ಹೆಣ್ಣುಮಕ್ಕಳೇ ಸ್ಟ್ರಾಂಗು ಗುರೂ… ಅಪಘಾತಕ್ಕೀಡಾದ ಯುವಕರನ್ನು ಆಸ್ಪತ್ರೆಗೆ ಕರೆದೊಯ್ದ ನಟಿಯರು

IMG_7270
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಸಾಮಾನ್ಯವಾಗಿ ಅಪಘಾತ ಸಂಭವಿಸಿದರೆ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಬದಲು ಮೊಬೈಲ್ ಹಿಡಿದು ವಿಡಿಯೋ ಮಾಡುವವರೇ ಹೆಚ್ಚು. ಅಥವಾ ಆಸ್ಪತ್ರೆ, ಪೊಲೀಸರ ಉಸಾಬರಿ ನಮಗೇಕೆ ಅಂತ ಸುಮ್ಮನಿರುವವರಿಗೂ ಕಡಿಮೆಯಿಲ್ಲ. ಹೀಗಿರುವಾಗ ಚಾಮುಂಡೇಶ್ವರಿ ತಾಯಿ ದರ್ಶನ ಪಡೆಯಲು ಮೈಸೂರಿಗೆ ಹೊರಟಿದ್ದ ನಟಿಯರು, ಅಪಘಾತಕ್ಕೀಡಾಗಿದ್ದ ಇಬ್ಬರು ಯುವಕರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಆ ಮೂಲಕ ‘ಲಕ್ಷಣ’ ಧಾರಾವಾಹಿಯ ನಟಿಯರಾದ ಪ್ರಿಯಾ ಶಠಮರ್ಷಣ, ವಿಜಯಲಕ್ಷ್ಮಿ, ಸುಕೃತಾ ಮತ್ತು ಶೃತಿ ಎಲ್ಲರಿಗೂ ಮಾದರಿಯಾಗಿದ್ದಾರೆ.

ಈ ಬಗ್ಗೆ ಪ್ರಿಯಾ, ‘ಇತ್ತೀಚೆಗಷ್ಟೆ ಮೈಸೂರಿಗೆ ಹೋಗುತ್ತಿದ್ದಾಗ, ಕುಂಬಳಗೋಡು ಬಳಿ ಒನ್ ವೇನಲ್ಲಿ ಬರುತ್ತಿದ್ದ ಕ್ಯಾಂಟರ್‌ಗೆ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ರಸ್ತೆಗೆ ಬಿದ್ದರು. ತಕ್ಷಣ ಕಾರ್ ನಿಲ್ಲಿಸಿ, ಹೋಗಿ ನೋಡಿದರೆ ಇಬ್ಬರೂ ರಕ್ತದ ಮಡುವಿನಲ್ಲಿದ್ದರು. ಅಲ್ಲಿದ್ದವರು ಇಬ್ಬರನ್ನೂ ಮುಟ್ಟಲು ಹೆದರುತ್ತಿದ್ದರು. ಮತ್ತೊಂದೆಡೆ ಟ್ರಾಫಿಕ್ ಜಾಮ್ ಬೇರೆ. ವಿಜಯಲಕ್ಷ್ಮಿ ಟ್ರಾಫಿಕ್ ಕ್ಲಿಯರ್ ಮಾಡತೊಡಗಿದರು. ಸುಕೃತಾ ಹಲವು ಬಾರಿ ಆ್ಯಂಬುಲೆನ್ಸ್‌ಗೆ ಕರೆ ಮಾಡಿ, ಅರ್ಧ ಗಂಟೆ ಕಾದರೂ ಬರಲಿಲ್ಲ. ಮತ್ತೊಂದೆಡೆ ತೀವ್ರ ರಕ್ತಸ್ರಾವದಿಂದ ಇಬ್ಬರೂ ವಿಲವಿಲ ಒದ್ದಾಡತೊಡಗಿದರು. ಇನ್ನು ಹೆಚ್ಚು ಸಮಯ ಬಿಟ್ಟರೆ, ಉಳಿಯುವುದೇ ಕಷ್ಟ ಅಂತನ್ನಿಸಿ, ನಾವೇ ಸೇರಿ ಅವರನ್ನು ಕಾರಿನಲ್ಲಿ ಕೂರಿಸಿದೆವು. ನಾನು ಕಾರು ಚಲಾಯಿಸಿಕೊಂಡು ಸಮೀಪದ ಸಾಯಿಕೃಪ ಆಸ್ಪತ್ರೆಗೆ ಕರೆದುಕೊಂಡು ಹೋದೆ. ನಂತರ ಅಲ್ಲಿಗೆ ಶೃತಿ, ವಿಜಯಕ್ಷ್ಮಿ ಮತ್ತು ಸುಕೃತಾ ಬಂದರು. ಚಾಮುಂಡಿ ತಾಯಿಯ ದರ್ಶನ ಪಡೆದು ವಾಪಸ್ ಬರುವಾಗ ಮತ್ತೆ ಆಸ್ಪತ್ರೆಗೆ ಹೋಗಿ ಯುವಕರ ಬಗ್ಗೆ ವಿಚಾರಿಸಿದೆವು. ಒಬ್ಬರ ತಲೆಗೆ ಪೆಟ್ಟು ಬಿದ್ದು ಐಸಿಯುನಲ್ಲಿದ್ದರೆ, ಮತ್ತೊಬ್ಬ ಯುವಕನಿಗೆ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡುತ್ತಿದ್ದರು’ ಎಂದು ಘಟನೆಯ ಬಗ್ಗೆ ಮಾಹಿತಿ ನೀಡುತ್ತಾರೆ.

ಜತೆಗೆ ‘ಹೆದರಿಕೊಳ್ಳುವುದರಲ್ಲಿ ಅರ್ಥವಿಲ್ಲ. ಆ ಜಾಗದಲ್ಲಿ ಪರಿಚಯದವರು ಇದ್ದರೆ, ಹಿಂದೆ ಮುಂದೆ ಯೋಚಿಸದೇ ಸಹಾಯಕ್ಕೆ ಧಾವಿಸುತ್ತೇವೆ. ಯಾರಿಗೇ ಸಮಸ್ಯೆ ಆದರೂ, ಅದೇ ರೀತಿಯ ಧೈರ್ಯ ಇರಬೇಕು. ಮನುಷ್ಯರಾಗಿ ನೋವಿನಲ್ಲಿರುವವರಿಗೆ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ’ ಎನ್ನುತ್ತಾರೆ ಪ್ರಿಯಾ. ‘ಚೇಸ್’, ‘ಸೈಡ್‌ವಿಂಗ್’ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿರುವ ಪ್ರಿಯಾ ಸದ್ಯ ‘ಭೀಮ’ ಚಿತ್ರದಲ್ಲಿ ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net