

ಬೆಂಗಳೂರು: ಮದುವೆ ಎನ್ನುವುದು ಇಬ್ಬರು ವ್ಯಕ್ತಿಗಳ ನಡುವಿನ ನಂಬಿಕೆಯಿಂದ ರೂಪುಗೊಂಡು ಜೀವನಪರ್ಯಂತ ಉಳಿಯುವ ಬೆಲೆ ಕಟ್ಟಲಾಗದ ಸಂಬಂಧವಾಗಿದೆ. ಆದರೆ, ವಿವಾಹೇತರ ಸಂಬಂಧಗಳು ( Extramarital affairs ) ಇಂತಹ ಪವಿತ್ರ ಸಂಬಂಧಗಳಿಗೆ ಇಂದು ಪ್ರಮುಖ ಬೆದರಿಕೆಯಾಗಿದೆ. ಹೀಗಾಗಿ ಇಂದು ಮದುವೆ ಎಂಬ ಪವಿತ್ರ ಬಂಧಕ್ಕೆ ಇಂದು ಅರ್ಥವಿಲ್ಲದಂತಾಗಿದೆ.
ಜೀವನಪೂರ್ತಿ ಜತೆಯಾಗಿ ಹೆಜ್ಜೆ ಹಾಕುತ್ತೇನೆಂದು ಹೇಳಿ ಸಪ್ತಪದಿ ತುಳಿಯುವ ಜೋಡಿ, ಕೆಲವೇ ವರ್ಷಗಳಲ್ಲಿ ಬೇರೆಯಾಗುತ್ತವೆ. ಬಹುತೇಕರ ದಾಂಪತ್ಯ ಜೀವನ, ವಿವಾಹೇತರ ಸಂಬಂಧಗಳಿಂದಲೇ ನಾಶವಾಗಿವೆ. ವೈಯಕ್ತಿಕವಾಗಿ ಗೊತ್ತಿರುವವರು, ಒಂದೇ ಕಚೇರಿಯಲ್ಲಿ ಕೆಲಸ ಮಾಡುವವರು ಮತ್ತು ಸಾಮಾಜಿಕ ಜಾಲತಾಣದ ಮೂಲಕ ಭೇಟಿಯಾಗುವ ಪುರುಷರು ಮತ್ತು ಮಹಿಳೆಯರು ಪರಸ್ಪರ ಹತ್ತಿರವಾಗುತ್ತಾರೆ. ಸ್ನೇಹ ಬೆಳೆದಂತೆ ಅದು ಪ್ರೀತಿಯಾಗಿ ಬದಲಾಗಲು ಪ್ರಾರಂಭಿಸುತ್ತದೆ. ಮೊಬೈಲ್ ಫೋನ್ ಮೂಲಕ ಚಾಟ್ ಮಾಡುವುದರಿಂದ ಸಂಬಂಧ ಇನ್ನಷ್ಟು ಗಟ್ಟಿಯಾಗುತ್ತದೆ.
ಇತ್ತೀಚಿನ ದಿನಗಳಲ್ಲಿ ಈ ವಿವಾಹೇತರ ಸಂಬಂಧಗಳು ಹೆಚ್ಚಾಗಿವೆ. ಇದರಿಂದಾಗಿ ನಗರದಲ್ಲಿ ಕೊಲೆಗಳ ಸಂಖ್ಯೆಯೂ ಹೆಚ್ಚಳವಾಗಿರುವುದು ಬಹಳ ಕಳವಳಕಾರಿ ವಿಷಯವಾಗಿದೆ. ಈ ಪ್ರಕ್ರಿಯೆಯಲ್ಲಿ, ಕೆಲವರು ತಮ್ಮ ಸಂಗಾತಿಯನ್ನು ಕೊಲೆ ಮಾಡಲು ಹಿಂಜರಿಯುವುದಿಲ್ಲ. ನವವಿವಾಹಿತ ದಂಪತಿಯಿಂದ ಹಿಡಿದು ಮೂರು ದಶಕಗಳಿಂದ ಒಟ್ಟಿಗೆ ವಾಸಿಸುತ್ತಿರುವವರವರೆಗೆ ಎಲ್ಲಾ ವಯಸ್ಸಿನ ಜನರು ಈ ಹಾದಿಯನ್ನು ಹಿಡಿಯುತ್ತಿದ್ದಾರೆ ಎಂದು ಅಂಕಿ-ಅಂಶಗಳು ತೋರಿಸುತ್ತವೆ.
