

ಕುಂದಾಪುರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕಾರ್ಯಕ್ರಮ ವಿಚಾರದಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಬೈಂದೂರು ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ್ ಎಂ.ಜಿ. ಅವರನ್ನು ಅಮಾನತುಗೊಳಿಸಲಾಗಿದೆ.
ಸೋಮವಾರ ಬೈಂದೂರಿನ ಮಲ್ಲಿಕಟ್ಟೆ ಹೊಸಾಡು ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸರ್ಕಾರಿ ಕಾರ್ಯಕ್ರಮದಲ್ಲಿ ಬೈಂದೂರು ವಲಯದ ಎಲ್ಲ ಶಿಕ್ಷಕರು, ಶಾಲಾ ಪೋಷಕರು, ವಿದ್ಯಾರ್ಥಿಗಳನ್ನೂ ಕರೆತರುವಂತೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮತ್ತು ಕ್ಷೇತ್ರ ಸಂಪನ್ಮೂಲ ಕೇಂದ್ರದ ಎಲ್ಲ ಸಿಬ್ಬಂದಿಯೂ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಶಿಕ್ಷಣಾಧಿಕಾರಿ ಮಂಜುನಾಥ್ ಸುತ್ತೋಲೆ ಹೊರಡಿದ್ದರು. ಬಿಇಒಆದೇಶದ ಪ್ರತಿ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಆದೇಶದ ವಿರುದ್ಧ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಸಿಎಂ ಉಡುಪಿ ಜಿಲ್ಲೆಗೆ ಬಂದ ದಿನವೇ ಈ ಕುರಿತು ದಿಗ್ವಿಜಯ ನ್ಯೂಸ್ನಲ್ಲಿ ಸುದ್ದಿ ಪ್ರಸಾರವಾಗಿತ್ತು.
ಕಡ್ಡಾಯ ಹಾಜರಾತಿ ಸುತ್ತೋಲೆ ಹೊರಡಿಸುವ ಮೂಲಕ ಕರ್ತವ್ಯ ಲೋಪವೆಸಗಿದ ಹಿನ್ನಲೆಯಲ್ಲಿ ಬೈಂದೂರು ಬಿಇಒ ಮಂಜುನಾಥ್ಗೆ ಅಮಾನತು ಶಿಕ್ಷೆಯಾಗಿದೆ. ಇದು ಸರ್ಕಾರಿ ನೌಕರರಿಗೆ ತರವಲ್ಲದ ವರ್ತನೆಯಾಗಿದ್ದು, ನಿಯಮ ಉಲ್ಲಂಘಿಸಿ ಕರ್ತವ್ಯ ಲೋಪ ಎಸಗಿರುವುದರಿಂದ ಅಮಾನತುಗೊಳಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಆದೇಶಿಸ ಪತ್ರದಲ್ಲಿ ಉಲ್ಲೇಖಿಸಿದೆ.