ಒಬ್ಬನ ಕುಡಿತದ ಚಟಕ್ಕೆ 20 ಅಮಾಯಕರು ಬಲಿ: ಜನರಿಗೆ ಮಹತ್ವದ ಕರೆ ಕೊಟ್ಟ ಹುಬ್ಬಳ್ಳಿ ಹುಲಿ ವಿಸಿ ಸಜ್ಜನರ್..! Kurnool Bus Accident

Kurnool Bus Accident
Published on

Kurnool Bus Accident : ಶುಕ್ರವಾರ (ಅ.24) ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಜವರಾಯ ತನ್ನ ಅಟ್ಟಹಾಸ ( Kurnool Bus Accident ) ಮೆರೆದು 20 ಮಂದಿಯನ್ನು ಬಲಿಪಡೆದುಕೊಂಡಿದ್ದು ಈಗಲೂ ದುಸ್ವಪ್ನವಾಗಿ ಕಾಡುತ್ತಿದೆ. ಖಾಸಗಿ ಬಸ್​ ಒಂದು ಬೈಕ್​ ಎಳೆದೊಯ್ದ ಪರಿಣಾಮ ಇಡೀ ಬಸ್​ ಬೆಂಕಿಗೆ ಆಹುತಿಯಾಯಿತು. ಹೈದರಾಬಾದ್​ನಿಂದ ಬೆಂಗಳೂರಿಗೆ ಬರುತ್ತಿದ್ದ ಎಸಿ ಕೋಚ್​​ ಬಸ್ಸಿನಲ್ಲಿ ಅಗ್ನಿ ಹೊತ್ತಿಕೊಂಡ ಕಾರಣ 20 ಪ್ರಯಾಣಿಕರು ಸುಟ್ಟು ಕರಕಲಾದರು.

ಈ ಪ್ರಕರಣದಲ್ಲಿ ಬಸ್​ ಚಾಲಕ ಮತ್ತು ಬೈಕ್​ ಸವಾರರು ಇಬ್ಬರದು ತಪ್ಪಿದೆ. ಕುಡಿದು ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡಿದರೆ ಏನು ಪರಿಣಾಮ ಬೀರುತ್ತದೆ ಎಂಬ ಸಂದೇಶವನ್ನು ಈ ಪ್ರಕರಣ ತಿಳಿಸಿದೆ. ಕುಡಿತದ ಚಟ ಕೇವಲ ಕುಡುಕನ ಮನೆಯನ್ನು ಮಾತ್ರ ಹಾಳು ಮಾಡುವುದಿಲ್ಲ, ಇಡೀ ಸಮಾಜಕ್ಕೆ ಮಾರಕ ಎಂಬುದನ್ನು ಕರ್ನೂಲ್​ ಬಸ್​ ದುರಂತ ತಿಳಿಸಿದೆ. ವಿವಿಧ ಕನಸುಗಳನ್ನು ಹೊತ್ತುಕೊಂಡು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ತಾವೆಲ್ಲರೂ ಸುರಕ್ಷಿತವಾಗಿ ಗುರಿ ತಲುಪುತ್ತೇವೆ ಎಂಬ ನಂಬಿಕೆಯಿಂದ ನಿದ್ರೆಗೆ ಜಾರಿದ್ದರು. ಆದರೆ, ಓರ್ವನ ಕುಡಿತದ ಚಟ 20 ಮಂದಿಯ ಪ್ರಾಣವನ್ನೇ ಕಸಿದುಕೊಂಡಿತು.

ಬೈಕ್​ ಸವಾರ ಕಂಠಪೂರ್ತಿ ಕುಡಿದು ಮದ್ಯದ ಅಮಲಿನಲ್ಲಿ ತೇಲಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಬಯಲಾಗಿದೆ. ಪೆಟ್ರೋಲ್​ ಬಂಕ್​ನಲ್ಲಿ ಇಂಧನ ತುಂಬಿಸುವಾಗ ಮದ್ಯದ ಅಮಲಿನಲ್ಲಿ ಬೈಕ್​ ಸವಾರ ವಿಚಿತ್ರವಾಗಿ ವರ್ತಿಸಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಈ ದುರಂತ ನಡೆದಿದೆ. ಆತ ಕುಡಿಯದೇ ಇದ್ದಿದ್ದರೆ ಅಷ್ಟು ಜನರ ಪ್ರಾಣವೇ ಹೋಗುತ್ತಿರಲಿಲ್ಲ. ಕುಡಿದ ಮೇಲೆ ವಾಹನ ಸವಾರಿ ಮಾಡಬಾರದು ಎಂಬ ಕನಿಷ್ಠ ಪ್ರಜ್ಞೆ ಇದ್ದಿದ್ದರೂ ಈ ದುರಂತ ಘಟಿಸುತ್ತಿರಲಿಲ್ಲ. ಒಟ್ಟಾರೆ, ಒಬ್ಬನ ತಪ್ಪು 20 ಮಂದಿಯ ಜೀವ ಕಸಿದಿದೆ. ಬಸ್​ ಚಾಲಕನು ಕೂಡ ಇಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಬೇಕಾಗಿತ್ತು. ಆದರೆ, ವಿಧಿಯ ಘೋರ ಆಟದಲ್ಲಿ ಭೀಕರ ಘಟನೆಯೊಂದು ಘಟಿಸಿ ಹೋಗಿದೆ.

