್ರ ಇದು ಸಾಧ್ಯವಾಗಬಲ್ಲದು.
  -ಡಾ.ತಲ್ಲೂರು ಶಿವರಾಮ ಶೆಟ್ಟಿ
  ತಲ್ಲೂರು ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts