ಶ್ರೇಯಸ್​ ಮಂಜು ಅಭಿನಯದ ಹೊಸ ಚಿತ್ರ 'ರಾಣಾ' ... ಜುಲೈ 07ಕ್ಕೆ ಮುಹೂರ್ತ

Raana - Final
Published on

ಬೆಂಗಳೂರು: ಯಶ್​ ಅಭಿನಯದಲ್ಲಿ ಎ. ಹರ್ಷ, 'ರಾಣಾ' ಎಂಬ ಚಿತ್ರವನ್ನು ನಿರ್ದೇಶಿಸುತ್ತಾರೆ ಎಂದು ಐದು ವರ್ಷಗಳ ಹಿಂದೆ ಸುದ್ದಿಯಾಗಿತ್ತು. ಕಾರಣಾಂತರಗಳಿಂದ, ಆ ಚಿತ್ರ ಸೆಟ್ಟೇರಲಿಲ್ಲ. ಈಗ ಅದೇ ಹೆಸರಿನ ಇನ್ನೊಂದು ಚಿತ್ರ ನಿರ್ಮಾಣವಾಗುತ್ತಿದೆ. ಯಶ್​ ಬದಲು ಶ್ರೇಯಸ್​ ಮಂಜು, 'ರಾಣಾ' ಆಗುತ್ತಿದ್ದಾರೆ ಎನ್ನುವುದು ವಿಶೇಷ.

‘ಪೊಗರು’ ನಂತರ ಧ್ರುವ ಸರ್ಜಾ ಅಭಿನಯದಲ್ಲಿ ನಂದಕಿಶೋರ್, ‘ದುಬಾರಿ’ ಎಂಬ ಚಿತ್ರ ನಿರ್ದೇಶಿಸಬೇಕಿತ್ತು. ಈಗ ಆ ಚಿತ್ರ ಸ್ವಲ್ಪ ಮುಂದಕ್ಕೆ ಹೋಗಿದ್ದು, ಆ ಜಾಗದಲ್ಲಿ ಹಿರಿಯ ನಿರ್ಮಾಪಕ ಕೆ. ಮಂಜು ಮಗ ಶ್ರೇಯಸ್ ಮಂಜು ಅಭಿನಯದಲ್ಲಿ ಇನ್ನೊಂದು ಹೊಸ ಚಿತ್ರವನ್ನು ಅವರು ನಿರ್ದೇಶಿಸುವುದಕ್ಕೆ ತಯಾರಿ ನಡೆಸಿದ್ದಾರೆ.

ಗುರುವಾರ ಬೆಳಿಗ್ಗೆ ರಾಜಾಜಿನಗರದ ಮೋದಿ ಆಸ್ಪತ್ರೆಯ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಚಿತ್ರದ ಟೈಟಲ್​ ಪೋಸ್ಟರ್​ ಬಿಡುಗಡೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಶ್ರೇಯಸ್​, ನಂದಕಿಶೋರ್​, ಹಿರಿಯ ನಿರ್ಮಾಪಕ ಕೆ. ಮಂಜು ಮುಂತಾದವರು ಹಾಜರಿದ್ದರು.

ಶ್ರೇಯಸ್‌ಗೆ ನಾಯಕಿಯಾಗಿ ‘ಏಕ್ ಲವ್ ಯಾ’ ಚಿತ್ರದ ರೀಷ್ಮಾ ನಾಣಯ್ಯ ನಟಿಸುತ್ತಿದ್ದಾರೆ. ಜತೆಗೆ ಒಂದಿಷ್ಟು ಹೊಸ ಪ್ರತಿಭೆಗಳನ್ನು ಈ ಚಿತ್ರದ ಮೂಲಕ ಪರಿಚಯಿಸಲಾಗುತ್ತಿದೆ. ಈಗಾಗಲೇ ಆಡಿಷನ್​ ಪ್ರಕ್ರಿಯೆ ಮುಗಿದಿದ್ದು, ಜುಲೈ 07ರಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಇದೇ ತಿಂಗಳು ಚಿತ್ರೀಕರಣ ಪ್ರಾರಂಭವಾಗಲಿದ್ದು, ಮುಂದಿನ ಎರಡು ತಿಂಗಳ ಕಾಲ ಸತತ ಚಿತ್ರೀಕರಣ ನಡೆಯಲಿದೆ.

'ರಾಣಾ' ಚಿತ್ರವನ್ನು ಗುಜ್ಜಾಲ್ ಪುರುಷೋತ್ತಮ್ ನಿರ್ಮಿಸುತ್ತಿದ್ದಾರೆ. ಇದಕ್ಕೂ ಮುನ್ನ, ‘ಟಗರು’ ಚಿತ್ರಕ್ಕೆ ಸಹನಿರ್ಮಾಪಕರಾಗಿದ್ದ ಅವರು, ಈ ಚಿತ್ರದ ಮೂಲಕ ಸ್ವತಂತ್ರ ನಿರ್ಮಾಪಕರಾಗುತ್ತಿದ್ದಾರೆ. ಶೇಖರ್ ಚಂದ್ರು ಛಾಯಾಗ್ರಹಣ ಮಾಡಿದರೆ, ಚಂದನ್​ ಶೆಟ್ಟಿ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net