ಇನ್ನಾದರೂ ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾದ ಅವಶ್ಯಕತೆ ಇದೆ. ಯಾವುದಾದರೂ ದುರಂತ ನಡೆದಾಗ ಕೆಲವು ದಿನಗಳವರೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಸರ್ಕಾರ ದಿನ ಕಳೆದಂತೆ ಅದನ್ನು ಮರೆತುಬಿಡುತ್ತದೆ. ಪೊಲೀಸರು ಕೂಡ ಕೆಲವೊಮ್ಮೆ ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸುವುದಿಲ್ಲ. ಈಗಲಾದರೂ ಎಚ್ಚೆತ್ತುಕೊಂಡರೆ ಇಂತಹ ಪ್ರಕರಣಗಳು ಮರುಕಳಿಸುವುದನ್ನು ತಪ್ಪಿಸಬಹುದು.

ಭಯೋತ್ಪಾದಕರು

ಈ ದುರಂತದ ಬಗ್ಗೆ ಹೈದರಾಬಾದ್ ಪೊಲೀಸ್​ ಆಯುಕ್ತರಾದ ಕನ್ನಡಿಗ ವಿಸಿ ಸಜ್ಜನರ್ ಪ್ರತಿಕ್ರಿಯಿಸಿದ್ದಾರೆ. ಕುಡಿದು ವಾಹನ ಚಲಾಯಿಸಿ ಅಮಾಯಕರ ಜೀವ ತೆಗೆಯುವವರು ಭಯೋತ್ಪಾದಕರು ಮತ್ತು ಮಾನವ ಬಾಂಬ್‌ಗಳಲ್ಲದೆ ಬೇರೇನೂ ಅಲ್ಲ ಎಂದು ಟ್ವೀಟ್​ ಮಾಡಿದ್ದಾರೆ. ಸಜ್ಜನರ್ ಅವರ ಕಾಮೆಂಟ್​ಗಳು ಇದೀಗ ಭಾರಿ ಸಂಚಲನ ಮೂಡಿಸುತ್ತಿದೆ.

ಒಬ್ಬ ವ್ಯಕ್ತಿಯ ನಿರ್ಲಕ್ಷ್ಯ 20 ಜನರ ಪ್ರಾಣವನ್ನು ಬಲಿ ತೆಗೆದುಕೊಂಡಿತು. ಕುಡಿದು ವಾಹನಗಳಲ್ಲಿ ರಸ್ತೆಗೆ ಬಂದು ಅಮಾಯಕರ ಪ್ರಾಣ ತೆಗೆಯುವವರು ಭಯೋತ್ಪಾದಕರು ಮತ್ತು ಮಾನವ ಬಾಂಬ್‌ಗಳಲ್ಲದೇ ಇನ್ನೇನು ಆಗಲು ಸಾಧ್ಯ. ಅವರು ಮಾಡಿದ ಈ ತಪ್ಪಿನಿಂದ ಎಷ್ಟು ಕುಟುಂಬಗಳು ಮಾನಸಿಕ ಯಾತನೆಯಿಂದ ಬಳಲುತ್ತಿವೆ. ನಿಮ್ಮ ಮೋಜು ಮತ್ತು ಮನರಂಜನೆಗಾಗಿ ಇತರರ ಪ್ರಾಣವನ್ನು ತೆಗೆದುಕೊಳ್ಳುವ ಹಕ್ಕನ್ನು ನಿಮಗೆ ಯಾರು ಕೊಟ್ಟರು!?.

