ಕುಂಬಳೆ: ಈ ವರ್ಷದ ಕುಂಬಳೆ ಉಪಜಿಲ್ಲಾ ಕೇರಳ ಶಾಲಾ ವಿಜ್ಞಾನೋತ್ಸವ ಅ.28 ಮತ್ತು 29ರಂದು ಕುಂಬಳೆ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಹಾಗೂ ಕುಂಬಳೆ ಜಿಎಸ್ಬಿಎಸ್ ಶಾಲೆಯಲ್ಲಿ ನಡೆಯಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಸಂಘಟನಾ ಸಮಿತಿ ಅಧ್ಯಕ್ಷೆ ಯು.ಪಿ.ತಾಹಿರಾ ಯೂಸುಫ್ ತಿಳಿಸಿದರು.
ಕುಂಬಳೆ ಉಪಜಿಲ್ಲೆಯ ಎಲ್ಪಿ, ಯುಪಿ, ಹೈಸ್ಕೂಲ್, ಹೈಯರ್ ಸೆಕೆಂಡರಿ ಸಹಿತ 88 ಶಾಲೆಗಳ ಸುಮಾರು 6,000 ವಿದ್ಯಾರ್ಥಿಗಳು ಎರಡು ದಿನಗಳ ಕಾಲ ನಡೆಯುವ ವಿಜ್ಞಾನ ಹಬ್ಬದಲ್ಲಿ ಪಾಲ್ಗೊಳ್ಳುವರು. ಮೊದಲ ದಿನ ವಿಜ್ಞಾನ ಮತ್ತು ಗಣಿತ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ. ಎರಡನೇ ದಿನ ಸಮಾಜವಿಜ್ಞಾನ, ಮಾಹಿತಿ ತಂತ್ರಜ್ಞಾನ ಮತ್ತು ಕೆಲಸದ ಅನುಭವ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.
ಸಂಘಟನಾ ಸಮಿತಿ , ಪ್ರಧಾನ ಸಂಚಾಲಕ ರವಿಮುಲ್ಲಚೇರಿ, ಕಾರ್ಯಾಧ್ಯಕ್ಷ ವಿಜಯ ಕುಮಾರ್, ಅಶ್ರಫ್ ಕಾರ್ಲೆ, ಪ್ರಚಾರ ಸಮಿತಿ ಅಧ್ಯಕ್ಷ ಬಿ.ಎ.ರಹಮಾನ್ ಆರಿಕ್ಕಾಡಿ, ಪಿಟಿಎ ಅಧ್ಯಕ್ಷ ಎ.ಕೆ.ಆರಿಫ್, ಪ್ರಸಾದ್ ಕುಮಾರ್ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.