'ಕೆಜಿಎಫ್ 2' ಚಿತ್ರದ ಆಡಿಯೋ ಹಕ್ಕು ಲಹರಿ ಮಡಿಲಿಗೆ ...

KGF 2 - Lahari - Final
Published on

ಬೆಂಗಳೂರು: ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ವಿಜಯ್ ಕಿರಂಗದೂರು ಅವರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ 'ಕೆಜಿಎಫ್ 2' ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ. ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದ್ದಾರೆ.‌

ಹಲವು ಭಾಷೆಗಳಲ್ಲಿ 'ಕೆಜಿಎಫ್ 2' ಚಿತ್ರ ನಿರ್ಮಾಣವಾಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಈ ಚಿತ್ರದ ಆಡಿಯೋ, ಡಿಜಿಟಲ್​ ಮತ್ತು ಸ್ಯಾಟಿಲೈಟ್​ ಹಕ್ಕುಗಳನ್ನು ಯಾರು ಮತ್ತು ಎಷ್ಟು ಮೊತ್ತಕ್ಕೆ ಖರೀದಿಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇತ್ತು. ಇದೀಗ ಆಡಿಯೋ ಹಕ್ಕುಗಳ ಮಾರಾಟದ ಕುರಿತಾಗಿ ಮಾಹಿತಿ ಬಂದಿದ್ದು, ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ‌ ಸಂಸ್ಥೆಯೇ ಖರೀದಿಸಿದೆ. 'ಕೆಜಿಎಫ್ 1' ಚಿತ್ರದ ಹಾಡುಗಳು ಸಹ ಲಹರಿ ಸಂಸ್ಥೆ ಮೂಲಕ ಹೊರಬಂದಿತ್ತು.

ಇಂದು ಬೆಳಗ್ಗೆ ನಿರ್ಮಾಪಕ ವಿಜಯ್ ಕಿರಂಗದೂರು ಹಾಗೂ ಲಹರಿ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಲಹರಿ ವೇಲು ಅವರು ತಿಳಿಸಿದ್ದಾರೆ.

'ಕೆಜಿಎಫ್​ 2' ಚಿತ್ರವು ಜುಲೈ 16ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ, ಲಾಕ್​ಡೌನ್​ನಿಂದಾಗಿ ಚಿತ್ರದ ಬಿಡುಗಡೆಗೆ ಇನ್ನಷ್ಟು ವಿಳಂಬವಾಗುತ್ತಿದ್ದು, ಹೊಸ ಬಿಡುಗಡೆ ದಿನಾಂಕ ಇನ್ನಷ್ಟೇ ಹೊರಬೀಳಬೇಕಿದೆ. ಚಿತ್ರದಲ್ಲಿ ಯಶ್​ ಜತೆಗೆ ಶ್ರೀನಿಧಿ ಶೆಟ್ಟಿ, ಸಂಜಯ್​ ದತ್​, ರವೀನಾ ಟಂಡನ್​ ಮುಂತಾದವರು ಅಭಿನಯಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net