

ಬೆಂಗಳೂರು: ಬೀದಿ ನಾಯಿಗಳು ಮನೆ ಮುಂದೆ ಬೊಗಳುತ್ತವೆ ಎಂದು ಮಹಿಳೆ ನಾಯಿಗಳ ಮೇಲೆ ಏರ್ಗನ್ನಿಂದ ದಾಳಿ ನಡೆಸಿದ್ದು, ಕೊಡಿಗೇಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಸಹಕಾರ ನಗರದ ನಿವಾಸಿ ಫಸನಾ ಅಲಿ ಎಂಬುವರು ದೂರು ನೀಡಿದ್ದಾರೆ.ಈ ಆಧಾರದ ಮೇಲೆ ಸಹಕಾರನಗರ ಶಾಂತಿವನ ಬಡಾವಣೆ ನಿವಾಸಿ ವೈಷ್ಣವಿ ಎಂಬುವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಫಸನಾ ಅಲಿ ಮಾ. 24ರಂದು ಮಧ್ಯಾಹ್ನ ಶಾಂತಿವನ ಬಡಾವಣೆಯಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕಿದ್ದಾಗ ಅಲ್ಲಿನ ನಿವಾಸಿಗಳು ಅವರ ಜತೆ ಜಗಳವಾಡಿದ್ದರು. ನಾಯಿಗಳು ಇಲ್ಲೇ ಸುತ್ತಾಡುತ್ತಾ ಸ್ಥಳೀಯರ ಮೇಲೆ ದಾಳಿ ಮಾಡುತ್ತವೆ. ಮಕ್ಕಳು ಮನೆಯಿಂದ ಹೊರಬರಲು ಆತಂಕಪಡುತ್ತಾರೆ ಎಂದು ಬೆದರಿಸಿದ್ದರು. ಈ ಬಗ್ಗೆ ಬಿಬಿಎಂಪಿಗೆ ದೂರು ನೀಡಿ ಎಂದು ಫಸನಾ ಪ್ರತಿಕ್ರಿಯಿಸಿದ್ದರು.
ಇದರಿಂದ ಆಕ್ರೋಶಗೊಂಡ ವೈಷ್ಣವಿ, ಮನೆಯಲ್ಲಿದ್ದ ಏರ್ಗನ್ ತಂದು ನಾಯಿಗಳ ಮೇಲೆ ದಾಳಿ ನಡೆಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರಿಂದ ಈ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.