ಜನರಿಗೆ ಕರೆ ಕೊಟ್ಟ ಸಜ್ಜನರ್​

ನಮ್ಮ ಸಮಾಜದಲ್ಲಿ ಸುತ್ತುತ್ತಿರುವ ಇಂತಹ ಭಯೋತ್ಪಾದಕರು ಮತ್ತು ಮಾನವ ಬಾಂಬ್‌ಗಳ ಬಗ್ಗೆ ಜಾಗರೂಕರಾಗಿರಿ. ತಕ್ಷಣ ಅವರ ಚಲನವಲನಗಳನ್ನು ಪೊಲೀಸ್​ ಸಹಾಯವಾಣಿ 100 ಅಥವಾ ಸ್ಥಳೀಯ ಪೊಲೀಸರಿಗೆ ವರದಿ ಮಾಡಿ. ನಾವು ಅವರನ್ನು ಹೀಗೆ ಬಿಟ್ಟರೆ, ಅವರು ರಸ್ತೆಗೆ ಬಂದು ಅನೇಕ ಜನರನ್ನು ಕೊಲ್ಲುತ್ತಾರೆ. ನಾವು ಅವರನ್ನು ಒಂಟಿಯಾಗಿ ಬಿಟ್ಟರೆ, ಅನೇಕ ಜೀವಗಳು ಕಳೆದುಕೊಳ್ಳಬೇಕಾಗುತ್ತದೆ ಎಂದು ವಿಸಿ ಸಜ್ಜನರ್​ ಅವರು ಪೋಸ್ಟ್ ಮಾಡಿದ್ದಾರೆ.

ಯಾರು ಈ ಸಜ್ಜನರ್​?

ಪ್ರಸ್ತುತ ಹೈದರಾಬಾದ್​ ಪೊಲೀಸ್​ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿರುವ ಸಜ್ಜನರ್​ ಅವರು ಈ ಹಿಂದೆ ಟಿಎಸ್​ಆರ್​ಟಿಸಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು. ಅಲ್ಲದೆ, ಸೈಬರಾಬಾದ್​ ಆಯುಕ್ತಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಜ್ಜನರ ಅವರು ಸೈಬರಾಬಾದ್‌ ಆಯುಕ್ತರಾಗಿದ್ದಾಗ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ ಹಲವಾರು ಸೇವಾ ಕಾರ್ಯಕ್ರಮಗಳನ್ನು ಕೈಗೊಂಡರು. ಸೈಬರಾಬಾದ್ ಪೊಲೀಸ್ ಕಮೀಷನರೇಟ್‌ನಲ್ಲಿ ಹಲವಾರು ಸುಧಾರಣೆಗಳನ್ನು ಪ್ರಾರಂಭಿಸಿದರು ಮತ್ತು ಕೋವಿಡ್ -19 ಮೊದಲ ಅಲೆಯ ಸಮಯದಲ್ಲಿ ವಲಸೆ ಕಾರ್ಮಿಕರು ತಮ್ಮ ಮನೆಗಳನ್ನು ತಲುಪಲು ಸಹಾಯ ಮಾಡುವಲ್ಲಿ ಮುಂಚೂಣಿಯಲ್ಲಿದ್ದರು. ಹೈದರಾಬಾದ್​ನ ಪಶುವೈದ್ಯೆಯನ್ನು ಹತ್ಯೆ ಮಾಡಿದವರನ್ನು ಎನ್​ಕೌಂಟರ್​ ಮಾಡಿದ ಪ್ರಕರಣದಲ್ಲಿ ವಿಶ್ವನಾಥ್​ ಸಜ್ಜನರ್ ಭಾರಿ ಸುದ್ದಿಯಾದರು. ಅವರ​ ಸಾಹಸವನ್ನು ರಾಷ್ಟ್ರದೆಲ್ಲೆಡೆ ಜನರು ಶ್ಲಾಘಿಸಿದರು. ವಿಶ್ವನಾಥ್​ ಅವರು ಮೂಲತಃ ಕರ್ನಾಟಕದ ಹುಬ್ಬಳ್ಳಿ ಮೂಲದವರು.

ಏನಿದು ಘಟನೆ?

ಶುಕ್ರವಾರ (ಅ.24) ಮುಂಜಾನೆ ಹೈದರಾಬಾದ್‌ನಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಭೀಕರ ಅಪಘಾತಕ್ಕೀಡಾಯಿತು. ರಸ್ತೆ ಮೇಲೆ ಬಿದ್ದಿದ್ದ ಬೈಕ್​ಗೆ ಡಿಕ್ಕಿ ಹೊಡೆದ ಬಳಿಕ ಬಸ್,​ ಬೈಕನ್ನು ಸುಮಾರು 300 ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿದೆ. ಈ ವೇಳೆ ಬೆಂಕಿಯ ಕಿಡಿ ಹರಡಿ, ಇಡೀ ಬಸ್ ಬೆಂಕಿಗೆ ಆಹುತಿಯಾಯಿತು. ಈ ಅಪಘಾತದಲ್ಲಿ ಇಬ್ಬರು ಮಕ್ಕಳು ಮತ್ತು ಆರು ಮಹಿಳೆಯರು ಸೇರಿದಂತೆ ಒಟ್ಟು 19 ಜನರು ಸಜೀವ ದಹನವಾದರು. ಅಪಘಾತದ ಸಮಯದಲ್ಲಿ ಇಬ್ಬರು ಚಾಲಕರು ಮತ್ತು ನಾಲ್ವರು ಮಕ್ಕಳು ಸೇರಿದಂತೆ ಒಟ್ಟು 46 ಜನರು ಬಸ್‌ನಲ್ಲಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net