ತಾಜಾ ಸಂಗತಿ ಏನೆಂದರೆ, ಭಾರತದಲ್ಲಿ ಇತ್ತೀಚೆಗೆ ಸಮೀಕ್ಷೆಯೊಂದು ನಡೆದಿದ್ದು, ವಿವಾಹೇತರ ಸಂಬಂಧಗಳು ಯಾವ ನಗರಗಳಲ್ಲಿ ಹೆಚ್ಚಿವೆ ಎಂಬುದನ್ನು ಬಹಿರಂಗಪಡಿಸಿದೆ. ವಿವಾಹೇತರ ಸಂಬಂಧದ ಡೇಟಿಂಗ್ ಆ್ಯಪ್ ಗ್ಲೀಡೆನ್ ನಡೆಸಿದ ಸಮೀಕ್ಷೆಯಲ್ಲಿ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ.
ವಿವಾಹೇತರ ಸಂಬಂಧಗಳ ವಿಷಯದಲ್ಲಿ ಬೆಂಗಳೂರು ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಮುಂಬೈ ಇದ್ದರೆ, ಕೊಲ್ಕತ್ತ ಮೂರನೇ ಸ್ಥಾನದಲ್ಲಿದೆ. ಇನ್ನು ರಾಷ್ಟ್ರ ರಾಜಧಾನಿ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಪುಣೆ ಐದನೇ ಸ್ಥಾನದಲ್ಲಿದೆ ಎಂದು ಗ್ಲೀಡೆನ್ ತಿಳಿಸಿದೆ.
ಇದಲ್ಲದೆ, ವಿವಾಹೇತರ ಸಂಬಂಧಗಳನ್ನು ಹೊಂದಿರುವವರಲ್ಲಿ ಹೆಚ್ಚಿನವರು ಐಟಿ ಉದ್ಯೋಗಿಗಳು. ಕಾರ್ಯನಿರತ ಜೀವನ, ಹೆಚ್ಚಿನ ಒತ್ತಡ ಮತ್ತು ಆರ್ಥಿಕ ಸ್ಥಿರತೆಯ ಕೊರತೆಯಂತಹ ಅಂಶಗಳು ಅವರನ್ನು ವಿವಾಹೇತರ ಸಂಬಂಧಗಳ ಕಡೆಗೆ ತಿರುಗುವಂತೆ ಮಾಡುತ್ತಿವೆ ಎಂದು ಸಮೀಕ್ಷೆ ಹೇಳಿದೆ. ಕೆಲಸದ ಒತ್ತಡದಿಂದಾಗಿ ಕೆಲವರು ತಮ್ಮ ಕುಟುಂಬಗಳಿಗೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ. ಇದು ಸಂಘರ್ಷಗಳಿಗೆ ಕಾರಣವಾಗುತ್ತದೆ ಎಂದು ಸಮೀಕ್ಷೆ ಹೇಳಿದೆ.
ಇದಲ್ಲದೆ, ಸಂಗಾತಿಯು ತಮ್ಮ ವೈಯಕ್ತಿಕ ಆಸೆಗಳನ್ನು ಪೂರೈಸಲು ವಿಫಲವಾದಾಗ ಅದಕ್ಕಾಗಿ ಬೇರೆ ಜನರನ್ನು ಆಯ್ದುಕೊಳ್ಳುತ್ತಿದ್ದಾರೆ ಎಂದು ಗ್ಲಿಡೆನ್ ಹೇಳಿದೆ. ವಿವಾಹೇತರ ಸಂಬಂಧಗಳಿಂದಾಗಿ ದೇಶಾದ್ಯಂತ ವಿಚ್ಛೇದನ ಪಡೆಯುವ ಜನರ ಸಂಖ್ಯೆಯೂ ಗಮನಾರ್ಹವಾಗಿ ಹೆಚ್ಚಾಗಿದೆ. ಕೌಟುಂಬಿಕ ವಿವಾದಗಳಿಂದಾಗಿ ಕೊಲೆಗಳು ಸಹ ನಡೆಯುತ್ತಿವೆ ಎಂದು ವಿವರಿಸಲಾಗಿದೆ. ಈ ಒಂದು ಬೆಳವಣಿಗೆ ಭಾರತೀಯ ಕುಟುಂಬ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ.
ವಿವಾಹೇತರ ಸಂಬಂಧಗಳು ತಾತ್ಕಾಲಿಕ ಸಂತೋಷವನ್ನು ತಂದರು ಕೂಡ ಅವು ಅಂತಿಮವಾಗಿ ಅನೇಕ ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತವೆ ಮತ್ತು ಕೆಲವು ಜನರನ್ನು ದೊಡ್ಡ ದುರಂತಕ್ಕೂ ಸಿಲುಕುತ್ತಾರೆ. ಹೀಗಾಗಿ ಕೆಲಸ ಮತ್ತು ಜೀವನದ ಸಮತೋಲನದ ಮಹತ್ವದ ಬಗ್ಗೆ ಜಾಗೃತರಾಗಿರುವುದು ಉತ್ತಮ ಎಂದು ತಜ್ಞರು ಸೂಚಿಸಿದ್ದಾರೆ. (ಏಜೆನ್ಸೀಸ್)